ಚಿಂತನೆಗಳು ರಾಜಕೀಯದಿಂದ ಹೊರ ಬಂದರೆ ಸಮಾನತೆ ಸಾಧ್ಯ

ಈ ಸುದ್ದಿಯನ್ನು ಶೇರ್ ಮಾಡಿ

25

ಬೆಳಗಾವಿ,ಡಿ.12- ದೇಶದ ಚಿಂತಕರು ರಾಜಕೀಯ ವಿಷವರ್ತುಲದಿಂದ ಹೊರಗಿರುವ ಚಿಂತನೆಗಳನ್ನು ಮಾಡುವ ಮೂಲಕ ಬುದ್ಧ, ಬಸವರ ಕಾಲದಿಂದ ಗಾಂಧಿ ಹಾಗೂ ಅಂಬೇಡ್ಕರರವರೆಗೆ ಸಮಾಜದಲ್ಲಿ ಸಮಾನತೆಗಾಗಿ ನಡೆದ ಹೋರಾಟ ಯಶಸ್ವಿಗೊಳಿಸಲು ಸಾಧ್ಯ ಎಂದು ಭೂತರಾಮನಹಟ್ಟಿಯ ಮುಕ್ತಿ ಮಠದ ಶ್ರೀ ಶಿವಸಿದ್ಧ ಸೋಮೇಶ್ವರ ಶ್ರೀಗಳು ನುಡಿದರು. ಅವರು ನಗರದ ಕನ್ನಡ ಸಾಹಿತ್ಯ ಭವನದಲ್ಲಿ ನಿನ್ನೆ ಕರ್ನಾಟಕ ರಾಜ್ಯ ದಲಿತ ಸೇವಾ ಸಮಿತಿ ದ್ವಿತೀಯ ವಾರ್ಷಿಕೋತ್ಸವದ ನಿಮಿತ್ತ ರಾಮದುರ್ಗದ ಮೌಲ್ಯ ಸಂಪದ ಸೇವಾ ಸಂಸ್ಥೆ, ವಿಜಯನಗರದ ಶ್ರೀ ಸದ್ಗುರು ಸಾಹಿತ್ಯ ಪ್ರತಿಷ್ಠಾನ, ಕರ್ನಾಟಕ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಚಿಂತನಶೀಲ ಸಾಧಕರಿಗೆ ಚಿಂತನ ಸಿರಿ ಪ್ರಶಸ್ತಿ ಪ್ರದಾನ, ಬಸವಣ್ಣ ಮತ್ತು ಅಂಬೇಡ್ಕರರ ವಿಚಾರ ಚಿಂತನೆ ಉಪನ್ಯಾಸ ಹಾಗೂ ಶರಣರ ವಿಚಾರಗಳ ಕವಿಗೋಷ್ಠಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಾಮಾಜಿಕ ಹೋರಾಟಗಾರ, ಪತ್ರಿಕೋದ್ಯಮಿ ಕಲ್ಯಾಣರಾವ್ ಮುಚಳಂಬಿ ಮಾತನಾಡಿ, ಒಡೆದ ಮನಸ್ಸುಗಳನ್ನು ಕಟ್ಟುವ ಕಾರ್ಯ ಮಾಡುತ್ತ ನಾಡು ಕಟ್ಟಲು ಸಾಧ್ಯ. ಬುದ್ಧ, ಬಸವ, ಗಾಂಧಿ ಹಾಗೂ ಅಂಬೇಡ್ಕರರ ವಿಚಾರಗಳನ್ನು ಅಭ್ಯಸಿಸಿ ನೈಜವಾಗಿ ಆಚರಣೆಗೆ ತರಬೇಕು. ಬಸವ, ಅಂಬೇಡ್ಕರರ ಸಾಮಾಜಿಕ ಕ್ರಾಂತಿಯ ಫಲವಾಗಿ ಪರದೇಶದಲ್ಲೂ ಅವರ ಸ್ಮಾರಕಗಳನ್ನು ನಿರ್ಮಿಸುವಂತಾಗಿದೆ ಎಂದರು. ಉಪನ್ಯಾಸಕರಾಗಿ ಭಾಗವಹಿಸಿದ್ದ ಬಾಹು ಸಾಹೇಬ್ ಕಾಂಬಳೆ ಮಾತನಾಡಿ, ಈಗಲೂ ಶೇ.70ರಷ್ಟು ಹಳ್ಳಿಗಳಲ್ಲಿ ಅಸ್ಪೃಷ್ಯತೆ ಇದೆ. ಬಸವಧರ್ಮದ ನೈಜ ಆಚಾರಗಳು ಇಂದು ಕೆಲವೇ ಕೆಲವರ ಸ್ವತ್ತಾಗಿ ಉಳಿದಿವೆ. ಸಮಾನತೆ ಸರ್ವರ ಸಂವಿಧಾನಬದ್ಧ ಹಕ್ಕು. ಅಸಮಾನತೆಗೆ ಬೇಸತ್ತು ಜನ ಬಂಡೆದ್ದು ಕ್ರಾಂತಿಯಾಗುವ ಮೊದಲು ಬುದ್ಧಿವಂತರು ಎಚ್ಚೆತ್ತುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಸಾಮಾಜಿಕ ಸೇವೆಯ ಚಿಂತನಶೀಲ ಸಾಧಕರಾದ ರಾಜೇಂದ್ರಯ್ಯ ಮಿರ್ಜಿ, ಎಸ್.ಎಸ್. ಕಂಬಿಯವರ, ಜೆ.ಬಿ. ಜನವಾಡೆ, ವರದಾ ಜಿ. ಹೆಗಡೆ, ಶಿವಲಿಂಗಪ್ಪ ಗಸ್ತಿ, ಉಮಾ ದೊಡ್ಡಮನಿ, ರಮೇಶ ರಾಯಪ್ಪಗೋಳ, ರಮೇಶ ಪರವಿನಾಯ್ಕರ, ನಾಗಪ್ಪ ಧರಮಣ್ಣವರ, ಚಂದ್ರಕಾಂತ ಕಾದ್ರೊಳ್ಳಿ, ಜಿ.ಜಿ. ತಳವಾರ ಅವರಿಗೆ ಚಿಂತನ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಹಿರೇಮುನವಳ್ಳಿಯ ಶಾಂಡಿಲ್ಯೇಶ್ವರ ಮಠದ ಶ್ರೀ ಶಂಭುಲಿಂಗೇಶ್ವರ ಶಿವಾಚಾರ್ಯ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಸದ್ಗುರು ಸಾಹಿತ್ಯ ಪ್ರತಿಷ್ಠಾನದ ಅಧ್ಯಕ್ಷ ಬಸವರಾಜ ಸುಣಗಾರ, ಪತ್ರಕರ್ತ ಸೋಮಶೇಖರ ಸೊಗಲದ, ದಲಿತ ಸೇವಾ ಸಮಿತಿ ಸಂಸ್ಥಾಪಕ ಬಸವರಾಜ ಉಪ್ಪಾರಟ್ಟಿ ವಂದಿಸಿದರು.

 

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin