ಶೇ.90ರಷ್ಟು ಎಟಿಎಂಗಳಲ್ಲಿ ನೋ ಕ್ಯಾಶ್ : ಸ್ಯಾಲರಿ ಸಿಗದೇ ಜನರ ಪರದಾಟ

ಈ ಸುದ್ದಿಯನ್ನು ಶೇರ್ ಮಾಡಿ

ATM-No-Cash

ಬೆಂಗಳೂರು,ಡಿ.4-ನೋಟು ನಿಷೇಧ ಮಾಡಿ ಬರೋಬ್ಬರಿ 25 ದಿನ ಕಳೆದರೂ ಹೊಸ ನೋಟು ಪಡೆಯಲು ಸಾರ್ವಜನಿಕರ ಪರದಾಟ ಇನ್ನೂ ತಪ್ಪಿಲ್ಲ. ಬ್ಯಾಂಕುಗಳಿಗೆ, ಎಟಿಎಂಗಳಿಗೆ ನಿರಂತರ ಅಲೆದಾಟ ಮುಂದೆವರೆದಿದೆಯಾದರೂ ಹೊಸ ನೋಟುಗಳು ಸಿಗದೆ ಬಡ ಹಾಗೂ ಮಧ್ಯಮ ವರ್ಗದವರು ಸಂಕಷ್ಟಕ್ಕಿಡಾಗಿದ್ದಾರೆ. ಶೇ.90ರಷ್ಟು ಎಟಿಎಂಗಳ ಮುಂದೆ ನೋ ಕ್ಯಾಶ್ ಬೋರ್ಡ್ ರಾರಾಜಿಸುತ್ತಿದೆ. ಕೆಲವು ಎಟಿಎಂಗಳಲ್ಲಿ ಸಿಗುವ ಹಣಕ್ಕಾಗಿ ಜನ ಮುಗಿಬೀಳುತ್ತಿದ್ದಾರೆ. ಹಲವು ಎಟಿಎಂಗಳಲ್ಲಿ ಹಣ ಹಾಕಿದ ಅರ್ಧ ಗಂಟೆಗಳಲ್ಲೇ ಖಾಲಿಯಾಗುತ್ತಿದೆ. ಪ್ರತಿಯೊಬ್ಬ ಗ್ರಾಹಕರಿಗೂ ಕೇವಲ 2 ಸಾವಿರದಷ್ಟು ಮಾತ್ರ ಹಣ ಪೂರೈಕೆ ಮಾಡಲು ಸಾಧ್ಯವಾಗುತ್ತಿದೆ. ಎಲ್ಲ ಎಟಿಎಂಗಳ ಮುಂದೆ ಬೆಳ್ಳಂ ಬೆಳಗ್ಗೆ ಬಂದ ಜನ ನಿರಾಸೆಯಿಂದ ಹಿಂದಿರುಗುತ್ತಿದ್ದಾರೆ.

ನಗರ ಪ್ರದೇಶಗಳಲ್ಲಿ ಬಹುರಾಷ್ಟ್ರೀಯ ಕಂಪನಿ ನೌಕರರು, ಗಾರ್ಮೆಂಟ್ಸ್ ನೌಕರರು, ಸಂಘಟಿತ-ಅಸಂಘಟಿತ ವಲಯದ ಕಾರ್ಮಿಕರು, ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರು, ಪಿಂಚಣಿದಾರರು ತಮ್ಮ ವೇತನ ಪಡೆಯಲು ಹರಸಾಹಸ ಪಡುತ್ತಿದ್ದಾರೆ. ಬ್ಯಾಂಕ್‍ಗಳಲ್ಲಿ ಹಣ ವಿತ್‍ಡ್ರಾ ಮಾಡಲು ಹೆಣಗಾಡಬೇಕಾದ ಪರಿಸ್ಥಿತಿ ಮುಂದುವರೆದಿದ್ದು ಇಂದು ಭಾನುವಾರವಾದ್ದರಿಂದ ಎಟಿಎಂಗಳಲ್ಲಿ ಹಣ ಪೂರೈಕೆ ಮಾಡಬಹುದೆಂಬ ನಿರೀಕ್ಷೆ ಇತ್ತಾದರೂ ಬಹುತೇಕ ಎಟಿಎಂಗಳು ಬಾಗಿಲು ಹಾಕಿದ್ದು ಕಂಡು ಬಂತು.

ಇದು ಎಲ್ಲ ನಗರ ಪ್ರದೇಶಗಳ ಚಿತ್ರಣವಾದರೆ, ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಸಂಪೂರ್ಣ ಹಣದ ವಹಿವಾಟು ನಿಂತು ಹೋಗಿದೆ. ಇಲ್ಲಿ ಎಟಿಎಂಗಳಿಲ್ಲ. ಎಲ್ಲ ವಹಿವಾಟು ನಡೆಸಲು ಹತ್ತಿರದ ಬ್ಯಾಂಕ್‍ಗಳಿಗೆ ಬರಬೇಕು. ರೈತರ ಕೃಷಿ ಚಟುವಟಿಕೆಗಳಿಗೆ ಅಗತ್ಯ ಹಣ ದೊರೆಯುತ್ತಿಲ್ಲ. ನೋಟು ನಿಷೇಧವಾಗಿರುವುದರಿಂದ ಗ್ರಾಮೀಣ ಪ್ರದೇಶಗಳ ಜನರಲ್ಲಿದ್ದ ಅಲ್ಪಸ್ವಲ್ಪ ಹಣವನ್ನು ಬ್ಯಾಂಕ್‍ಗಳಲ್ಲಿ ಠೇವಣಿ ಇಟ್ಟು ವಾಪಸ್ ಪಡೆಯಲಾರದೆ ಪಜೀತಿ ಪಡುತ್ತಿದ್ದಾರೆ. ಇನ್ನೂ ಕೆಲವೆಡೆ ಹೊಸ 2 ಸಾವಿರ ಮುಖಬೆಲೆಯ ನೋಟು ಪಡೆದು ಚಿಲ್ಲರೆ ದೊರೆಯದೆ ಸಂಕಷ್ಟದಲ್ಲಿದ್ದಾರೆ. ದಿನವಹಿ ಬದುಕು ಸಾಗಿಸಲು ವ್ಯಾಪಾರ ವಹಿವಾಟಿಗೆ, ಸಂತೆ ಮತ್ತಿತರೆ ಕೆಲಸಗಳಿಗೆ ಹಣವಿಲ್ಲದೆ ಜನ ಕಂಗಾಲಾಗಿದ್ದಾರೆ.

ಎಟಿಎಂ ಕಾರ್ಡ್ ಬಳಸಬೇಕು. ಎಲ್ಲವನ್ನು ಡೆಬಿಟ್,ಕ್ರೆಡಿಟ್ ಕಾರ್ಡ್‍ಗಳ ಮೂಲಕ ಮಾಡಬೇಕೆಂದು ಪ್ರಧಾನಿಯವರು ಕರೆ ಕೊಟ್ಟಿದ್ದಾರೆ. ಇಲ್ಲಿ ಕಾರ್ಡ್‍ಗಳೇ ಇಲ್ಲ, ಬಳಕೆಯ ಜ್ಞಾನವೂ ಇಲ್ಲ. ಹೇಗೆ ಮಾಡುವುದು ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ. ಹಾಗೆಂದ ಮಾತ್ರಕ್ಕೆ ಈ ವ್ಯವಸ್ಥೆಯನ್ನು ನಿಲ್ಲಿಸಲು ಸಾಧ್ಯವಿಲ್ಲ. ಪ್ರಾರಂಭದಲ್ಲಿ ತೊಂದರೆಯಾಗಬಹುದು. ಹಂತ ಹಂತವಾಗಿ ಸರಿ ಹೋಗುತ್ತದೆ.ಅಗತ್ಯ ಹಣವನ್ನು ಬ್ಯಾಂಕ್‍ಗಳ ಮೂಲಕ ಸಾರ್ವಜನಿಕರಿಗೆ ಸರ್ಕಾರ ಪೂರೈಸಬೇಕು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin