ಸಿದ್ದರಾಮಯ್ಯ, ಮಹದೇವಪ್ಪ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

BJP-Protest

ಬೆಂಗಳೂರು,ಡಿ.7- ಇಬ್ಬರು ಉನ್ನತ ಸರ್ಕಾರಿ ಅಧಿಕಾರಿಗಳಾದ ಚಿಕ್ಕರಾಯಪ್ಪ ಮತ್ತು ಜಯಚಂದ್ರ ಅವರು ಅಕ್ರಮ ಆಸ್ತಿ ಸಂಪಾದನೆ ಆರೋಪದ ಮೇಲೆ ಆದಾಯ ತೆರಿಗೆ ಅಧಿಕಾರಿಗಳ ದಾಳಿಗೊಳಗಾಗಿರುವುದರಿಂದ ಮುಖ್ಯಮಂತ್ರಿ ಮತ್ತು ಲೋಕೋಪಯೋಗಿ ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಬಿಜೆಪಿ ಯುವ ಮೋರ್ಚ ಪ್ರತಿಭಟನೆ ನಡೆಸಿತು.   ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಯುವ ಮೋರ್ಚ ರಾಜ್ಯ ಉಪಾಧ್ಯಕ್ಷ ಭೀಮಾಶಂಕರ ಪಾಟೀಲ್, ಕಾರ್ಯದರ್ಶಿ ಹರೀಶ್ ಗೌಡ, ಪ್ರವೀಣ್, ಪ್ರಸಾದ್ ರೆಡ್ಡಿ , ರಾಜೇಂದ್ರ ದಿನೇಶ್ ಸೇರಿದಂತೆ ಅನೇಕ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ರಾಜೀನಾಮೆ ನೀಡುವಂತೆ ಒತ್ತಾಯಿಸಿದರು.

ಐಟಿ ಅಧಿಕಾರಿಗಳ ದಾಳಿ ವೇಳೆ ಈ ಇಬ್ಬರ ನಿವಾಸ ಮತ್ತು ಕಚೇರಿಗಳಲ್ಲಿ 156 ಕೋಟಿ ಅಕ್ರಮ ಆಸ್ತಿ, 4.75 ಕೋಟಿ 100 ಮತ್ತು 2000 ಮುಖಬೆಲೆಯ ನೋಟುಗಳು, 7 ಕೆಜಿ ಚಿನ್ನದ ಗಟ್ಟಿ ಅಷ್ಟೇ ಪ್ರಮಾಣದ ಚಿನ್ನಾಭರಣಗಳು ಸಿಕ್ಕಿವೆ. ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಚಿಕ್ಕರಾಯಪ್ಪ ಹಾಗೂ ರಾಜ್ಯ ಹೆದ್ದಾರಿ ಯೋಜನಾಧಿಕಾರಿ ಎಚ್.ಸಿ.ಜಯಚಂದ್ರ ಅವರುಗಳು ಮುಖ್ಯಮಂತ್ರಿ ಮತ್ತು ಲೋಕೋಪಯೋಗಿ ಸಚಿವರಿಗೆ ಪರಮಾಪ್ತರಾಗಿದ್ದಾರೆ. ಈ ಇಬ್ಬರು ಅಧಿಕಾರಿಗಳು ಇಷ್ಟು ದೊಡ್ಡ ಮೊತ್ತದ ಅಕ್ರಮ ಆಸ್ತಿ ಸಂಪಾದಿಸಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ದೂರಿದರು.

ಪ್ರತಿಭಟನೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಭೀಮಾಪಾಟೀಲ್, ಸರ್ಕಾರ ಈ ಪ್ರಕರಣವನ್ನು ಮುಚ್ಚಿ ಹಾಕಲು ಮುಂದಾಗಿದೆ. ಕೇವಲ ಎಫ್‍ಐಆರ್‍ನಲ್ಲಿ ಜಯಚಂದ್ರ ಅವರ ಹೆಸರು ಸೇರ್ಪಡೆಯಾಗಿದ್ದು , ಚಿಕ್ಕರಾಯಪ್ಪ ಅವರ ಹೆಸರನ್ನು ಕೈ ಬಿಡಲಾಗಿದೆ. ಸರ್ಕಾರ ಮುಚ್ಚಿ ಹಾಕಲು ವ್ಯವಸ್ಥಿತ ಪಿತೂರಿ ನಡೆದಿದೆ ಎಂದು ದೂರಿದರು.  ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ರಾಜೀನಾಮೆ ನೀಡದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin