ನಡುರಸ್ತೆಯಲ್ಲೇ ಹೊತ್ತಿ ಉರಿದ ಬಿಎಂಟಿಸಿ ಬಸ್‍ : 40 ಮಕ್ಕಳು ಪ್ರಾಣಾಪಾಯದಿಂದ ಪಾರು

ಈ ಸುದ್ದಿಯನ್ನು ಶೇರ್ ಮಾಡಿ

Bus-Fire-BMTC

ಚನ್ನಪಟ್ಟಣ,ಡಿ.3-ಶಾಲಾ ಮಕ್ಕಳನ್ನು ಕರೆದುಕೊಂಡು ಬೆಂಗಳೂರಿನಿಂದ ಶ್ರೀರಂಗಪಟ್ಟಣಕ್ಕೆ ತೆರಳುತ್ತಿದ್ದ ಬಿಎಂಟಿಸಿ ಬಸ್‍ಗೆ ಬೆಂಕಿ ಹೊತ್ತಿಕೊಂಡು ಸಂಪೂರ್ಣ ಭಸ್ಮವಾಗಿದ್ದು, ಅದೃಷ್ಟವಶಾತ್ ಅದರಲ್ಲಿದ್ದ 52 ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಂಗಳೂರು ನಗರದ ಜಾಲಹಳ್ಳಿಯ ಬಿಇಎಲ್ ಪ್ರೌಢಶಾಲೆಯ ಶಿಕ್ಷಕರು ಮತ್ತು ಸಿಬ್ಬಂದಿ ಆರು ಬಿಎಂಟಿಸಿ ಬಸ್‍ಗಳಲ್ಲಿ 300 ಮಕ್ಕಳನ್ನು ಕರೆದುಕೊಂಡು ಶ್ರೀರಂಗಪಟ್ಟಣ, ತಲಕಾಡು ಮುಂತಾದ ಸ್ಥಳಗಳಿಗೆ ಪ್ರವಾಸಕ್ಕೆ ಹೊರಟಿದ್ದರು.  ಬಸ್‍ಗಳು ಬೆಂಗಳೂರು-ಮೈಸೂರು ರಸ್ತೆಯ ಬೆಳಕೆರೆ ಗೇಟ್ ಬಳಿ ತೆರಳುತ್ತಿದ್ದಾಗ ಒಂದು ಬಸ್‍ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಜಾಗರೂಕರಾದ ಚಾಲಕ ಮತ್ತು ಶಿಕ್ಷಕರು ಮಕ್ಕಳನ್ನೆಲ್ಲ ಕೆಳಗಿಳಿಸಿದ್ದಾರೆ. ಈ ವೇಳೆ ಬಸ್‍ನಲ್ಲಿ 52 ಮಕ್ಕಳಿದ್ದರು.

ಮಕ್ಕಳೆಲ್ಲ ಕೆಳಗಿಳಿಯುತ್ತಿದ್ದಂತೆ ಬೆಂಕಿಯ ಜ್ವಾಲೆ ಗಗನಕ್ಕೆ ಚಿಮ್ಮಿದವು. ನೋಡು ನೋಡುತ್ತಿದ್ದಂತೆ ಬಿಎಂಟಿಸಿ ಬಸ್ ಧಗಧಗನೆ ಉರಿದು ಭಸ್ಮವಾಯಿತು. ಬಸ್‍ನಲ್ಲಿದ್ದ ಮಕ್ಕಳ ಊಟ, ತಿಂಡಿ ಮತ್ತಿತರ ವಸ್ತುಗಳಿದ್ದ ಲಗೇಜ್ ಬ್ಯಾಗ್‍ಗಳು ಕೂಡ ಬಸ್‍ನಲ್ಲಿ ಸುಟ್ಟು ಹೋಗಿವೆ. ಆದರೆ ಯಾರಿಗೂ ಯಾವುದೇ ಅಪಾಯವಾಗಿಲ್ಲ.  ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಆ ವೇಳೆಗೆ ಬಸ್ ಸಂಪೂರ್ಣ ಭಸ್ಮವಾಯಿತು. ಚನ್ನಪಟ್ಟಣ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಬಂದು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin