ಬಾಂಗ್ಲಾದಲ್ಲಿ 25ಕ್ಕೂ ಹೆಚ್ಚು ಹಿಂದೂ ಮನೆಗಳಿಗೆ ಬೆಂಕಿಯಿಟ್ಟ ದುಷ್ಕರ್ಮಿಗಳು

ಈ ಸುದ್ದಿಯನ್ನು ಶೇರ್ ಮಾಡಿ

Bangladesh-01

ಢಾಕಾ, ಡಿ.4-ಸುಮಾರು 25ಕ್ಕೂ ಹೆಚ್ಚು ಹಿಂದೂಗಳ ಮನೆಗಳಿಗೆ ಅಪರಿಚಿತ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಘಟನೆ ಬಾಂಗ್ಲಾದೇಶದ ದಿನಾಚ್‍ಪುರ್‍ನಲ್ಲಿ ನಿನ್ನೆ ನಡೆದಿದೆ. ಅಲ್ಪಸಂಖ್ಯಾತರ ಮೇಲೆ ಪದೇ ಪದೇ ದಾಳಿ ನಡೆಯುತ್ತಿರುವುದರಿಂದ ಹಿಂದುಗಳು ಹೆದರಿ ಕಂಗಾಲಾಗಿದ್ದಾರೆ. ಡೈಲಿ ಸ್ಟಾರ್ ವರದಿ ಪ್ರಕಾರ, ದಿನಾಚ್‍ಪುರ್ ಜಿಲ್ಲೆಯ ಬೋಚಾಗಂಜ್ ಉಪಜಿಲ್ಲೆಯ ರೈಲ್ವೆ ಕಾಲೋನಿ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿನ 25ಕ್ಕೂ ಹೆಚ್ಚು ಹಿಂದು ಕುಟುಂಬಗಳ ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ದುಷ್ಕರ್ಮಿಗಳ ಅಗ್ನಿಸ್ಪರ್ಶದಿಂದ ಯಾರೊಬ್ಬರಿಗೂ ಅಪಾಯವಾಗಿಲ್ಲ.  ಈ ಕೃತ್ಯಕ್ಕೆ ಸಂಬಂಧಿಸಿದಂತೆ ಜೆವೆಲ್ ಎಂಬಾತನನ್ನು ಸ್ಥಳೀಯರು ಸೆರೆಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ವರ್ಷ ಆರಂಭದಲ್ಲಿ ದುರ್ಗಾಪೂಜೆ ನಡೆದ ಸಂದರ್ಭದಲ್ಲಿ ಜೆವೆಲ್, ಆತನ ಸಂಗಡಿಗರು ಮತ್ತು ಹಿಂದುಗಳ ನಡುವೆ ಘರ್ಷಣೆ ನಡೆದಿತ್ತು. ಆಗ ಆತ ಬೆದರಿಕೆ ಹಾಕಿದ್ದ ಎಂದು ಸ್ಥಳೀಯರು ಆರೋಪಿಸಿದ್ದಾರೆ ಎಂದು ವರದಿ ತಿಳಿಸಿದೆ.

ಕಳೆದ ಅಕ್ಟೋಬರ್ 15ರಂದು ಫೇಸ್‍ಬುಕ್‍ನಲ್ಲಿ ಇಸ್ಲಾಂಗೆ ಅವಹೇಳನ ಮಾಡಿರುವುದಾಗಿ ಆರೋಪಿಸಿ ಬಾಂಗ್ಲಾದೇಶದಲ್ಲಿರುವ ಸುಮಾರು 20 ಹಿಂದು ದೇವಾಲಯಗಳನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದರು.  ಭಾರತದೊಂದಿಗೆ ಬಾಂಧವ್ಯ ಬಲವರ್ಧನೆಯಾಗುತ್ತಿರುವ ಸಂದರ್ಭದಲ್ಲೇ ದುಷ್ಕರ್ಮಿ ಹಿಂದು ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಸಿರುವ ಕೃತವನ್ನು ಗಂಭೀರವಾಗಿ ಪರಿಗಣಿಸಿರುವ ಬಾಂಗ್ಲಾದೇಶ ಸರ್ಕಾರವು, ದುಷ್ಕರ್ಮಿಗಳನ್ನು ಸೆರೆಹಿಡಿದರೆ 1,00,000 ಟಾಕಾ (1,265 ಡಾಲರ್‍ಗಳು) ಬಹುಮಾನ ನೀಡುವುದಾಗಿ ಸಹ ಘೋಷಿಸಿತ್ತು.

ಬಾಂಗ್ಲಾದೇಶದ ಬ್ರಹ್ಮನ್‍ಬರಿಯಾ ಜಿಲ್ಲೆಯಲ್ಲಿ ದೀಪಾವಳಿ ಹಬ್ಬದ ದಿನದಂದೇ ದುಷ್ಕರ್ಮಿಗಳು ಅಲ್ಪಸಂಖ್ಯಾತ ಹಿಂದು ಸಮುದಾಯದ ಮೇಲೆ ದಾಳಿ ನಡೆಸಿ ಹಲ್ಲೆ ಮಾಡಿ, ದೇವಾಲಯಗಳಿಗೆ ಬೆಂಕಿ ಹಚ್ಚಲಾಗಿತ್ತು. ಈ ಘಟನೆಯನ್ನು ಪ್ರಧಾನಿ ಶೇಖ್ ಹಸೀನಾ ಖಂಡಿಸಿ ತಪ್ಪಿತಸ್ಥರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು.  ಈ ಹಿನ್ನೆಲೆಯಲ್ಲಿ ಜಿಲ್ಲೆಯ ಹಿಂಸಾಚಾರಪೀಡಿತ ಹಿಂದು ಪ್ರದೇಶಗಳಲ್ಲಿ ಧ್ವನಿವರ್ಧಕಗಳ ಮೂಲಕ ಘೋಷಣೆ ಮಾಡುತ್ತಿರುವ ಬ್ರಹ್ಮಾನ್‍ಬರಿಯಾ ವಿಭಾಗದ ಪೊಲೀಸರು ಅಲ್ಪಸಂಖ್ಯಾತರಿಗೆ ಅಭಯ ನೀಡಿ, ದುಷ್ಕರ್ಮಿಗಳ ಬಂಧನಕ್ಕೆ ನೆರವಾಗುವ ಯಾವುದೇ ಸುಳಿವು ನೀಡಿದವರಿಗೆ ಬಹುಮಾನ ನೀಡುವುದಾಗಿ ಪ್ರಕಟಿಸಿದ್ದರು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin