ತಕ್ಷಣವೇ ರಾಯಣ್ಣ ಬ್ರೀಗೇಡ್‍ನಿಂದ ಹೊರಬರಲೇಬೇಕು : ಈಶ್ವರಪ್ಪಗೆ ವರಿಷ್ಠರ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

Eshwarapa

ಬೆಂಗಳೂರು, ಡಿ.17- ಸದ್ಯದ ಪರಿಸ್ಥಿತಿಯಲ್ಲಿ ಪಕ್ಷಕ್ಕೆ ಮುಜುಗರ ಉಂಟಾಗಬಾರದೆಂದೆರೆ ತಕ್ಷಣವೇ ನೀವು ಸಂಗೊಳ್ಳಿ ರಾಯಣ್ಣ ಬ್ರೀಗೇಡ್‍ನಿಂದ ಹೊರಬರಲೇಬೇಕು ಎಂದು ಬಿಜೆಪಿ ರಾಷ್ಟ್ರೀಯ ಮುಖಂಡರು ಪಕ್ಷದ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪನವರಿಗೆ ಸೂಚಿಸಿದ್ದಾರೆ.  ಪಕ್ಷದ ವಿರೋಧ ಕಟ್ಟಿಕೊಂಡು ಬ್ರಿಗ್ರೇಡ್‍ನಲ್ಲಿ ಮುಂದುವರೆಯುವುದು ಅಷ್ಟು ಸಮಂಜಸವಲ್ಲ. ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇದಕ್ಕೆ ಪ್ರಬಲ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹೀಗೆ ಹಲವರ ವಿರೋಧದ ನಡುವೆ ನೀವು ಸಂಘಟನಾ ಕಾರ್ಯಕ್ರಮಗಳಲ್ಲಿ ಮುಂದುವರೆಸುವುದು ಸರಿಯಲ್ಲ. ಇದರಿಂದ ಪಕ್ಷದೊಳಗೆ ಗೊಂದಲ ಮೂಡಿ ಕಾರ್ಯಕರ್ತರ ನಡುವೆ ಭಿನ್ನಾಭಿಪ್ರಾಯ ಉಂಟಾಗುತ್ತದೆ. ಹೀಗಾಗಿ ರಾಯಣ್ಣ ಬಿಗ್ರೇಡ್ ಚಟುವಟಿಕೆಗಳಿಂದ ತಕ್ಷಣವೇ ವಿಮುಖರಾಗಬೇಕೆಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸೂಚನೆ ಕೊಟ್ಟಿದ್ದಾರೆ.

ನೀವು ಪಕ್ಷದ ಹಿತದೃಷ್ಟಿಯಿಂದ ಸಂಘಟನೆ ಮಾಡುತ್ತಿರಬಹುದು. ಇದರಿಂದ ಪಕ್ಷಕ್ಕೆ ಹಿಂದುಳಿದ, ದಲಿತ ಮತಗಳ ಕ್ರೋಢೀಕರಣವಾಗಬಹುದು. ಆದರೆ ಪಕ್ಷದ ಪ್ರಮುಖರೇ ಅಪಸ್ವರ ತೆಗೆದರೆ ಏನು ಮಾಡಲು ಸಾಧ್ಯವಿಲ್ಲ. ನಿಮ್ಮಂತಹ ಹಿರಿಯರ ವಿರುದ್ಧ ನೋಟೀಸ್ ನೀಡುವುದು, ಇಲ್ಲವೇ ಪಕ್ಷ ವಿರೋಧಿ ಚಟುವಟಿಕೆ ಮೇಲೆ ಕ್ರಮಕೈಗೊಳ್ಳುವುದು ಆಗದ ಮಾತು. ಪ್ರಮುಖರ ವಿರೋಧದ ನಡುವೆ ಮುಂದುವರೆಯುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆಯನ್ನು ಷಾ ಈಶ್ವರಪ್ಪನವರ ಮುಂದಿಟ್ಟಿದ್ದಾರೆ.

ನಮಗೆ ರಾಜ್ಯದಲ್ಲಿ ಪಕ್ಷವು ಅಧಿಕಾರಕ್ಕೆ ಬರಬೇಕು. 2019ರ ಲೋಕಸಭಾ ಚುನಾವಣೆ ನಮ್ಮ ಪಾಲಿಗೆ ಅತ್ಯಂತ ಮಹತ್ವದ್ದು. ದಕ್ಷಿಣ ಭಾರತದಲ್ಲಿ ಹೆಚ್ಚಿನ ಸ್ಥಾನ ನಿರೀಕ್ಷೆ ಇಟ್ಟುಕೊಂಡಿರುವ ಏಕೈಕ ರಾಜ್ಯವೆಂದರೆ ಅದುವೇ ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಾಂಗಣದಲ್ಲಿ ಪಕ್ಷದ ಸ್ಥಿತಿ ಗತಿ ನಿಮಗೇ ಚೆನ್ನಾಗಿ ತಿಳಿದಿದೆ. ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ ಸಾಕಷ್ಟು ಜೋರಾಗಿದೆ. ಇನ್ನು ಜೆಡಿಎಸ್ ಎಷ್ಟೇ ಅಬ್ಬರಿಸಿದರೂ ಬಹುಮತ ಪಡೆದು ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ.ಪಕ್ಷದ ಬಗ್ಗೆ ಮತದಾರರು ಒಲವು ತೋರುತ್ತಿರುವ ಸಂದರ್ಭದಲ್ಲಿ ನೀವು ಅಡ್ಡದಾರಿ ತುಳಿಯಬಾರದೆಂಬ ಹಿತವಚನವನ್ನೂ ಮಾಡಿದ್ದಾರೆ.

ಶಿವಮೊಗ್ಗ ವಿಧಾನಸಭಾ ಕ್ಷೇತ್ರದಿಂದ ನಿಮಗೆ ಟಿಕೇಟ್ ಕೈ ತಪ್ಪಲಿದೆ ಎಂಬ ಆತಂಕವೂ ಬೇಡ. ಹಾಗೊಂದು ವೇಳೆ ಕೈ ತಪ್ಪಿದರೂ ನೀವು ಹೇಗಿದ್ದರೂ ವಿಧಾನಪರಿಷತ್ ಸದಸ್ಯರಾಗಿದ್ದೀರಿ. ಇದೇ ಸ್ಥಾನದಲ್ಲಿ ಮುಂದುವರೆಯಲು ಅವಕಾಶವೂ ಇದೆ.ರಾಯಣ್ಣ ಬ್ರಿಗೇಡ್‍ಗೆ ಕೆಲವರು ಬೆಂಬಲ ನೀಡಬಹುದು. ಆದರೆ ಪಕ್ಷದ ಅಧ್ಯಕ್ಷರು ಮತ್ತು ರಾಜ್ಯ ಉಸ್ತುವಾರಿ ಅವರ ಸೂಚನೆಯನ್ನು ಧಿಕ್ಕರಿಸಿ ಮುಂದುವರೆಯುವುದು ಸರಿಯಲ್ಲ. ಹಾಗೊಂದು ವೇಳೆ ಸಂಘಟನೆ ಮಾಡಲೇಬೇಕೆಂದರೆ ಪಕ್ಷದಲ್ಲೇ ಹಿಂದುಳಿದ ವರ್ಗಗಳ ಮೋರ್ಚಾವಿದೆ.  ಇದರ ಮೂಲಕ ನೀವು ಪಕ್ಷದ ಎರಡನೇ ಹಂತದ ನಾಯಕರ ಮೂಲಕ ಸಂಘಟನೆಯಲ್ಲಿ ತೊಡಗಿಸಿಕೊಂಡರೆ ಎಲ್ಲರ ಬೆಂಬಲ ಸಿಗಲಿದೆ.ಅನಗತ್ಯವಾಗಿ ಪಕ್ಷದ ವಿರೋಧ ಕಟ್ಟಿಕೊಂಡು ಸಂಘಟನೆ ಮಾಡುವುದು ಬೇಡ. ಪಕ್ಷ ನಿಮಗೆ ಎಲ್ಲವನ್ನೂ ಕೊಟ್ಟಿರುವಾಗ ಕೆಲವು ಸಂದರ್ಭದಲ್ಲಿ ನೀವೂ ಕೂಡ ತ್ಯಾಗ ಮಾಡಲೇಬೇಕಾಗುತ್ತದೆ ಎಂದು ಅಮಿತ್‍ಷಾ ಈಶ್ವರಪ್ಪನಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಈಶ್ವರಪ್ಪ ಅಳಲು:

ನಾನು ಎಂದಿಗೂ ಪಕ್ಷದ ವಿರೋಧಿ ಚಟುವಟಿಕೆ ನಡೆಸಿದವನಲ್ಲ. ಪಕ್ಷ ನನಗೆ ತಾಯಿ ಇದ್ದಂತೆ. ಆ ತಾಯಿಗೆ ಎಂದೂ ದ್ರೋಹ ಎಸಗುವ ಕೆಲಸ ಮಾಡುವುದಿಲ್ಲ. ಆರ್‍ಎಸ್‍ಎಸ್‍ನಲ್ಲಿ ಬೆಳೆದು ಬಂದಿರುವ ನನಗೆ ಪಕ್ಷದ ಶಿಸ್ತು, ನೀತಿ ನಿಯಮಗಳು ತಿಳಿದಿವೆ. ಆದರೆ ಯಡಿಯೂರಪ್ಪ ರಾಜ್ಯಾಧ್ಯಕ್ಷರಾದ ಮೇಲೆ ನಡೆದುಕೊಳ್ಳುವ ರೀತಿ-ನೀತಿ ಸರಿಯಿಲ್ಲ. ಮೊದಲಿನಂತೆ ಈಗಲೂ ಕೂಡ ಏಕಪಕ್ಷೀಯ ತೀರ್ಮಾನ ತೆಗೆದುಕೊಳ್ಳುತ್ತಿದ್ದಾರೆ. ಪ್ರತಿಯೊಂದು ವಿಷಯದಲ್ಲೂ ಸಂಸದೆ ಶೋಭಾ ಕರಂದ್ಲಾಜೆ ಮೇಲೆ ಅವಲಂಬಿತರಾಗುತ್ತಾರೆ. ಮೊದಲು ಅವರನ್ನು ನಿಯಂತ್ರಿಸಬೇಕು. ಇದು ಕೇವಲ ನನ್ನೊಬ್ಬನ ಆರೋಪವಲ್ಲ, ನಾನು ನೇರವಾಗಿ ಹೇಳುತ್ತಿದ್ದೇನೆ. ಇನ್ನು ಕೆಲವರು ಇದನ್ನು ಹೇಳಲು ಹಿಂದೇಟು ಹಾಕುತ್ತಿದ್ದಾರೆ. ಮೊದಲಿಗೆ ಶೋಭಾ ಕಡಿವಾಣ ಮುಂದಾಗಬೇಕೆಂದು ಅಮಿತ್ ಷಾಗೆ ಮನವಿ ಮಾಡಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin