ಅಕ್ರಮ ನೋಟು ವಹಿವಾಟು : ಸಿದ್ದರಾಮಯ್ಯನವರ ಆಪ್ತ ಸಚಿವರೊಬ್ಬರ ಬಂಧನದಕ್ಕೆ ಇ.ಡಿ ತಯಾರಿ

ಈ ಸುದ್ದಿಯನ್ನು ಶೇರ್ ಮಾಡಿ

ED-Department
ಬೆಂಗಳೂರು, ಡಿ.12- ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದ ಹಿರಿಯ ಸಚಿವರೊಬ್ಬರನ್ನು ಅಕ್ರಮ ನೋಟು ವಹಿವಾಟು ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಲು ಸಿದ್ಧತೆ ನಡೆಸಿದೆ. ಸಚಿವರನ್ನು ತಕ್ಷಣವೇ ಬಂಧಿಸಿದರೆ ರಾಜಕೀಯ ಸ್ವರೂಪ ಪಡೆದುಕೊಳ್ಳಬಹುದೆಂಬ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಹಾಗೂ ಸಿಬಿಐ ಈ ಸಚಿವರ ಪಾತ್ರ ಕುರಿತ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಂಡಿದೆ.ಕಳೆದ ವಾರ ಬಂಧಿಸಲು ಇಡಿ ಅಧಿಕಾರಿಗಳು ಸಜ್ಜಾಗಿದ್ದರು. ಆದರೆ, ಇನ್ನಷ್ಟು ಮಾಹಿತಿಗಳನ್ನು ಕಲೆ ಹಾಕಬೇಕಾಗಿದ್ದರಿಂದ ವಶಕ್ಕೆ ಪಡೆಯುವ ಕಾರ್ಯಾಚರಣೆಯನ್ನು ಮುಂದಕ್ಕೆ ಹಾಕಲಾಗಿದೆ.

ಇದೀಗ 100 ಮತ್ತು 2000 ಮುಖಬೆಲೆಯ ನೋಟು ವಹಿವಾಟಿನಲ್ಲಿ ಸಚಿವರ ಪಾತ್ರ ಇರುವುದು ಸ್ಪಷ್ಟವಾಗಿರುವುದರಿಂದ ಬಂಧಿಸಲು ಸಜ್ಜಾಗಿದೆ. ಸಿದ್ದರಾಮಯ್ಯನವರ ಸಂಪುಟದಲ್ಲಿ ಹಿರಿಯ ಮತ್ತು ಅತ್ಯಂತ ಪ್ರಭಾವಿ ಎನಿಸಿಕೊಂಡಿರುವ ಈ ಸಚಿವರಿಗೆ ತಮ್ಮನ್ನು ಬಂಧಿಸಬಹುದೆಂಬ ಸುಳಿವು ಈಗಾಗಲೇ ಸಿಕ್ಕಿದೆ. ನಿರೀಕ್ಷಣಾ ಜಾಮೀನು ಪಡೆಯಲು ನ್ಯಾಯಾಲಯಕ್ಕೆ ಅರ್ಜಿ ಹಾಕಿದರೆ ಸರ್ಕಾರಕ್ಕೆ ಮುಜುಗರವಾಗಬಹುದು. ಅಲ್ಲದೆ, ತಮ್ಮನ್ನು ಮುಖ್ಯಮಂತ್ರಿಗಳು ಸಂಪುಟದಿಂದ ವಜಾಗೊಳಿಸಬಹುದೆಂಬ ಭೀತಿ ಹಿನ್ನೆಲೆಯಲ್ಲಿ ರಕ್ಷಣಾ ತಂತ್ರ ಅನುಸರಿಸುತ್ತಿದ್ದಾರೆ. ಅಲ್ಲದೆ, ತಮ್ಮ ಪುತ್ರನ ರಾಜಕೀಯ ಭವಿಷ್ಯದ ಮೇಲೆ ಕಲ್ಲು ಬೀಳಬಹುದೆಂಬ ಆತಂಕ ಈ ಸಚಿವರಿಗಿದೆ.

ಬಾಯಿಬಿಟ್ಟ ಅಧಿಕಾರಿಗಳು:

ಕಳೆದ ತಿಂಗಳು ಐಟಿ ಅಧಿಕಾರಿಗಳ ಖೆಡ್ಡಕ್ಕೆ ಬಿದ್ದಿದ್ದ ಕಾವೇರಿ ನಿಗಮ-ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಚಿಕ್ಕರಾಯಪ್ಪ ಹಾಗೂ ರಾಜ್ಯ ಹೆದ್ದಾರಿ ಯೋಜನಾ ಪ್ರಾಧಿಕಾರದ ಅಧಿಕಾರಿ ಎಸ್.ಸಿ.ಜಯಚಂದ್ರ ಸಚಿವರ ಪಾತ್ರ ಕುರಿತಂತೆ ತನಿಖಾಧಿಕಾರಿಗಳ ಮುಂದೆ ಬಾಯಿಬಿಟ್ಟಿದ್ದಾರೆ.ತಾವು ಸಚಿವರ ನಿರ್ದೇಶನವನ್ನಷ್ಟೇ ಪಾಲಿಸಿದ್ದೇವೆ. ಕೆಲವು ಬ್ಯಾಂಕ್ ಅಧಿಕಾರಿಗಳು ಸಹ ಇದರಲ್ಲಿ ಕೈ ಜೋಡಿಸಿದ್ದಾರೆ. ರಾಜ್ಯದ ಹಿರಿಯ ಐಎಎಸ್ ಅಧಿಕಾರಿಯೊಬ್ಬರು ಪಕ್ಕದ ರಾಜ್ಯದಲ್ಲಿರುವ ತಮ್ಮ ಪ್ರಭಾವ ಬಳಸಿ 500 ಮತ್ತು 1000 ಮುಖಬೆಲೆಯ ನೋಟುಗಳನ್ನು ಬದಲಾಯಿಸಿ 2000 ಮತ್ತು 100 ನೋಟುಗಳನ್ನು ನೀಡಿದ್ದಾರೆಂದು ಹೇಳಿದ್ದಾರೆ ಎನ್ನಲಾಗಿದೆ.

‘ಇದಲ್ಲದೆ, ಎರಡು ದಿನಗಳ ಹಿಂದೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಯಲ್ಲಿ ಉದ್ಯಮಿ ವೀರೇಂದ್ರ ಅವರ ಮನೆಯ ಬಾತ್‍ರೂಂನ ಸೀಕ್ರೆಟ್ ಲಾಕರ್‍ನಲ್ಲಿ ಸಿಕ್ಕಿಬಿದ್ದ 5 ಕೋಟಿ 75 ಲಕ್ಷ ಹಣಕ್ಕೂ ಈ ಪ್ರಕರಣಕ್ಕೂ ಸಂಬಂಧವಿದೆ ಎಂಬ ಗುಮಾನಿ ಕೇಳಿಬರುತ್ತಿದೆ.ಒಂದು ವೇಳೆ ಐಟಿ ಮತ್ತು ಇಡಿ ಅಧಿಕಾರಿಗಳು ಈ ಸಚಿವರನ್ನು ಬಂಧಿಸಿದರೆ ರಾಜ್ಯ ರಾಜಕಾರಣದಲ್ಲಿ ಭಾರೀ ಕೋಲಾಹಲ ಉಂಟಾಗುವ ಸಂಭವವಿದೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin