ರಾಜ್ಯಗಳ ನಡುವೆ ಸಮಗ್ರ ಸಂಪರ್ಕ ನೀತಿ ಜಾರಿಗೆ ಕೇಂದ್ರ ಸರ್ಕಾರ ಚಿಂತನೆ

ಈ ಸುದ್ದಿಯನ್ನು ಶೇರ್ ಮಾಡಿ

Venkaiah

ಬೆಂಗಳೂರು, ಡಿ.9- ಅಂತಾರಾಜ್ಯಗಳ ನಡುವೆ ಉತ್ತಮ ಸಂಪರ್ಕ ಯೋಜನೆಗಳನ್ನು ರೂಪಿಸುವ ಸಲುವಾಗಿ ಸಮಗ್ರ ಸಂಪರ್ಕ ನೀತಿಯನ್ನು ದೇಶದಲ್ಲಿ ಜಾರಿಗೊಳಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ಕೇಂದ್ರದ ವಾರ್ತಾ ಸಚಿವ ವೆಂಕಯ್ಯನಾಯ್ಡು ತಿಳಿಸಿದರು. ನಗರದ ಖಾಸಗಿ ಹೊಟೇಲ್‍ನಲ್ಲಿ ಅಖಿಲ ಭಾರತ ಸಾರ್ವಜನಿಕ ಸಂಪರ್ಕಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ದೆಹಲಿಯಲ್ಲಿ ನಡೆಯುತ್ತಿರುವ ಮಾಹಿತಿ ಸಚಿವರ ಸಮ್ಮೇಳನದಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗುವುದು. ಕಳೆದ 11 ವರ್ಷಗಳಲ್ಲಿ 2004-05 ರಿಂದ 2014-15ರವರೆಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಸಾವಿರಾರು ಕೋಟಿ ರೂ.ಗಳನ್ನು ಪ್ರಚಾರ ಕಾರ್ಯಕ್ಕಾಗಿ ವ್ಯಯ ಮಾಡಿದೆ. ಕೇಂದ್ರ ಸರ್ಕಾರವೊಂದೇ 6 ಸಾವಿರ ಕೋಟಿ ರೂ.ಗಳನ್ನು ಪ್ರಚಾರಕ್ಕೆ ವ್ಯಯ ಮಾಡಿದ್ದು, ಮುದ್ರಣ ಮಾಧ್ಯಮದಲ್ಲಿನ ಜಾಹೀರಾತಿಗಾಗಿ 3,295 ಕೋಟಿ ಆಡಿಯೋ, ವಿಡಿಯೋ ಮಾಧ್ಯಮಕ್ಕಾಗಿ 2,290 ಕೋಟಿ, ಹೊರಾಂಗಣ ಪ್ರಚಾರಕ್ಕಾಗಿ 448 ಕೋಟಿರೂ.ಗಳನ್ನು ವ್ಯಯಿಸಲಾಗಿದೆ ಎಂದು ಮಾಹಿತಿ ನೀಡಿದರು.

ದೇಶಾದ್ಯಂತ ಸುಮಾರು 1.20 ಲಕ್ಷ ಪತ್ರಿಕೆಗಳು ಇವೆ ಎಂಬ ಅಂಕಿ ಅಂಶವಿದ್ದರೂ ಇದರಲ್ಲಿ 12 ಸಾವಿರ ಮಾತ್ರ ಸಕ್ರಿಯವಾಗಿವೆ. ಲಕ್ನೋವೊಂದರಲ್ಲಿ 65 ಪತ್ರಿಕೆಗಳು ಮುದ್ರಣವಾಗುತ್ತಿವೆ. ಈ ಗೊಂದಲಗಳನ್ನು ಪರಿಶೀಲಿಸಲು ಹಾಗೂ ಸರಿಯಾದ ಮಾಹಿತಿ ನೀಡಲು ಯಾವುದೇ ಏಜೆನ್ಸಿಗಳಿಲ್ಲ. ಇನ್ನು ಆಯಾ ಜಿಲ್ಲಾಧಿಕಾರಿಗಳು ಇದನ್ನು ನಿರ್ವಹಿಸಲು ಆಗದಂತೆ ಅವರ ಕಾರ್ಯಭಾರವೇ ಹೆಚ್ಚಾಗಿದೆ. ಡಿಎವಿಟಿ ಮತ್ತಿತರ ಸಂಸ್ಥೆಗಳು ಸಹ ಈ ಕಾರ್ಯದಲ್ಲಿ ತೊಡಗಲು ಸಾಧ್ಯವಾಗುತ್ತಿಲ್ಲ ಎಂದು ವಿವರಿಸಿದರು. ಈ ಎಲ್ಲಾ ಗೊಂದಲಗಳನ್ನು ನಿವಾರಿಸಲು ಯಾವ ಯಾವ ಮುದ್ರಣ ಕೇಂದ್ರಗಳಲ್ಲಿ ಎಷ್ಟೆಷ್ಟು ಪತ್ರಿಕೆಗಳು ಮುದ್ರಣವಾಗುತ್ತಿವೆ ಎಂಬ ರೀಡಿಂಗ್‍ನ್ನು ಸರ್ಕಾರಕ್ಕೆ ಒಪ್ಪಿಸಬೇಕೆಂಬ ನಿಯಮವನ್ನು ಸಮಗ್ರವಾಗಿ ಜಾರಿಗೆ ತರಲು ಚಿಂತನೆ ನಡೆದಿದೆ ಎಂದರು.

ಪ್ರತಿವರ್ಷ ರಾಷ್ಟ್ರದಲ್ಲಿ 245 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಉತ್ಪಾದನೆಯಾಗುತ್ತಿದ್ದರೂ, ಗೊಬ್ಬರದ ಕೊರತೆ ಎದುರಾಗಿ ಕರ್ನಾಟಕದಲ್ಲಿ ಗೋಲಿಬಾರ್‍ನಂತಹ ಪ್ರಕರಣವೂ ನಡೆದಿತ್ತು. ಹಾಗಾಗಿ ಈ ಬಗ್ಗೆ ಮೋದಿಯವರು ಆ ಖಾತೆ ಸಚಿವರಾಗಿದ್ದ ಅನಂತ್‍ಕುಮಾರ್ ಅವರನ್ನು ವಿಚಾರಿಸಿದಾಗ ರಸಗೊಬ್ಬರಗಳ ಬೆಲೆ ಕಡಿಮೆಯಿದ್ದು, ರಾಸಾಯನಿಕಗಳನ್ನು ತಯಾರಿಕಾ ಕೈಗಾರಿಕೆಗಳಲ್ಲಿ ಬಳಕೆ ಮಾಡುತ್ತಿವೆ. ಇದರಿಂದ ಕೃಷಿಗೆ ಅಗತ್ಯವಿರುವ ಪ್ರಮಾಣದಷ್ಟು ಗೊಬ್ಬರ ಸಿಗುತ್ತಿಲ್ಲ ಎಂಬ ವಿಷಯ ತಿಳಿದುಬಂತು. ಆಗ ಪ್ರಧಾನಿಯವರು ಗೊಬ್ಬರಕ್ಕೆ ಬೇವಿನ ಎಲೆಗಳ ಗೊಬ್ಬರ ಸೇರಿಸುವ ಮೂಲಕ ರಾಸಾಯನಿಕ ಗೊಬ್ಬರಗಳಲ್ಲಿ ಅದನ್ನು ಬಳಸುವುದನ್ನು ತಡೆದರು.

ಈ ಒಂದು ಸಣ್ಣ ಸಲಹೆ ದೊಡ್ಡ ಪ್ರಮಾಣದ ಬದಲಾವಣೆಗೆ ಕಾರಣವಾಯಿತು. ಈಗ ದೇಶದಲ್ಲಿ ಉತ್ಪಾದಿಸಲಾಗುತ್ತಿರುವ ಗೊಬ್ಬರವನ್ನು ಕೃಷಿಗೆ ಬಳಕೆ ಮಾಡಲಾಗುತ್ತಿದೆ. ಹಾಗಾಗಿ ಯಾವುದೇ ಕೊರತೆ ಉಂಟಾಗುತ್ತಿಲ್ಲ. ಅದೇ ರೀತಿ ಮುದ್ರಣ ಮಾಧ್ಯಮ ರೀಡಿಂಗ್ ಪಡೆಯುವ ಮೂಲಕ ಇಲ್ಲಿನ ನ್ಯೂನ್ಯತೆ ಸರಿಪಡಿಸುವ ನೀತಿ ರೂಪಿಸಬೇಕೆಂದು ಅಭಿಪ್ರಾಯಪಟ್ಟರು. ಸಮಗ್ರ ನೀತಿ, ವಿಷಯದಲ್ಲಿನ ತಳಮಟ್ಟದ ಸಂಶೋಧನೆ, ಯೋಜನೆಗಳ ಒಳತಿಳುವಳಿಕೆ, ಜಾಗೃತಿ, ಅಭಿಪ್ರಾಯ ಸಂಗ್ರಹ, ಯೋಜನೆಗಳಿಂದ ಉಂಟಾಗುವ ಪರಿಣಾಮದ ಅಂದಾಜು ಸಮೀಕ್ಷೆ ಸೇರಿದಂತೆ ಎಲ್ಲಾ ರೀತಿಯ ಸಮಗ್ರ ನೀತಿ ರೂಪಿಸಿ ಕೇಂದ್ರ ಮತ್ತು ವಾರ್ತಾ ಇಲಾಖೆಯನ್ನು ಬಲಪಡಿಸಲು ಕ್ರಮಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಯಾವುದೇ ಸುದ್ದಿಯನ್ನು ಸ್ಪಷ್ಟವಾಗಿ ತಿಳಿಯದೆ ಪ್ರಕಟಿಸಬಾರದು. ಸುದ್ದಿಯನ್ನು ಸುದ್ದಿಯಾಗಿಯೇ ನೋಡಿ, ಇಲ್ಲಿ ವೈಯಕ್ತಿಯ ಅಭಿಪ್ರಾಯಕ್ಕೆ ಜಾಗವಿಲ್ಲ. ಅಭಿವೃದ್ಧಿಗಳು ಚರ್ಚೆಯಾಗುತ್ತಿಲ್ಲ, ಅವಘಡಗಳು ಹೆಚ್ಚು ಸುದ್ದಿಯಾಗುತ್ತಿವೆ. ನಾನು ಅಸೆಂಬ್ಲಿ  ಪ್ರವೇಶಿಸಿದ ಮೊದಮೊದಲು ಗಲಾಟೆ ಮಾಡಿದ್ದೆ. ಅದು ಸಾಕಷ್ಟು ಚರ್ಚೆಗೆ ಒಳಪಟ್ಟಿತ್ತು. ಆದರೆ ಸಂಸತ್ ಸದಸ್ಯನಾದ ಮೇಲೆ ಸಂಪೂರ್ಣ ಪೂರ್ವತಯಾರಿ ಹಾಗೂ ಅಧ್ಯಯನದೊಂದಿಗೆ 52 ನಿಮಿಷ ಸದನದಲ್ಲಿ ಮಾತನಾಡಿದ್ದೆ. ಇದು ಸುದ್ದಿಯಾಗಲೇ ಇಲ್ಲ ಎಂದು ವಿಷಾದಿಸಿದರು. ಸರ್ಕಾರಿ ಯೋಜನೆಗಳಲ್ಲಿ ಜನ ಪಾಲ್ಗೊಳ್ಳಬೇಕಿದೆ. ಸ್ವಚ್ಛತಾ ಆಂದೋಲನ ಸರ್ಕಾರಿ ಕಾರ್ಯಕ್ರಮವಾಗಬೇಕೇ ಎಂಬುದರ ಇದ್ದ ಜಿಜ್ಞಾಸೆಗೆ ನಾನು ಇದನ್ನು ಜನಾಂದೋಲನವನ್ನಾಗಿ ರೂಪಿಸಬೇಕೆಂಬ ಸಲಹೆ ಮಾಡಿದ್ದೆ. ಅದು ಇಂದು ಫಲ ನೀಡಿದೆ ಎಂದರು.

ಇಂದು ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚುತ್ತಿದೆ. ಇದರಿಂದ ಸಂಪರ್ಕ ಜಾಲ ಸಾಕಷ್ಟು ವೇಗವಾಗಿದೆ. ಇದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ವಾರ್ತಾ ಇಲಾಖೆಯನ್ನು ಆಧುನಿಕ ಮಾದರಿಯಲ್ಲಿ ಹೊಸ ತಂತ್ರಜ್ಞಾನ ಬಳಸಬೇಕು, ಜನರಿಗೆ ಸತ್ಯಗೊತ್ತಿದೆ. ಹಾಗಾಗಿ ವಾಸ್ತವಾಂಶ ತಿಳಿಸಿ ಎಂದು ಹೇಳಿದರು. ಸಮಾರಂಭದಲ್ಲಿ ಸಚಿವ ರೋಷನ್‍ಬೇಗ್, ವಾರ್ತಾ ಇಲಾಖೆ ಪ್ರಧಾನಕಾರ್ಯದರ್ಶಿ ಲಕ್ಷ್ಮಿನಾರಾಯಣ, ವಾರ್ತಾ ಇಲಾಖೆ ನಿರ್ದೇಶಕ ಎನ್.ಆರ್.ವಿಶುಕುಮಾರ್, ದಿ ಫ್ರಂಟ್ ಸಂಸ್ಥೆಯ ಪ್ರದಾನ ಸಂಸ್ಥಾಪಕ ಶೇಖರ್ ಗುಪ್ತ, ದಿ ವೀಕ್‍ನ ಸ್ಥಾನೀಯ ಸಂಸ್ಥಾಪಕ ಸಚ್ಚಿದಾನಂದಮೂರ್ತಿ, ರಾಮಚಂದ್ರಗೌಡ, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ರಾಜೇಂದ್ರ ಸಿಂಗ್ ಬಾಬು, ನಿವೃತ್ತ ಐಪಿಎಸ್ ಅಧಿಕಾರಿ ರವೀಂದ್ರನಾಥ್ ಠಾಗೂರ್, ಹಿರಿಯ ವಕೀಲರಾದ ಪ್ರಮೀಳಾ ನೇಸರ್ಗಿ, ಎಚ್.ಎಸ್.ದೊರೆಸ್ವಾಮಿ ಮತ್ತಿತರರು ಪಾಲ್ಗೊಂಡಿದ್ದರು. 13 ರಾಜ್ಯಗಳ ವಾರ್ತಾಧಿಕಾರಿಗಳಿಗೆ ಇಂದಿನಿಂದ ವಾರ್ತಾ ಇಲಾಖೆ ಕಾರ್ಯವೈಖರಿ ಸುಧಾರಣೆ ಕುರಿತಂತೆ ಎರಡು ದಿನಗಳ ಕಾರ್ಯಾಗಾರ ಆರಂಭವಾಯಿತು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin