ನೋಟ್ ಬ್ಯಾನ್ ನಂತರ 2000 ಕೋಟಿ ರೂ. ಕಪ್ಪುಹಣ ಪತ್ತೆ : ಇಲ್ಲೂ ಬೆಂಗಳೂರಿಗರದ್ದೇ ಮೇಲುಗೈ

ಈ ಸುದ್ದಿಯನ್ನು ಶೇರ್ ಮಾಡಿ

Notes-01

ನವದೆಹಲಿ,ಡಿ.7-ಪ್ರಧಾನಿ ನರೇಂದ್ರಮೋದಿ ಕಳೆದ ತಿಂಗಳು ದೇಶಾದ್ಯಂತ 500 ಹಾಗೂ 1000 ಮುಖಬೆಲೆಯ ನೋಟುಗಳ ಚಲಾವಣೆಗೆ ನಿಷೇಧ ಹೇರಿದ ನಂತರ ಈವರೆಗೂ ಎರಡು ಸಾವಿರ ಕೋಟಿ ಕಪ್ಪು ಹಣ ಪತ್ತೆಯಾಗಿದೆ.  ವಿಶೇಷವೆಂದರೆ ಐಟಿಬಿಟಿ ರಾಜಧಾನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬೆಂಗಳೂರಿನಲ್ಲೇ ಅತಿಹೆಚ್ಚು ಪ್ರಕರಣಗಳು(18) ದಾಖಲಾಗಿವೆ. ದೇಶಾದ್ಯಂತ ಒಟ್ಟು 30 ಪ್ರಕರಣಗಳನ್ನು ಆದಾಯ ತೆರಿಗೆ(ಐಟಿ) ಜಾರಿ ನಿರ್ದೇಶನಾಲಯ ಹಾಗೂ ಸಿಬಿಐ ಪ್ರತ್ಯೇಕವಾಗಿ ತನಿಖೆ ನಡೆಸಲು ಮುಂದಾಗಿದೆ.  ಬೆಂಗಳೂರು(18), ಭೂಪಾಲ್(4), ದೆಹಲಿ(4), ಮುಂಬೈ(2), ಅಹಮದಾಬಾದ್ ಮತ್ತು ಸೂರತ್‍ನಲ್ಲಿ ತಲಾ ಒಂದೊಂದು ಪ್ರಕರಣಗಳು ದಾಖಲಾಗಿವೆ.

ಈ ಎಲ್ಲ ಪ್ರಕರಣಗಳನ್ನು ಅಕ್ರಮ ಹಣ ವಹಿವಾಟು ತಡೆಕಾಯ್ದೆಯಡಿ ದಾಖಲಿಸಲಾಗಿದ್ದು , 20ಕ್ಕೂ ಹೆಚ್ಚು ಪ್ರಕರಣಗಳನ್ನು ಇಡಿ ಮತ್ತು ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಕಳೆದ ನವೆಂಬರ್ 8ರಂದು ನರೇಂದ್ರ ಮೋದಿಯವರು ಇದ್ದಕ್ಕಿದ್ದಂತೆ 500 ಮತ್ತು 1000 ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ನಿಷೇಧ ಹೇರಿದ್ದರು. ಇದಾದ ಬಳಿಕ ಬೆಂಗಳೂರು, ಭೂಪಾಲ್, ಕೊಲ್ಕತ್ತ, ದೆಹಲಿ ಮತ್ತಿತರ ಕಡೆ ಕಾನೂನು ಬಾಹಿರವಾಗಿ 100 ಮತ್ತು ಎರಡು ಸಾವಿರ ಮುಖಬೆಲೆಯ ನೋಟುಗಳು ಸಿಕ್ಕಿಬಿದ್ದಿದ್ದವು.

ಕಳೆದವಾರವಷ್ಟೇ ಬೆಂಗಳೂರಿನಲ್ಲಿ ಇಬ್ಬರು ಸರ್ಕಾರಿ ಅಧಿಕಾರಿಗಳಾದ ಚಿಕ್ಕರಾಯಪ್ಪ ಮತ್ತು ಎಸ್.ಸಿ.ಜಯಚಂದ್ರ ಅವರ ನಿವಾಸ ಹಾಗೂ ಕಚೇರಿಗಳಲ್ಲಿ 4.75 ಕೋಟಿ ನಗದು, 7 ಕೆಜಿ ಚಿನ್ನದಗಟ್ಟಿ , ಇಷ್ಟೇ ಪ್ರಮಾಣದ ಚಿನ್ನಾಭರಣಗಳು ಹಾಗೂ 156 ಅಕ್ರಮ ಆಸ್ತಿ ಪತ್ತೆಯಾಗಿತ್ತು.  ಇದರ ಜೊತೆಗೆ ಮುಂಬೈನಲ್ಲಿ 80 ಲಕ್ಷ ಲೂದಿಯಾನದಲ್ಲಿ 72 ಲಕ್ಷ, ಹೈದರಾಬಾದ್‍ನಲ್ಲಿ 92 ಲಕ್ಷ, ಭೂಪಾಲ್‍ನಲ್ಲಿ 10 ಲಕ್ಷ ಮೌಲ್ಯದ ಎರಡು ಸಾವಿರ ಮುಖಬೆಲೆಯ ನೋಟುಗಳು ಸಿಕ್ಕಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿರುವ ತನಿಖಾ ಸಂಸ್ಥೆಗಳು ಪ್ರತ್ಯೇಕವಾಗಿ ತನಿಖೆಗೆ ಮುಂದಾಗಿವೆ.

ಈ ಪ್ರಕರಣದಲ್ಲಿ ಕೆಲವು ಬ್ಯಾಂಕ್ ಅಧಿಕಾರಿಗಳು ಶಾಮೀಲಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಈಗಾಗಲೇ ಸಿಬಿಐ ಕೆಲವು ಬ್ಯಾಂಕ್ ಅಧಿಕಾರಿಗಳನ್ನು ಬಂಧಿಸಿ ಅವರ ವಿರುದ್ದ ಎಫ್‍ಐಆರ್ ದಾಖಲಿಸಿದ್ದಾರೆ.  ಕಮಿಷನ್ ಆಸೆಗಾಗಿ ಕೆಲ ಬ್ಯಾಂಕ್ ಅಧಿಕಾರಿಗಳೇ 100 ಮತ್ತು 2000 ಮುಖಬೆಲೆಯ ನೋಟುಗಳನ್ನು ಮಧ್ಯವರ್ತಿಗಳ ಮೂಲಕ ತಲುಪಿಸಿರಬಹುದೆಂಬ ಶಂಕೆ ವ್ಯಕ್ತವಾಗಿದೆ.  ಇದೀಗ ಐಟಿ, ಇಡಿ ಮತ್ತು ಸಿಬಿಐ ಪ್ರತ್ಯೇಕವಾಗಿ ಕಪ್ಪು ಕುಳಗಳನ್ನು ಖೆಡ್ಡಾಕ್ಕೆ ಬೀಳಿಸಲು ಮುಂದಾಗಿದೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin