ಹೆಚ್ಚು ಪ್ರಯಾಣಿಕರ ಸಂಚಾರ : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 3 ನೇ ಸ್ಥಾನ

ಈ ಸುದ್ದಿಯನ್ನು ಶೇರ್ ಮಾಡಿ

Airport-Kempegowda

ಬೆಂಗಳೂರು, ಡಿ.16- ಮಾಹಿತಿ-ತಂತ್ರಜ್ಞಾನದ ಮೂಲಕ ಜಗತ್ತಿನ ಗಮನ ಸೆಳೆದಿರುವ ಕರ್ನಾಟಕ ರಾಜಧಾನಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದೇಶದಲ್ಲೇ ಮೂರನೆ ಅತಿ ಹೆಚ್ಚು ಪ್ರಯಾಣಿಕರು ಸಂಚರಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ.  ರಾಜಧಾನಿ ನವದೆಹಲಿ, ವಾಣಿಜ್ಯ ರಾಜಧಾನಿ ಮುಂಬೈ ಹೊರತುಪಡಿಸಿದರೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಸಕ್ತ ವರ್ಷ 20 ದಶಲಕ್ಷಕ್ಕೂ ಅಧಿಕ ಪ್ರಯಾಣಿಕರು ಸಂಚರಿಸಿದ್ದಾರೆ. ಪ್ರತಿದಿನ 55 ರಿಂದ 60 ಸಾವಿರ ಪ್ರಯಾಣಿಕರು ದೇಶ-ವಿದೇಶಗಳಿಗೆ ತೆರಳಿದರೆ ಕೆಲವು ಸಂದರ್ಭಗಳಲ್ಲಿ ವಾರಾಂತ್ಯದ ವೇಳೆ ಇದರ ಸಂಖ್ಯೆ 70 ರಿಂದ 75 ಸಾವಿರಕ್ಕೆ ಏರಿಕೆಯಾಗಿದೆ.

2021ಕ್ಕೆ 30 ದಶಲಕ್ಷ ಪ್ರಯಾಣಿಕರಿಗಾಗಿ ಕೆಐಎ ಈಗಾಗಲೇ ಟರ್ಮಿನಲ್ ವಿಸ್ತರಣೆ ಹಾಗೂ ಪ್ರಯಾಣಿಕರಿಗೆ ಬೇಕಾದ ಸೌಲಭ್ಯಗಳನ್ನು ಒದಗಿಸಲು ಗಮನ ಹರಿಸಿದೆ. ದಕ್ಷಿಣ ಭಾರತದಲ್ಲಿ ಮೊದಲ ಸ್ಥಾನದಲ್ಲಿದ್ದರೆ ಭಾರತದಲ್ಲೇ ಮೂರನೆ ಸ್ಥಾನ ಪಡೆದಿದೆ. ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಸಕ್ತ ವರ್ಷ 35 ಮಿಲಿಯನ್ ಪ್ರಯಾಣಿಕರು ಸಂಚರಿಸುವ ಮೂಲಕ ದಾಖಲೆ ಬರೆದಿದ್ದಾರೆ. ಇನ್ನು ಮುಂಬೈನ ಛತ್ರಪತಿ ಶಿವಾಜಿ ವಿಮಾನ ನಿಲ್ದಾಣದಲ್ಲಿ ಈ ವರ್ಷ 28 ಮಿಲಿಯನ್ ಪ್ರಯಾಣಿಕರು ದೇಶ-ವಿದೇಶಕ್ಕೆ ತೆರಳಿದ್ದಾರೆ. ಸ್ವಚ್ಛತೆ, ಪ್ರಯಾಣಿಕರ ಸುರಕ್ಷತೆ, ಮೂಲಭೂತ ಸೌಕರ್ಯ ಸೇರಿದಂತೆ ಮತ್ತಿತರ ಅಂಶಗಳಲ್ಲೂ ಬೆಂಗಳೂರು ಮುಂದಿದೆ.

ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಿದರೆ ಇನ್ನೂ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂಬುದು ವಿಮಾನ ನಿಲ್ದಾಣ ಪ್ರಾಧಿಕಾರಿಗಳ ಅಭಿಪ್ರಾಯ. ಈ ನಿಟ್ಟಿನಲ್ಲಿ ಸರ್ಕಾರವು ಕೂಡ ಈಗಾಗಲೇ ಕೆಲವು ತ್ವರಿತ ಕ್ರಮಗಳನ್ನು ಕೈಗೊಂಡಿದೆ.

>  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin