ಜಯಲಲಿತಾ ಸಾವಿನ ಬೆನ್ನಲ್ಲೇ ಶುರುವಾದ ಆಸ್ತಿ ಕದನ

ಈ ಸುದ್ದಿಯನ್ನು ಶೇರ್ ಮಾಡಿ

Jayalalithaa

ಬೆಂಗಳೂರು, ಡಿ.10- ಜಯಲಲಿತಾ ಮಣ್ಣಲ್ಲಿ ಮಣ್ಣಾಗುತ್ತಿದ್ದಂತೆ ಗೆಳತಿ ಶಶಿಕಲಾ ಮತ್ತು ಜಯಾ ಕುಟುಂಬದ ಸದಸ್ಯರ ನಡುವೆ ಹಾಗೂ ಶಶಿಕಲಾ ಹಾಲಿ ಸಿಎಂ ಪನ್ನೀರ್ ಸೆಲ್ವಂ ನಡುವೆ ಅಧಿಕಾರ, ಆಸ್ತಿಪಾಸ್ತಿಗಳಿಗಾಗಿ ವಾರ್ ಶುರುವಾಗಿದೆ. ಜಯಲಲಿತಾರ ಸ್ವಂತ ಸಹೋದರ ಜಯರಾಮನ್ ಪುತ್ರಿ ಚೆನ್ನೈನಲ್ಲಿರೋ ದೀಪಾ ಈಗಾಗಲೇ ಶಶಿಕಲಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಜಯಲಲಿತಾರ ಅಂತ್ಯಕ್ರಿಯೆಯನ್ನು ಶಶಿಕಲಾ ನೆರವೇರಿಸಿದ್ದನ್ನು ಆಕ್ಷೇಪಿಸಿ ಮುಂದಿನ ದಿನಗಳಲ್ಲಿ ಸಮರ ಸಾರುವ ಸುಳಿವು ನೀಡಿದ್ದಾರೆ.  ಈ ಮಧ್ಯೆ ಬೆಂಗಳೂರಿನ ಕೆಂಗೇರಿಯಲ್ಲಿರುವ ಜಯಾ ಸಹೋದರಿ ಶೈಲಜಾರ ಪುತ್ರಿ ಅಮೃತಾ ಕೂಡಾ ಶಶಿಕಲಾ ಅವರ ಮೇಲೆ ಗುರುತರ ಆರೋಪ ಮಾಡಿದ್ದಾರೆ.

ಜಯಲಲಿತಾರ ಸಕಲ ಆಸ್ತಿ, ನಗದು, ಚಿನ್ನಾಭರಣಗಳೆಲ್ಲವನ್ನೂ ಸರ್ಕಾರಕ್ಕೆ ಒಪ್ಪಿಸಬೇಕು. ಅವುಗಳನ್ನು ಪಡೆಯಲು ಶಶಿಕಲಾಗೆ ಯಾವುದೇ ಹಕ್ಕಿಲ್ಲ. ಎಲ್ಲವೂ ತಮಿಳುನಾಡಿನ ಜನರ ಕಲ್ಯಾಣಕ್ಕೆ ಬಳಕೆಯಾಗಬೇಕು ಎಂದು ಅಮೃತಾ ಒತ್ತಾಯಿಸಿದ್ದಾರೆ. ಜಯಲಲಿತಾ ಆಸ್ಪತ್ರೆಯಲ್ಲಿದ್ದಾಗ ತಾವು ಮೂರು ಬಾರಿ ಭೇಟಿ ಮಾಡಲು ಹೋದಾಗ ಅವರನ್ನು ನೋಡಲು ನಿರಾಕರಿಸಲಾಯಿತು ಎಂದು ಅಮೃತಾ ಹೇಳಿದ್ದಾರೆ.  ಜಯಾ ನಿಧನದ ಬಗ್ಗೆ ಟಿವಿ ಮೂಲಕ ತಿಳಿದ ತಾವು ಕುಟುಂಬ ಸಮೇತ ಚೆನ್ನೈಗೆ ಹೋದೆವು. ಆದರೆ ಜಯಾರ ಶವ ನೋಡಲು ತಮಗೆ ಅವಕಾಶ ನೀಡಲಿಲ್ಲ. ಡಿಎಂಕೆಯ ಓರ್ವ ನಾಯಕರಿಂದ ಜಯಾರ ಪಾರ್ಥಿವ ಶರೀರ ನೋಡಲು ಸಾಧ್ಯವಾಯಿತು ಎಂದು ಅಮೃತಾ ಹೇಳಿದ್ದಾರೆ.

ಜಯಲಲಿತಾ ತಮ್ಮ ಕುಟುಂಬದ ಬಗ್ಗೆ ಬಹಳ ರಹಸ್ಯ ಕಾಪಾಡುತ್ತಿದ್ದರು. 2014ರಲ್ಲಿ ತಮಿಳು ಪತ್ರಿಕೆಯೊಂದರ ಮೂಲಕ ತಮ್ಮ ಕುಟುಂಬದ ಬಗ್ಗೆ ಜನಕ್ಕೆ ತಿಳಿಯುವಂತಾಯಿತು. ಹಿಂದಿನಿಂದಲೂ ಶಶಿಕಲಾ ಅವರು ಜಯಲಲಿತಾರನ್ನು ಕುಟುಂಬದಿಂದ ದೂರ ಇರಿಸುತ್ತಿದ್ದರು. ತಮಗಾರಿಗೂ ಜಯಾಗೆ ಹತ್ತಿರವಾಗಲು ಬಿಡುತ್ತಿರಲಿಲ್ಲ. ಆರಂಭದಲ್ಲಿ ಜಯಲಲಿತಾ ತಮ್ಮನ್ನು ಫೋನ್ ಮೂಲಕ ಸಂಪರ್ಕಿಸುತ್ತಿದ್ದರು. ಒಂಟಿಯಾಗಿದ್ದಾಗ ತಮಗೆ ಫೋನ್ ಮಾಡಿ ಮಾತನಾಡುತ್ತಿದ್ದರು. ಕಷ್ಟ ಸುಖ ಹೇಳಿಕೊಳ್ಳುತ್ತಿದ್ದರು. ಸಮಸ್ಯೆಗಳಿದ್ದಾಗ ಫೋನ್‍ನಲ್ಲಿ ಅಳುತ್ತಿದ್ದರು ಎಂದು ಅಮೃತಾ ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ.  ಒಮ್ಮೊಮ್ಮೆ ಫೋನ್‍ನಲ್ಲಿ ಮಾತನಾಡುತ್ತಿದ್ದಾಗ ಜಯಾ ಅವರಿದ್ದ ಕೋಣೆಗೆ ಯಾರಾದರೂ ಬಂದರೆ ಸೈಲೆಂಟ್ ಆಗುತ್ತಿದ್ದರು. ಫೋನ್ ಕಟ್ ಮಾಡುತ್ತಿದ್ದರು. ಆಗೆಲ್ಲ ಜಯಾಗೆ ಕೋಣೆಗೆ ಬಂದವರು ಶಶಿಕಲಾ ಇರಬಹುದು. ಆಕೆಯಿಂದಲೇ ಜಯಲಲಿತಾ ಹೀಗೆ ಮಾಡುತ್ತಿದ್ದಾರೆ ಎಂದು ತಾವು ಭಾವಿಸುತ್ತಿದ್ದೆವು ಎಂದು ಅಮೃತಾ ಹೇಳಿಕೊಂಡಿದ್ದಾರೆ.

ಇದೇ ವೇಳೆ 1996-98ರಲ್ಲಿ ಜಯಲಲಿತಾ ಸಿಎಂ ಆಗಿದ್ದಾಗ ಒಮ್ಮೆ ಚೆನ್ನೈನ ಅವರ ನಿವಾಸದಲ್ಲಿ ಕಾಲ ಕಳೆದಿದ್ದನ್ನು ಅಮೃತಾ ಹೇಳಿಕೊಂಡಿದ್ದಾರೆ. ಆಗ ಅವರೊಂದಿಗೆ ಬೆಳಗಿನ ತಿಂಡಿ ಸೇವಿಸಿದ್ದನ್ನು ಅಮೃತಾ ಸ್ಮರಿಸಿದ್ದಾರೆ.   ಜಯಾ ಆಗ ಬೆಳಗಿನ ಜಾವ 5ಕ್ಕೆ ಮ್ಯಾಂಗೋ ಜ್ಯೂಸ್ ಸೇವಿಸುತ್ತಿದ್ದರು ಎಂದು ಅಮೃತಾ ಆ ಕ್ಷಣ ಗಳನ್ನು ನೆನಪಿಸಿಕೊಂಡಿದ್ದಾರೆ. ಜಯಾರ ಆಸ್ತಿ ನಮಗೆ ಬೇಕಿಲ್ಲ. ನಮ್ಮ ತಾಯಿಯೂ ಅದನ್ನು ಬಯಸಿರಲಿಲ್ಲ ಎಂದು ಅಮೃತಾ ಹೇಳಿದ್ದಾರೆ.

ಜಯಲಲಿತಾ ಸ್ಮಾರಕ ನಿರ್ಮಾಣಕ್ಕೆ 15 ಕೋಟಿ ಮಂಜೂರು

ಚೆನ್ನೈ, ಡಿ.10- ದಿ.ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಸ್ಮಾರಕ ನಿರ್ಮಿಸಲು ರಾಜ್ಯ ಸರಕಾರ 15 ಕೋಟಿ ರೂ. ಮಂಜೂರು ಮಾಡಿದೆ. ಚೆನ್ನೈನ ಮರೀನಾ ಬೀಚ್ ಬಳಿಯಿರುವ ಮಾಜಿ ಮುಖ್ಯ ಮಂತ್ರಿ ಎಂಜಿಆರ್ ಸ್ಮಾರಕದ ಸಮೀಪವೇ ಜಯಲಲಿತಾ ಸ್ಮಾರಕ ಕಟ್ಟಡ ನಿರ್ಮಾಣವಾಗಲಿದೆ. ಲೋಕೋಪಯೋಗಿ ಇಲಾಖೆ ಸ್ಮಾರಕ ನಿರ್ಮಾಣದ ಉಸ್ತುವಾರಿಯನ್ನು ನೋಡಿಕೊಳ್ಳಲಿದೆ. ಸ್ಮಾರಕದ ವಿನ್ಯಾಸ ಇನ್ನಷ್ಟೇ ನಡೆಯಬೇಕಿದೆ. ಸ್ಮಾರಕ ನಿರ್ಮಾಣಕ್ಕೆ ಪೂರ್ವ ತಯಾರಿ ಆರಂಭಗೊಂಡಿದೆ ಎಂದು ಮೂಲಗಳು ತಿಳಿಸಿವೆ. ಎಂಜಿಆರ್ ಸ್ಮಾರಕ ಎಂಟು ಎಕರೆ ಪ್ರದೇಶದಲ್ಲಿ ವ್ಯಾಪಿಸಿಕೊಂಡಿದೆ. ಜಯಲಲಿತಾ ಸಮಾಧಿ ಸ್ಥಳಕ್ಕೆ ದಿನನಿತ್ಯ ಸಹಸ್ರಾರು ಮಂದಿ ಭೇಟಿ ನೀಡುತ್ತಿದ್ದಾರೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin