ಗುಂಡೇಟು ತಗುಲಿದ್ದ ಕಾಡಾನೆ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Elephant-01

ಕನಕಪುರ, ಡಿ.7- ಕೆರೆಯಲ್ಲಿ ನೀರು ಕುಡಿಯಲು ಬಂದು ದುಷ್ಕರ್ಮಿಗಳ ಗುಂಡೇಟಿಗೆ ಸಿಲುಕಿ ನರಳಾಡುತ್ತಿದ್ದ ಕಾಡಾನೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ.
ಘಟನೆ ಹಿನ್ನೆಲೆ:ತಾಲ್ಲೂಕಿನ ಗಡಿಭಾಗದ ನೆರಳಟ್ಟಿ ಗ್ರಾಮದ ಕೆರೆಗೆ ಬನ್ನೇರುಘಟ್ಟ ಅರಣ್ಯ ಪ್ರದೇಶದಿಂದ ಕಾಡಾನೆ ನೀರು ಕುಡಿಯಲು ಬಂದಿತ್ತು. ಈ ವೇಳೆ ದುಷ್ಕರ್ಮಿಗಳ ಗುಂಡೇಟಿಗೆ ಸಿಕ್ಕಿ ಕೆರೆಯಿಂದ ಹೊರಬಂದು ಜಾಲಿಯ ಮರದ ಕೆಳಗೆ ಬಿದ್ದು ನರಳಾಡುತ್ತಿದುದ್ದನ್ನು ಗಮನಿಸಿದ ಸ್ಥಳೀಯರು ಅರಣ್ಯ ಇಲಾಖೆ ಮತ್ತು ಪೆÇಲೀಸರಿಗೆ ಮಾಹಿತಿ ನೀಡಿದ್ದಾರೆ.

ತಕ್ಷಣ ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ಮತ್ತು ಪೊಲೀಸರು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಆನೆ ತಜ್ಞರನ್ನು ಬರ ಮಾಡಿಕೊಂಡು ಚಿಕಿತ್ಸೆ ನೀಡಲಾಯಿತು. ಆದರೆ, ಗುಂಡೇಟಿನಿಂದ ತೀವ್ರ ಗಾಯವಾಗಿದ್ದ ಕಾಡಾನೆ ಚಿಕಿತ್ಸೆ ಫಲಿಸದೆ ಇಂದು ಸಾವನ್ನಪ್ಪಿದೆ. ಈ ಭಾಗದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಕಳ್ಳ ಬೇಟೆಗಾರರ ಹಾವಳಿ ಹೆಚ್ಚಾಗಿದ್ದು, ಬೇಟೆಯಾಡುವ ಸಂದರ್ಭದಲ್ಲಿ ಆನೆಗೆ ಗುಂಡಿಕ್ಕಿರಬಹುದು ಎಂದು ಶಂಕಿಸಲಾಗಿದೆ. ಇಲ್ಲಿಗೆ ಬನ್ನೇರುಘಟ್ಟ ಅರಣ್ಯ ಪ್ರದೇಶ ಸಮೀಪ ಇರುವುದರಿಂದ ಕೆಲವು ಬೇಟೆಗಾರರು ಕಾಡು ಪ್ರಾಣಿಗಳಾದ ಕಾಡು ಹಂದಿ, ಮೊಲ ಮುಂತಾದವುಗಳನ್ನು ಬೇಟೆಯಾಡಿ ಮಾರಾಟ ಮಾಡುವುದನ್ನು ವೃತ್ತಿಯನ್ನಾಗಿಸಿಕೊಂಡಿದ್ದಾರೆ.

ಆದ್ದರಿಂದ ಈ ಭಾಗದಲ್ಲಿ ಬೇಟೆಗಾರರ ಹಾವಳಿ ಹೆಚ್ಚಿದದು, ಇದನ್ನು ನಿಯಂತ್ರಿಸಲು ಅರಣ್ಯ ಇಲಾಖೆ ಹಾಗೂ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಇದೇ ವೇಳೆ ಆಗ್ರಹಿಸಿದ್ದಾರೆ. ಕಾಡಾನೆಗೆ ಗುಂಡಿಕ್ಕಿ ಕೊಂದಿರುವ ದುಷ್ಕರ್ಮಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆರ್‍ಎಫ್‍ಒ ರವಿಕುಮಾರ್ ಹಾಗೂ ಅರಣ್ಯಾಧಿಕಾರಿಗಳನ್ನು ಸ್ಥಳೀಯರು ಒತ್ತಾಯಿಸಿದ್ದಾರೆ. ಈ ಸಂಬಂಧ ಕೊಡಿಗೆಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin