ರಾಹುಲ್‍ಗೆ ವೆಂಕಯ್ಯನಾಯ್ಡು ಸವಾಲ್

ಈ ಸುದ್ದಿಯನ್ನು ಶೇರ್ ಮಾಡಿ

Rahul-021

ಬೆಂಗಳೂರು, ಡಿ.9- ನೋಟು ನಿಷೇಧದ ಮೂಲಕ ಕಪ್ಪು ಹಣ ಹಾಗೂ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕ್ರಮ ಮೂರ್ಖತನದ್ದೋ ಅಥವಾ ಅದನ್ನು ವಿರೋಧಿಸುತ್ತಿರುವ ರಾಹುಲ್‍ಗಾಂಧಿ ಅವರ ನಿರ್ಧಾರ ಮೂರ್ಖತನದ್ದೋ ಎಂಬುದನ್ನು ಕಾಂಗ್ರೆಸ್ ಬಹಿರಂಗ ಪಡಿಸಲಿ ಎಂದು ಕೇಂದ್ರ ಸಚಿವ ವೆಂಕಯ್ಯನಾಯ್ಡು ವಾಗ್ದಾಳಿ ನಡೆಸಿದ್ದಾರೆ. 500 ಹಾಗೂ 1000 ರೂ. ನೋಟುಗಳ ನಿಷೇಧವನ್ನು ವಿರೋಧಿಸಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‍ಗಾಂಧಿ ಮೂರ್ಖತನದ ನಿರ್ಧಾರ ಎಂದು ಹೇಳಿದ್ದಾರೆ. ಭ್ರಷ್ಟಾಚಾರ ಹಾಗೂ ಕಪ್ಪು ಹಣಕ್ಕೆ ಕಾಂಗ್ರೆಸ್ ಹಾಗೂ ಅದರ ಮೈತ್ರಿ ಪಕ್ಷಗಳು ಬೆಂಬಲ ನೀಡುತ್ತಿವೆಯೇ ಎಂಬುದನ್ನು ಬಹಿರಂಗಪಡಿಸಲಿ ಎಂದು ವೆಂಕಯ್ಯ ನಾಯ್ಡು ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.

500 ಹಾಗೂ 1000ರೂ. ನೋಟು ನಿಷೇಧಕ್ಕೆ ದೇಶದ ಜನತೆ ಅಭೂತ ಪೂರ್ವ ಬೆಂಬಲ ನೀಡಿದೆ. ಇದನ್ನು ಸಹಿಸದ ಕಾಂಗ್ರೆಸ್, ಟಿಎಂಸಿ, ಎಎಪಿ ಹಾಗೂ ಎಡಪಕ್ಷಗಳು ವಿರೋಧಿಸುತ್ತಿವೆ. ನೀವು ಕಪ್ಪುಹಣ ಹಾಗೂ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತಿದ್ದೀರಿ ಎಂದು ಹರಿಹಾಯ್ದರು. ನೋಟು ನಿಷೇಧದ ಬಳಿಕ ಒಂದಿಷ್ಟು ಸಣ್ಣಪುಟ್ಟ ವ್ಯತ್ಯಾಸಗಳಾಗಿರುವುದು ನಿಜ.ಇದು ತಾತ್ಕಾಲಿಕ ಸಮಸ್ಯೆಯಾಗಿದ್ದು, ಶೀಘ್ರದಲ್ಲೇ ಎಲ್ಲ ಬಿಕ್ಕಟ್ಟು ಪರಿಹಾರವಾಗುತ್ತದೆ. ದೇಶದ ಜನತೆ ವದಂತಿಗಳಿಗೆ ಕಿವಿಗೊಡಬಾರದು ಎಂದು ಅವರು ಮನವಿ ಮಾಡಿದರು.

ಚರ್ಚೆಗೆ ಸಿದ್ಧ:

ಸಂಸತ್ತಿನಲ್ಲಿ ನಾವು ಎಲ್ಲಾ ವಿಷಯಗಳ ಬಗ್ಗೆ ಚರ್ಚೆ ನಡೆಸಲು ಸಿದ್ಧರಿದ್ದೇವೆ. ಆದರೆ, ಕಾಂಗ್ರೆಸ್ ಸೇರಿದಂತೆ ಕೆಲವು ಪಕ್ಷಗಳು ಸಂಸತ್ತಿನ ಕಲಾಪಕ್ಕೆ ಅಡ್ಡಿಪಡಿಸುವುದನ್ನೇ ವೃತ್ತಿ ಮಾಡಿಕೊಂಡಿವೆ. ಅಧಿವೇಶನ ಆರಂಭ ದಿನದಿಂದ ಈವರೆಗೂ ಯಾವುದೇ ವಿಷಯಗಳ ಬಗ್ಗೆ ಚರ್ಚೆಯಾಗಿಲ್ಲ. ರಾಷ್ಟ್ರಪತಿ ಪ್ರಣಬ್‍ಮುಖರ್ಜಿ ಈ ದೇಶದ ಅತ್ಯಂತ ಹಿರಿಯ ಸಂಸದೀಯ ಪಟುವಾಗಿದ್ದು, ನಿನ್ನೆ ಏನು ಹೇಳಿದ್ದಾರೆ ಎಂಬುದನ್ನು ಕಾಂಗ್ರೆಸ್ ನಾಯಕರು ಅರ್ಥ ಮಾಡಿಕೊಳ್ಳಲಿ ಎಂದು ವ್ಯಂಗ್ಯವಾಡಿದರು.

ಅಗತ್ಯ ಕಂಡು ಬಂದರೆ ಪ್ರಧಾನಮಂತ್ರಿ ಹೇಳಿಕೆ ನೀಡಲು ಸಿದ್ಧರಿದ್ದಾರೆ. ಹಣಕಾಸು ಸಚಿವ ಅರುಣ್‍ಜೇಟ್ಲಿ ಈಗಾಗಲೇ ಇದಕ್ಕೆ ಸಂಸತ್ತಿನಲ್ಲೇ ಉತ್ತರ ನೀಡಿದ್ದರು. ಪ್ರತಿಪಕ್ಷಗಳು ಇಡೀ ಸದನವನ್ನೇ ಹೈಜಾಕ್ ಮಾಡಲು ಮುಂದಾಗಿರುವುದು ಅತ್ಯಂತ ನೋವಿನ ಸಂಗತಿ. ಸರ್ಕಾರ ಎಲ್ಲಾ ವಿಷಯಗಳ ಬಗ್ಗೆ ಚರ್ಚೆಗೆ ಸಿದ್ಧವಿದೆ ಎಂದು ಪದೇ ಪದೇ ಹೇಳುತ್ತಿದ್ದರೂ ಕೆಲವರು ಕಲಾಪಕ್ಕೆ ಅಡ್ಡಿಪಡಿಸುವ ಮೂಲಕ ಇಡೀ ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡಲು ಹೊರಟಿದ್ದಾರೆ ಎಂದು ಹರಿಹಾಯ್ದರು.

ಪ್ರಧಾನಮಂತ್ರಿ ಪ್ರತಿಯೊಂದು ವಿಷಯಗಳ ಬಗ್ಗೆ ಮಾತನಾಡಬೇಕಾದ ಅವಶ್ಯಕತೆ ಇಲ್ಲ. ಯಾವ ವಿಷಯಕ್ಕೆ ಮಾತನಾಡಬೇಕೋ ಅದಕ್ಕೆ ಪ್ರತಿಕ್ರಿಯಿಸುತ್ತಾರೆ. ಕಳೆದ ನ.8ರಂದು ತೆಗೆದುಕೊಂಡ ಈ ನಿರ್ಧಾರ ಒಂದು ಐತಿಹಾಸಿಕ ಮತ್ತು ಕ್ರಾಂತಿಕಾರಕ ತೀರ್ಮಾನ ಎಂದು ಬಣ್ಣಿಸಿದರು. ಕೇಂದ್ರದಲ್ಲಿ 10 ವರ್ಷ ಆಡಳಿತ ನಡೆಸಿದ ನೀವು ಮಾಡಬಾರದ್ದನ್ನೆಲ್ಲಾ ಮಾಡಿದ್ದೀರಿ. 2ಜಿ, ಕಲ್ಲಿದ್ದಲು, ಆದರ್ಶ ಸೊಸೈಟಿ, ಕಾಮನವೆಲ್ತ್ ಕ್ರೀಡಾಕೂಟ ಸೇರಿದಂತೆ ಲಕ್ಷಾಂತರ ಕೋಟಿ ಭ್ರಷ್ಟಾಚಾರ ನಡೆಯಲು ಕುಮ್ಮಕ್ಕು ನೀಡಿ ಬಾಯಿಮುಚ್ಚಿಕೊಂಡು ಕುಳಿತಿದ್ದೀರಿ. ಈಗ ನಮ್ಮ ಸರ್ಕಾರದ ವಿರುದ್ಧ ಮಾತನಾಡಲು ನಿಮಗೆ ಯಾವುದೇ ವಿಷಯಗಳು ಇಲ್ಲದಿರುವುದರಿಂದ ಅಸ್ತಿತ್ವಕ್ಕಾಗಿ ಇಂತಹ ಕೀಳುಮಟ್ಟದ ರಾಜಕೀಯ ಮಾಡುತ್ತಿದ್ದೀರಿ ಎಂದು ದೂರಿದರು.
ರಾಹುಲ್‍ಗಾಂಧಿ ನಿನ್ನೆ ಸಂಸತ್ತಿನ ಮುಂಭಾಗದ ಗಾಂಧಿ ಪ್ರತಿಮೆ ಬಳಿ ಕಪ್ಪು ದಿನ ಆಚರಣೆ ಮಾಡಿರುವುದು ಅತ್ಯಂತ ಮೂರ್ಖತನ. ಭ್ರಷ್ಟಾಚಾರ ಮತ್ತು ಕಪ್ಪು ಹಣ ದೇಶದಿಂದಲೇ ತೊಲಗಬೇಕು ಎಂಬುದು ಗಾಂಧೀಜಿಯವರ ಕನಸಾಗಿತ್ತು. ಅವರ ಕನಸನ್ನು ನನಸು ಮಾಡಲು ಹೊರಟಿರುವ ಮೋದಿ ಅವರ ತೀರ್ಮಾನವನ್ನು ವಿರೋಧಿಸಿ ಕಪ್ಪು ದಿನ ಆಚರಣೆ ಮಾಡಲು ಹೊರಟಿರುವುದು ಹಾಸ್ಯಾಸ್ಪದ ಎಂದರು.

ಆತಂಕಕಾರಿ:

ಕರ್ನಾಟಕ, ತಮಿಳುನಾಡು ಸೇರಿದಂತೆ ದೇಶದ ಮತ್ತಿತರ ಭಾಗಗಳಲ್ಲಿ ಬ್ಯಾಂಕ್ ಅಧಿಕಾರಿಗಳು ಕಮಿಷನ್ ಆಸೆಗಾಗಿ 100 ಹಾಗೂ 2000 ಮುಖಬೆಲೆಯ ನೋಟುಗಳನ್ನು ನೀಡುತ್ತಿರುವುದು ಆತಂಕಕಾರಿ ಬೆಳವಣಿಗೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಈಗಾಗಲೇ 27 ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಯಾರೇ ಆಗಲಿ ಇಂತಹ ಪ್ರಕರಣಗಳಲ್ಲಿ ಭಾಗಿಯಾದರೆ ತನ್ನದೇ ಆದ ಕ್ರಮ ಕೈಗೊಳ್ಳುತ್ತದೆ ಎಂದರು. ತಮಿಳುನಾಡಿನಲ್ಲಿ ಮುಖ್ಯಮಂತ್ರಿ ಜಯಲಲಿತಾ ಅವರು ಹಠಾತ್ ನಿಧನರಾಗಿದ್ದರಿಂದ ಕೇಂದ್ರ ಸರ್ಕಾರ ತನ್ನ ಪಾತ್ರವನ್ನು ನಿರ್ವಹಿಸಿತ್ತು. ಅಲ್ಲಿನ ಮುಖ್ಯಮಂತ್ರಿ ಆಯ್ಕೆ ಸೇರಿದಂತೆ ಎಐಎಡಿಎಂಕೆ ಪಕ್ಷದ ಬೆಳವಣಿಗೆಯಲ್ಲಿ ಬಿಜೆಪಿ ಪಾತ್ರ ಏನೂ ಇಲ್ಲ. ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗೆ ಇನ್ನೂ ಸಾಕಷ್ಟು ಸಮಯ ದೂರ ಇರುವುದರಿಂದ ಈಗಲೇ ಏನೂ ಹೇಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಪತ್ರಿಕಾಗೋಷ್ಠಿಯಲ್ಲಿ ಶಾಸಕ ಎಸ್.ಆರ್.ವಿಶ್ವನಾಥ್, ಮುಖಂಡ ಅನ್ವರ್‍ಮಾನಪ್ಪಡಿ ಮತ್ತಿತರರಿದ್ದರು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin