ಅಕ್ರಮವಾಗಿ ನೋಟು ವಿನಿಮಯ ಮಾಡುತ್ತಿದ್ದ 7 ದಲ್ಲಾಳಿಗಳ ಬಂಧನ : 93 ಲಕ್ಷ ರೂ. ವಶ

ಈ ಸುದ್ದಿಯನ್ನು ಶೇರ್ ಮಾಡಿ

black-money-1

ಬೆಂಗಳೂರು, ಡಿ.13- ಅಕ್ರಮವಾಗಿ ನೋಟು ವಿನಿಮಯದಲ್ಲಿ ತೊಡಗಿಕೊಂಡಿದ್ದ ಆರೋಪದ ಹಿನ್ನೆಲೆಯಲ್ಲಿ ತಡರಾತ್ರಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಏಳು ಮಂದಿ ಮಧ್ಯವರ್ತಿಗಳನ್ನು ಬಂಧಿಸಿ 93 ಲಕ್ಷ ನಗದು ಹಣ ವಶಪಡಿಸಿಕೊಂಡಿದ್ದಾರೆ. ಬೆಂಗಳೂರು ಸೇರಿದಂತೆ ಮತ್ತಿತರ ಕಡೆ ದಿಢೀರ್ ದಾಳಿ ನಡೆಸಿದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು 2 ಸಾವಿರ ಮುಖಬೆಲೆಯ 93 ಲಕ್ಷ ನಗದು ಹಾಗೂ ಓರ್ವ ಸರ್ಕಾರಿ ಅಧಿಕಾರಿಯ ಸಂಬಂಧಿ ಸೇರಿದಂತೆ 7 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಂಧಿತರ ವಿರುದ್ಧ ಬೇನಾಮಿ ಹಣ ತಡೆ ಕಾಯ್ದೆ ದೂರು ದಾಖಲಿಸಿದ್ದು, ಎಲ್ಲರನ್ನೂ ವಿಚಾರಣೆಗೆ ಒಳಪಡಿಸಲಾಗಿದೆ.

93 ಲಕ್ಷ ನಗದಿನಲ್ಲಿ 2 ಸಾವಿರ ಮುಖಬೆಲೆಯ ಹೊಸ ನೋಟುಗಳು ಸಿಕ್ಕಿವೆ. ಮೂರು ದಿನಗಳ ಹಿಂದೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಯಲ್ಲಿ ಉದ್ಯಮಿಯೊಬ್ಬರ ನಿವಾಸದ ಮೇಲೆ ದಾಳಿ ನಡೆಸಿದ ವೇಳೆ 5 ಕೋಟಿ 70 ಲಕ್ಷ ಹಣವನ್ನು ವಶಪಡಿಸಿಕೊಳ್ಳಲಾಗಿತ್ತು. ಮೇಲ್ನೋಟಕ್ಕೆ ಈ ಪ್ರಕರಣಕ್ಕೂ ಹಾಗೂ ನಿನ್ನೆ ದಾಳಿ ನಡೆಸಿರುವ ಪ್ರಕರಣಕ್ಕೂ ಸಾಮ್ಯತೆ ಇರುವ ಸಾಧ್ಯತೆ ಇದ್ದು, ಆದಾಯ ತೆರಿಗೆ ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಪ್ರತ್ಯೇಕವಾಗಿ ತನಿಖೆ ನಡೆಸುತ್ತಿದ್ದಾರೆ. ಮಧ್ಯವರ್ತಿಗಳ ಜತೆ ಸೇರಿಕೊಂಡು ಸರ್ಕಾರಿ ಅಧಿಕಾರಿಯೊಬ್ಬರ ಸಂಬಂಧಿಕರು ಕಮಿಷನ್ ಆಸೆಗಾಗಿ ಈ ದಂಧೆಯಲ್ಲಿ ತೊಡಗಿದ್ದರು ಎನ್ನಲಾಗಿದೆ.

100ರೂ.ಗೆ ಶೇ.15 ರಿಂದ 35ರಷ್ಟು ಕಮಿಷನ್ ನೀಡಲಾಗುತ್ತಿತ್ತು. ಹಳೆಯ 500 ಮತ್ತು 1000 ಮುಖಬೆಲೆಯ ನೋಟುಗಳನ್ನು ಬದಲಾಯಿಸಿಕೊಟ್ಟರೆ 1000ಕ್ಕೆ 150 ರಿಂದ 350ರ ವರೆಗೆ ಕಮಿಷನ್ ಪಡೆಯುತ್ತಿದ್ದರು. ಈ ಬಗ್ಗೆ ಗುಪ್ತಚರ ವಿಭಾಗ ತನಿಖಾ ಸಂಸ್ಥೆಗೆ ಮಾಹಿತಿ ನೀಡಿತ್ತು ಎಂಬ ಅಂಶ ಬಯಲಾಗಿದೆ. ಕಪ್ಪು ಹಣವನ್ನು ಬಿಳಿ ಹಣವನ್ನಾಗಿ ಪರಿವರ್ತಿಸಲು ಈ ರೀತಿ ಮಧ್ಯವರ್ತಿಗಳನ್ನು ಕಪ್ಪು ಕುಬೇರರು ಬಳಸಿಕೊಳ್ಳುತ್ತಿರುವ ಸಾಧ್ಯತೆ ಇದೆ ಎಂದು ತನಿಖಾ ಸಂಸ್ಥೆ ಮೂಲಗಳು ಖಚಿತಪಡಿಸಿವೆ. ಇದರಲ್ಲಿ ಹವಾಲಾ ದಂಧೆಯೂ ಕೈ ಜೋಡಿಸಿರುವ ಸಾಧ್ಯತೆ ಇರುವುದರಿಂದ ಇದನ್ನು ವಿಸ್ತೃತವಾಗಿ ತನಿಖೆ ನಡೆಸಲು ತನಿಖಾ ಸಂಸ್ಥೆಗಳು ಮುಂದಾಗಿವೆ.

ನ.30 ರಿಂದ ಈವರೆಗೆ ಸಿಬಿಐ, ಇಡಿ, ಐಟಿ ಅಧಿಕಾರಿಗಳು ದೆಹಲಿ, ಲಖನೌ, ಮುಂಬೈ, ಕೋಲ್ಕತ್ತಾ, ಗುವಾಹಟಿ, ಚೆನ್ನೈ, ಬೆಂಗಳೂರು ಸೇರಿದಂತೆ ಅನೇಕ ಕಡೆ ದಾಳಿ ನಡೆಸಿದ್ದಾರೆ.
ಸಾವಿರಾರು ಕೋಟಿ ಅಕ್ರಮ ಆಸ್ತಿ ಹೊಂದಿರುವ ಕಾಳಧನ ಕುಬೇರದಾರರು ಬಿಳಿ ಹಣವನ್ನಾಗಿ ಪರಿವರ್ತಿಸಿಕೊಳ್ಳಲು ಹವಾಲಾ ಮೂಲಕ ಈ ದಂಧೆ ನಡೆಸುತ್ತಿದ್ದಾರೆ. ಕಳೆದ ನ.8ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು 500 ಮತ್ತು 1000ರೂ. ಮುಖಬೆಲೆಯ ನೋಟುಗಳ ಚಲಾವಣೆಗೆ ನಿಷೇಧ ಹೇರಿದ ಬಳಿಕ ಅಕ್ರಮ ಆಸ್ತಿ ಹೊಂದಿದವರು ವಿಲವಿಲ ಒದ್ದಾಡುವಂತಾಗಿದೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin