ರಾಷ್ಟ್ರೀಯ ಹೆದ್ದಾರಿಗಳ ಟೋಲ್‍ಗಳಲ್ಲಿ ಚಿಲ್ಲರೆ ಪರದಾಟ

ಈ ಸುದ್ದಿಯನ್ನು ಶೇರ್ ಮಾಡಿ

Toll-01

ಬೆಂಗಳೂರು, ಡಿ.3- ಕಳೆದ 24 ದಿನಗಳಿಂದ ಸ್ಥಗಿತಗೊಂಡಿದ್ದ ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಸಂಗ್ರಹ ಇಂದಿನಿಂದ ಪ್ರಾರಂಭವಾಗಿದ್ದು, ಚಿಲ್ಲರೆ ಸಮಸ್ಯೆ ಹೆಚ್ಚಾಗಿತ್ತು. ಟೋಲ್‍ಗಳಲ್ಲಿ ವಾಹನ ಸವಾರರು ಚಿಲ್ಲರೆಗಾಗಿ ಪರದಾಡುತ್ತಿದ್ದುದು ಕಂಡು ಬಂತು. ರಾಜ್ಯಾದ್ಯಂತ ಹಲವು ಟೋಲ್‍ಗಳಲ್ಲಿ ಚಿಲ್ಲರೆ ಸಮಸ್ಯೆಯಿಂದ ಟ್ರಾಫಿಕ್ ಜಾಮ್ ಕೂಡ ಆಗಿತ್ತು. ಕೆಲವು ಟೋಲ್‍ಗಳಲ್ಲಿ ಅಗತ್ಯವಿರುವ ಚಿಲ್ಲರೆಯನ್ನು ಮುಂಜಾಗ್ರತಾ ಕ್ರಮವಾಗಿ ಶೇಖರಿಸಿದ್ದ ಕಾರಣ ವಾಹನ ಸಂಚಾರ ಸುಗಮವಾಗಿತ್ತು. 500, 1000 ನೋಟುಗಳ ಸ್ಥಗಿತದ ಹಿನ್ನೆಲೆಯಲ್ಲಿ ಎಲ್ಲಾ ಹೆದ್ದಾರಿಗಳಲ್ಲಿ ಟೋಲ್‍ಗಳನ್ನು ಫ್ರೀ ಮಾಡಲಾಗಿತ್ತು.

ಇಂದಿನಿಂದ ಟೋಲ್‍ಗಳಲ್ಲಿ ಶುಲ್ಕ ಸಂಗ್ರಹಕ್ಕೆ ಅನುಮತಿ ನೀಡಲಾಗಿದ್ದು, ಚಿಲ್ಲರೆ ನೀಡಿ ವಾಹನಗಳು ಮುಂದಕ್ಕೆ ಹೋಗಬೇಕಾಗಿದೆ. ಲಾರಿ, ಟೆಂಪೋ ಟ್ರ್ಯಾಕ್ಸ್ , ಬಸ್‍ಗಳು ಬಹುತೇಕ ಕಡೆ ಟೋಲ್ ನೀಡಿ ಹೋಗಬೇಕಾಗಿದ್ದರಿಂದ ಹೆದ್ದಾರಿಯ ಟೋಲ್ ಬಳಿ ಸಂಚಾರ ದಟ್ಟಣೆ ಹೆಚ್ಚಾಗಿತ್ತು. ಹಾಸನದಿಂದ ಬೆಂಗಳೂರಿಗೆ ತೆರಳುವ ಮಾರ್ಗ ಮಧ್ಯದಲ್ಲಿ 6 ಟೋಲ್‍ಗಳು ಬರುತ್ತವೆ. ಈ ಭಾಗದಲ್ಲಿ ಚಿಲ್ಲರೆ ಸಮಸ್ಯೆ ಹೆಚ್ಚಾಗಿ ಕಾಡುತ್ತಿತ್ತು. ಹಲವೆಡೆ ಚಿಲ್ಲರೆ ಸಿಗದಿದ್ದರಿಂದ 5 ರೂ. 10 ರೂ. ನ ಚಾಕೆಲ್ ನೀಡಿ ಕಳುಹಿಸುತ್ತಿದ್ದರು. ಎಲ್ಲೆಡೆ ಚಿಲ್ಲರೆ ಸಮಸ್ಯೆ ಇದ್ದುದರಿಂದ ಜನರು ಕೂಡ ಚಿಲ್ಲರೆಗಾಗಿ ಟೋಲ್ ಸಿಬ್ಬಂದಿ ಜತೆ ವಾಗ್ವಾದಕ್ಕೆ ಇಳಿಯಲಿಲ್ಲ. ಹೊಂದಾಣಿಕೆ ಮಾಡಿಕೊಂಡು ಪ್ರಯಾಣ ಮಾಡುತ್ತಿದ್ದುದು ಕಂಡು ಬಂತು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin