ಇಂದು ಮತ್ತೆ ನಾಲ್ಕು ಕಡೆ ದಾಖಲೆಗಳಿಲ್ಲದ ಒಟ್ಟು 74.50 ಲಕ್ಷ ರೂ ವಶ

ಈ ಸುದ್ದಿಯನ್ನು ಶೇರ್ ಮಾಡಿ

2000-Notes

ಬೆಂಗಳೂರು,ಡಿ.3-ನೋಟು ರದ್ದಾದ ನಂತರ ಹೊಸ ನೋಟುಗಳ ಬದಲಾವಣೆ ದಂಧೆ ಹೆಚ್ಚಾಗಿದ್ದು, ಪೊಲೀಸರು ನಡೆಸಿದ ಕಾರ್ಯಾಚರಣೆ ವೇಳೆ ಬೆಂಗಳೂರು, ಮಡಿಕೇರಿ ಮತ್ತು ತುಮಕೂರಿನಲ್ಲಿ ಒಟ್ಟು 74.50 ಲಕ್ಷ ರೂ. ಹೊಸ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ನಗರದಲ್ಲಿ ರಾತ್ರಿ ಎರಡು ಕಡೆ ದಾಖಲೆಗಳಿಲ್ಲದ 30.10 ಲಕ್ಷ ರೂ. ಪತ್ತೆಯಾದರೆ, ಕೊಡಗಿನಲ್ಲಿ 34.40 ಲಕ್ಷ ರೂ. ಹಾಗೂ ತುಮಕೂರಿನಲ್ಲಿ 10 ಲಕ್ಷ ರೂ. ಸಿಕ್ಕಿದೆ.  ನಗರದ ಮಹದೇವಪುರ ಠಾಣೆ ವ್ಯಾಪ್ತಿಯಲ್ಲಿ 12.10 ಲಕ್ಷ ರೂ. ಹೆಬ್ಬಾಳ ಠಾಣೆ ವ್ಯಾಪ್ತಿಯಲ್ಲಿ 18 ಲಕ್ಷ ರೂ.ಗಳ ಹೊಸ ನೋಟುಗಳು ದೊರೆತಿವೆ. ಮಹದೇವಪುರ ಠಾಣೆ ಪೊಲೀಸರು ಆಂಧ್ರಪ್ರದೇಶ ಮೂಲದ ಮುನೇಶ್ವರಪ್ಪ ಎಂಬಾತನನ್ನು ಹಾಗೂ ಹೆಬ್ಬಾಳ ಠಾಣೆ ಪೊಲೀಸರು ಮೋಹನ್ ಮತ್ತು ಶ್ರೀಧರ್ ಎಂಬುವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಮಹದೇವಪುರ:

ಕಾರೊಂದರಲ್ಲಿ ಹೊಸ ನೋಟುಗಳನ್ನು ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಮಹದೇವಪುರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ, ಸೆಲ್ ಪೆಟ್ರೋಲ್ ಬಂಕ್ ಬಳಿ ಬರುತ್ತಿದ್ದ ಮಾರುತಿ ಆಲ್ಟೋ ಕಾರನ್ನು ತಡೆದು ಪರಿಶೀಲಿಸಿದಾಗ ದಾಖಲೆಗಳಿಲ್ಲದ ಎರಡು ಸಾವಿರ ಮುಖಬೆಲೆಯ 12.10 ಲಕ್ಷ ರೂ. ಪತ್ತೆಯಾಗಿದೆ.  ಈ ವೇಳೆ ಕಾರು ಚಾಲಕ ಪರಾರಿಯಾಗಿದ್ದು , ಸೂಕ್ತ ದಾಖಲೆಗಳಿಲ್ಲದ ಕಾರಣ ಈ ಹಣ, ಕಾರು ಹಾಗೂ ಮುನೇಶ್ವರಪ್ಪ ನನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ. ಬಹುಶಃ ಬೆಂಗಳೂರು ನಗರದಲ್ಲಿ ಹಣ ಬದಲಾವಣೆಗಾಗಿ ಕಾರಿನಲ್ಲಿ ಈ ಹಣವನ್ನು ತರುತ್ತಿದ್ದರೇ ಎಂಬ ಬಗ್ಗೆಯೂ ತನಿಖೆ ಮುಂದುವರೆದಿದೆ.

ಹೆಬ್ಬಾಳ:

ಬೆಂಗಳೂರು-ಬಳ್ಳಾರಿ ರಸ್ತೆಯ ಬ್ಯಾಪಿಸ್ಟ್ ಆಸ್ಪತ್ರೆ ಬಳಿ ಹೆಬ್ಬಾಳ ಠಾಣೆ ಪೊಲೀಸರು ಕಾರನ್ನು ತಡೆದು ಪರಿಶೀಲನೆ ಮಾಡಿದಾಗ ಸೂಕ್ತ ದಾಖಲೆಗಳಿಲ್ಲದ 18 ಲಕ್ಷ ರೂ. ಪತ್ತೆಯಾಗಿದೆ. ಘಟನೆ ಸಂಬಂಧ ಆಂಧ್ರ ಮೂಲದ ಮೋಹನ್ ಮತ್ತು ಶ್ರೀಧರ್ ಎಂಬುವವರನ್ನು ವಶಕ್ಕೆ ಪಡೆದಿದ್ದಾರೆ. ಕಾರಿನಲ್ಲಿ ಹಣ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಹೆಬ್ಬಾಳ ಪೊಲೀಸರು ಕಾರ್ಯಾಚರಣೆ ಕೈಗೊಂಡು ಬ್ಯಾಪಿಸ್ಟ್ ಆಸ್ಪತ್ರೆ ಬಳಿ ಕಾರು ತಡೆದು ಪರಿಶೀಲನೆ ಮಾಡಿದಾಗ 2000 ಮುಖಬೆಲೆಯ 10 ಲಕ್ಷ ರೂ. ಹಾಗೂ 100 ಮತ್ತು 50 ರೂ. ಮುಖಬೆಲೆಯ ನೋಟುಗಳು ಪತ್ತೆಯಾಗಿದೆ.  ಈ ಹಣಕ್ಕೆ ಸೂಕ್ತ ದಾಖಲೆ ಒದಗಿಸದ ಕಾರಣ ಹಣ, ಕಾರು ಹಾಗೂ ಈ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಮಡಿಕೇರಿ:

ರೆಸಾರ್ಟ್‍ವೊಂದರಲ್ಲಿ ಹೊಸ ನೋಟುಗಳಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಶುಂಠಿಕೊಪ್ಪ ಠಾಣೆ ಪೊಲೀಸರು ರೆಸಾರ್ಟ್ ಮೇಲೆ ದಾಳಿ ಮಾಡಿ 34.40 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ. ಇಲ್ಲಿನ ಹೊಸಕೋಟೆ ಬಳಿಯ ರೆಸಾರ್ಟ್‍ನಲ್ಲಿ ಎರಡು ಸಾವಿರ ಮುಖಬೆಲೆಯ 34.40 ಲಕ್ಷ ರೂ. ಪತ್ತೆಯಾಗಿದ್ದು , ಈ ಸಂಬಂಧ ಶನಿವಾರ ಸಂತೆಯ ಅನಂತಕುಮಾರ್, ಕುಶಾಲನಗರದ ಜಮೀಲ್ ಮತ್ತು ಶ್ರೀಧರ್ ಎಂಬುವರನ್ನು ವಶಕ್ಕೆ ಪಡೆದಿದ್ದಾರೆ.  ಈ ಹಣಕ್ಕೆ ಸೂಕ್ತ ದಾಖಲೆಗಳಿಲ್ಲದ ಕಾರಣ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದು , ಮುಂದಿನ ಕ್ರಮ ಕೈಗೊಂಡಿದ್ದಾರೆ.

ತುಮಕೂರು:

ಚಿಕ್ಕನಾಯಕನಹಳ್ಳಿಯ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ 10 ಲಕ್ಷ ರೂ. ಶಪಡಿಸಿಕೊಂಡಿದ್ದಾರೆ. ಹೊಸ ನೋಟುಗಳನ್ನು ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಆಧಾರದಲ್ಲಿ ಚಿಕ್ಕನಾಯಕನಹಳ್ಳಿಯ ಹಂದನಕೆರೆ ಸಬ್‍ಇನ್‍ಸ್ಪೆಕ್ಟರ್ ದಾಳಿ ಮಾಡಿ ದಾಖಲೆಗಳಿಲ್ಲದ 2ಸಾವಿರ ಮುಖಬೆಲೆಯ 150 ನೋಟುಗಳು ಹಾಗೂ 100 ರೂ. ಮುಖಬೆಲೆಯ 7 ಸಾವಿರ ನೋಟುಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಮಾಗಡಿ ತಾಲ್ಲೂಕಿನ ಬಾಲರಾಜ್ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin