ತಾಳಿ ಕಟ್ಟುವ ಶುಭವೇಳೆ, ನಕಲಿ ಕೆಎಎಸ್ ಆಫೀಸರ್‍ ಕೈಗಳಿಗೆ ಪೊಲೀಸರ ಸಂಕೋಲೆ..!

ಈ ಸುದ್ದಿಯನ್ನು ಶೇರ್ ಮಾಡಿ

Police-Arrest

ಚಿಕ್ಕಬಳ್ಳಾಪುರ, ಡಿ.8– ಎಸ್‍ಎಸ್‍ಎಲ್‍ಸಿ ನಪಾಸಾದ ಖತರ್ನಾಕ್ ಯುವಕನೊಬ್ಬ ತಾನು ಕೆಎಎಸ್ ಅಧಿಕಾರಿ. ಕೆಎಸ್‍ಎಸ್‍ಐಡಿಸಿ ಇಲಾಖೆಯಲ್ಲಿ ಉನ್ನತ ಉದ್ಯೋಗದಲ್ಲಿದ್ದೇನೆ ಎಂದು ಬುರುಡೆ ಬಿಟ್ಟು ಬೆಂಗಳೂರಿನ ಸಾಫ್ಟ್‍ವೇರ್ ಉದ್ಯೋಗಿ ಯುವತಿಯನ್ನು ನಂಬಿಸಿ ಮದುವೆಗೆ ಮುಂದಾಗಿ ಸಿಕ್ಕಿಬಿದ್ದು ಪೊಲೀಸರ ಅತಿಥಿಯಾಗಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ತಾನು ಕೆಎಎಸ್ ಆಫೀಸರ್ ಎಂದು ಸುಳ್ಳು ಹೇಳಿದ್ದ ವರಮಹಾಶಯ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ರೆಡ್ಡಿಹಳ್ಳಿ ನಿವಾಸಿ ಅಶ್ವತ್ಥನಾರಾಯಣ್ ಈಗ ಪೊಲೀಸರ ಅತಿಥಿಯಾಗಿದ್ದಾನೆ.

ಹಸೆಮಣೆ ಏರಬೇಕಾಗಿದ್ದ ಈತನ ನಿಜಬಣ್ಣ ಕೊನೆ ಕ್ಷಣದಲ್ಲಿ ಬಯಲಾಗಿ ಜೈಲಿನ ಕಂಬಿ ಎಣಿಸುವಂತಾಗಿದೆ. ಮದುಮಗಳ ನಸೀಬು ಚೆನ್ನಾಗಿತ್ತು ಎಂದು ಕಾಣುತ್ತದೆ. ಈತನ ಕತರ್ನಾಕ್ ಐಡಿಯಾ ಕೊನೆ ಕ್ಷಣದಲ್ಲಿ ಬಹಿರಂಗಗೊಂಡು ಯುವತಿ ಬಚಾವ್ ಆಗಿದ್ದಾಳೆ.  ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡಿ ಎನ್ನೋದು ದೊಡ್ಡವರು ಆಡುವ ಮಾತು. ಆದರೆ, ಅದೇ ಮಾತನ್ನು ಚಾಚೂತಪ್ಪದೆ ಪಾಲಿಸಲು ಮುಂದಾದ ಈ ವರ ಮಹಾಶಯ ಸುಳ್ಳು ಹೇಳಿ ಪೊಲೀಸರ ಅತಿಥಿಯಾಗಿದ್ದಾನೆ.

ವರನ ಧಿರಿಸಿನಲ್ಲಿ ಕಲ್ಯಾಣಮಂಟಪಕ್ಕೆ ಬಂದ ಈ ಮಹಾಶಯನಿಗೆ ವಧುವಿನ ಕಡೆಯವರು ಮಂಗಳಾರತಿ ಮಾಡಿ ಬರಮಾಡಿಕೊಳ್ಳುವ ಬದಲು ಈತನ ಕುಕೃತ್ಯದಿಂದ ಪೊಲೀಸ್ ಠಾಣೆ ದಾರಿ ತೋರಿಸಿದ್ದಾರೆ.  ಬೆಂಗಳೂರಿನ ಸಾಫ್ಟ್‍ವೇರ್ ಉದ್ಯೋಗಿ ಯುವತಿಯನ್ನು ಮದುವೆಯ ಬ್ರೋಕರ್ ಒಬ್ಬನ ಮೂಲಕ ಈತ ಬಲೆಗೆ ಹಾಕಿಕೊಂಡ. ಆಕೆಯ ಮನೆಗೆ ನಾಲ್ಕೈದು ಬಾರಿ ಹೋಗಿ ಮನೆಯವರನ್ನೂ ನಂಬಿಸಿದ. ಈತನ ನಿಜಬಣ್ಣ ಗೊತ್ತಾಗದ ಯುವತಿ ಮನೆಯವರು ಮದುವೆ ಮಾಡಲು ಮುಂದಾದರು. ಗ್ರ್ಯಾಂಡ್ ಆಗಿ ಎಂಗೇಜ್‍ಮೆಂಟ್ ಕೂಡ ಮಾಡಿದರು.

ಚಿಕ್ಕಬಳ್ಳಾಪುರ ನಗರದ ಶ್ರೀದೇವಿ ಪ್ಯಾಲೆಸ್ ಕಲ್ಯಾಣ ಮಂಟಪದಲ್ಲಿ ಮದುವೆ ಮಾಡಲು ನಿಶ್ಚಯಿಸಿ ಆಮಂತ್ರಣ ಪತ್ರಿಕೆ ಸಹ ಮುದ್ರಿಸಿದರು. ನಿನ್ನೆ ಮದುವೆಯ ಆರತಕ್ಷತೆ ಇತ್ತು. ಹುಡುಗನಿಗೆ ಮದುವೆ ಖರ್ಚಿಗೆ ಬರೋಬ್ಬರಿ 2.6 ಲಕ್ಷ ರೂ. ನೀಡಿದ್ದರು. ಎಲ್ಲ ಸಿದ್ಧತೆಗಳನ್ನೂ ಮಾಡಿಕೊಂಡು ಕಲ್ಯಾಣ ಮಂಟಪಕ್ಕೆ ಬಂದಾಗ ಮಂಟಪಕ್ಕೆ ಬೀಗ ಹಾಕಲಾಗಿತ್ತು. ವರನೇ ನಾಪತ್ತೆಯಾಗಿದ್ದ. ಇದರಿಂದ ವಧುವಿನ ಕುಟುಂಬ, ಬಂಧು-ಬಳಗ ಗಾಬರಿಯಾದರು. ಕೂಡಲೇ ವರನನ್ನು ಸಂಪರ್ಕಿಸಿದಾಗ ನಾನು ಇಲ್ಲೇ ಹತ್ತಿರದಲ್ಲಿದ್ದೇನೆ. ಸುಮಾರು 35ಕಿಮೀ ದೂರದಲ್ಲಿದ್ದೇನೆ ಎಂದು ಹೇಳಿದ್ದಾನೆ.

ವಧುವಿನ ಕಡೆಯವರಿಗೆ ಏಕೋ ಸಣ್ಣ ಅನುಮಾನ ಕಾಡಿದೆ. ಆತನನ್ನು ಕರೆತಂದು ವಿಚಾರಿಸಿದಾಗ ಈತನ ನಿಜಬಣ್ಣ ಬಯಲಾಗಿದೆ. ಈತ ಯಾವ ಕೆಎಎಸ್ ಆಫೀಸರ್ರೂ ಅಲ್ಲ, ಕೆಎಸ್‍ಎಸ್‍ಐಡಿಸಿ ನಿರ್ದೇಶಕನೂ ಅಲ್ಲ ಎಂಬುದು ಗೊತ್ತಾಗಿದೆ. ನಾವು ವಂಚನೆಗೊಳಗಾಗಿದ್ದೇವೆ ಎಂದು ವಧುವಿನ ಕಡೆಯವರು ಗಾಬರಿಯಾಗಿದ್ದಾರೆ.  ಕೂಡಲೇ ಪೊಲೀಸರಿಗೆ ದೂರು ನೀಡಿದಾಗ ಪೊಲೀಸರು ಈತನನ್ನು ಬಂಧಿಸಿದ್ದಾರೆ. ಬರೀ ಸುಳ್ಳನ್ನೇ ಬಂಡವಾಳ ಮಾಡಿಕೊಂಡಿದ್ದ ಈ ಅಶ್ವತ್ಥ ನಾರಾಯಣ್ ಸುಳ್ಳಿನ ಮೂಲಕವೇ ಹಸೆಮಣೆ ಏರಲು ರೆಡಿಯಾಗಿದ್ದ. ಎಲ್ಲವೂ ಈತ ಅಂದುಕೊಂಡಂತೆ ಆಗಿದ್ದರೆ ಶ್ರೀದೇವಿ ಕಲ್ಯಾಣ ಮಂಟಪದಲ್ಲಿ ವಧುವಿನ ಕೈ ಹಿಡಿದು ಆರತಕ್ಷತೆಗೆ ನಿಲ್ಲಬೇಕಿತ್ತು. ನೂರಾರು ಮಂದಿ ಅಕ್ಷತೆಯ ಜತೆ ಆಶೀರ್ವಾದ ಪಡೆದು ವಧುವಿನ ಕೊರಳಿಗೆ ಮಾಂಗಲ್ಯಧಾರಣೆ ಮಾಡಿ ಮದುವೆಯಾಗಿ ಕ್ಯಾಮೆರಾಗಳಿಗೆ ಪೋಸು ನೀಡುತ್ತಿದ್ದ. ಆದರೆ, ಈತನ ನಸೀಬು ಕೆಟ್ಟಿತ್ತು. ಈಗ ಸ್ಲೇಟು ಹಿಡಿದುಪೊಲೀಸರಿಗೆ ಪೋಸು ನೀಡಿದ್ದಾನೆ.
ಒಟ್ಟಿನಲ್ಲಿ ಮದುವೆಗೆ ಮುಂಚೆಯೇ ಈತನ ಅಸಲಿ ಮುಖ ಬಯಲಾಗಿದ್ದರಿಂದ ವಧುವಿನ ಕಡೆಯವರು ಒಂದಷ್ಟು ನಿಟ್ಟುಸಿರು ಬಿಡುವಂತಾಗಿದೆ.   ಚಿಕ್ಕಬಳ್ಳಾಪುರ ನಗರ ಪೊಲೀಸರ ವಶದಲ್ಲಿರುವ ಈತನ ವಿರುದ್ಧ 420 ಸೆಕ್ಷನ್ ಅಡಿ ಪ್ರಕರಣ ದಾಖಲಿಸಲಾಗಿದೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin