ಬೇಸಿಗೆ ಸೇರಿದಂತೆ ವರ್ಷಪೂರ್ತಿ ಲೋಡ್ ಶೆಡ್ಡಿಂಗ್ ಜಾರಿ ಮಾಡದೆ ವಿದ್ಯುತ್ ಪೂರೈಕೆ

ಈ ಸುದ್ದಿಯನ್ನು ಶೇರ್ ಮಾಡಿ

Dk-Shivakumar-Session

ಬೆಳಗಾವಿ, ಡಿ.2-ಬೇಸಿಗೆ ಸೇರಿದಂತೆ ವರ್ಷಪೂರ್ತಿ ಲೋಡ್ ಶೆಡ್ಡಿಂಗ್ ಜಾರಿ ಮಾಡದೆ ಅಗತ್ಯದಷ್ಟು ವಿದ್ಯುತ್ ಪೂರೈಸಲು ಅಗತ್ಯ ಕ್ರಮಗಳನ್ನು ರಾಜ್ಯ ಸರ್ಕಾರ ತೆಗೆದುಕೊಂಡಿದೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಭರವಸೆ ನೀಡಿದರು. ಪ್ರಶ್ನೋತ್ತರ ಅವಧಿಯಲ್ಲಿ ಮದ್ದೂರು ಕ್ಷೇತ್ರದ ಶಾಸಕ ಡಿ.ಸಿ.ತಮ್ಮಣ್ಣ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ದೀರ್ಘಾವಧಿ ಹಾಗೂ ಅಲ್ಪಾವಧಿ ವಿದ್ಯುತ್ ಖರೀದಿಗೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ದೀರ್ಘಾವಧಿ ವಿದ್ಯುತ್ ಖರೀದಿಯಿಂದ ಆರ್ಥಿಕವಾಗಿ ಹೊರೆ ಬೀಳುತ್ತಿದೆ. ಹೀಗಾಗಿ ಅಲ್ಪಾವಧಿ ವಿದ್ಯುತ್ ಖರೀದಿಸಿ ರೈತರಿಗೆ ಪೂರೈಸಲು ಹೆಚ್ಚಿನ ಕ್ರಮಕೈಗೊಳ್ಳಲಾಗುತ್ತಿದೆ. ಬೇಸಿಗೆ ಸೇರಿದಂತೆ ಇಡೀ ವರ್ಷ ಲೋಡ್ಶೆಡ್ಡಿಂಗ್ ಮಾಡದಿರಲು ಸರ್ಕಾರ ನಿರ್ಧರಿಸಿದೆ. ಎಲ್ಲಾ ವರ್ಗಕ್ಕೂ ವರ್ಷಪೂರ್ತಿ ವಿದ್ಯುತ್ ಪೂರೈಸಲು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.

ಸುಮಾರು 2 ಸಾವಿರ ಕೋಟಿಯಷ್ಟು ವಿದ್ಯುತ್ ಬಾಕಿ ವಸೂಲಿಯಾಗಬೇಕಿದೆ. ಪಂಚಾಯತ್ ರಾಜ್ ಇಲಾಖೆಯಿಂದ ಒಂದು ಸಾವಿರ ಕೋಟಿ ಬಾಕಿ ಬರಬೇಕಿದೆ. ರೈತರಿಗೆ 8 ಸಾವಿರ ಕೋಟಿ ವಿದ್ಯುತ್ ಸಬ್ಸಿಡಿ ನೀಡುತ್ತಿದ್ದೇವೆ. ಇವೆಲ್ಲ ಹೊರೆಯ ನಂತರವೂ ಸರ್ಕಾರ ಕಡಿಮೆ ವೆಚ್ಚದಲ್ಲಿ ವಿದ್ಯುತ್ ಖರೀದಿಸಿ ಜನರಿಗೆ ಪೂರೈಕೆ ಮಾಡುತ್ತಿದೆ ಎಂದು ಹೇಳಿದರು. ಸರಬರಾಜಿನಲ್ಲಿನ ಸೋರಿಕೆ ತಡೆಗಟ್ಟಲು ಅಗತ್ಯ ಕ್ರಮಕೈಗೊಳ್ಳಲಾಗಿದೆ. ಬೇಸಿಗೆಯಲ್ಲಿ ಯಾವುದೇ ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಅವರು ಪುನರುಚ್ಚರಿಸಿದರು. ಪ್ರತಿಪಕ್ಷದ ನಾಯಕ ಜಗದೀಶ್ಶೆಟ್ಟರ್ ಅವರು ವಿದ್ಯುತ್ ಇಲಾಖೆ ಮುಂಜಾಗ್ರತಾ ಕ್ರಮಕೈಗೊಳ್ಳುವಲ್ಲಿ ಎಡವಿದೆ ಎಂದು ಆಕ್ಷೇಪಿಸಿದರು.

ಡಿ.ಸಿ.ತಮ್ಮಣ್ಣ ಅವರು ಗ್ರಾಮೀಣ ಭಾಗಕ್ಕೆ ಸರಿಯಾಗಿ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ ಎಂದು ಆರೋಪಿಸಿದರು. ಮುಂದಿನ ದಿನಗಳಲ್ಲಿ ವಿದ್ಯುತ್ ಕೊರತೆಯಾಗದಂತೆ ಸೂಕ್ತ ಎಚ್ಚರಿಕೆ ವಹಿಸುವುದಾಗಿ ಸಚಿವರು ಸದನಕ್ಕೆ ಭರವಸೆ ನೀಡಿದರು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin