ಬ್ಯಾಂಕ್, ಎಟಿಎಂಗಳಲ್ಲಿ ಹಣ ಸಿಗದೆ ಜನ ಹೈರಾಣ, ಮಾರುಕಟ್ಟೆಗಳು ಬಣಬಣ

ಈ ಸುದ್ದಿಯನ್ನು ಶೇರ್ ಮಾಡಿ

ATM-01

ಬೆಂಗಳೂರು, ಡಿ.18- ನೋಟು ನಿಷೇಧಗೊಂಡು ಬರೋಬ್ಬರಿ 40 ದಿನಗಳು ಕಳೆದಿವೆ. ಬ್ಯಾಂಕ್, ಎಟಿಎಂಗಳ ಮುಂದೆ ಹಣಕ್ಕಾಗಿ ಗ್ರಾಹಕರು ಕ್ಯೂ ನಿಲ್ಲುತ್ತಿರುವುದು ತಪ್ಪಿಲ್ಲ. ಶೇ.90ರಷ್ಟು ಎಟಿಎಂಗಳು ಬಂದ್ ಆಗಿವೆ. ಬ್ಯಾಂಕ್‍ಗಳಲ್ಲಿ ಜನರ ಕೈಗೆ ನಿರೀಕ್ಷಿಸಿದ ಹಣ ಇನ್ನೂ ಸಿಗುತ್ತಿಲ್ಲ. ಕಾಳಧನಿಕರು, ಬ್ಯಾಂಕ್‍ನವರು ಶಾಮೀಲಾಗಿ ಹಲವೆಡೆ ಭಾರೀ ಪ್ರಮಾಣದ ಹಣ ವರ್ಗಾವಣೆ ಮಾಡಿಕೊಂಡಿರುವುದರಿಂದ ಜನಸಾಮಾನ್ಯರು ಹಣ ಸಿಗದೆ ಕಂಗಾಲಾಗಿದ್ದಾರೆ. 50 ದಿನಗಳಲ್ಲಿ ಆಗದಿದ್ದನ್ನು ಉಳಿದ 10 ದಿನಗಳಲ್ಲಿ ಏನು ಮಾಡುತ್ತಾರೆ. ನೋಟು ನಿಷೇಧ ಮಾಡಿದಂದಿನಿಂದಲೂ ಇಂದಿನವರೆಗೂ ಅದೇ ಸಮಸ್ಯೆ ಇದೆ. ವ್ಯಾಪಾರ-ವಹಿವಾಟಿಗೆ ಧಕ್ಕೆಯಾಗಿದೆ. ರೈತಾಪಿವರ್ಗಕ್ಕೆ ಹೊಡೆತ ಬಿದ್ದಿದೆ. ಗ್ರಾಮೀಣ ಪ್ರದೇಶಗಳ ಪರಿಸ್ಥಿತಿ ಹಣದ ಅಡಚಣೆಯಿಂದ ಹೇಳತೀರದಾಗಿದೆ.

ಎಟಿಎಂಗಳಲ್ಲಿ ಕನಿಷ್ಟ ಪ್ರಮಾಣದ ಹಣವನ್ನು ತೆಗೆಯಲು ಆಗುತ್ತಿಲ್ಲ. ಕನಿಷ್ಠ 2000ರೂ. ತೆಗೆಯಬೇಕು. ಅದಕ್ಕೂ ಕಡಿಮೆ ತೆಗೆಯಲು ಹೋದರೆ ಹಣವೇ ಬರುವುದಿಲ್ಲ. ನೋಟು ನಿಷೇಧದಿಂದ ಇನ್ನೂ ಗ್ರಾಹಕರು ಚೇತರಿಸಿಕೊಂಡಿಲ್ಲ. ಕ್ರೆಡಿಟ್, ಡೆಬಿಟ್ ಕಾರ್ಡ್‍ಗಳ ಮೂಲಕ ಪಾವತಿಸಿ ಡಿಜಿಟಲ್ ಇಂಡಿಯಾಕ್ಕೆ ಬೆಂಬಲಿಸಿ ಎಂಬ ಘೋಷಣೆಗಳು ಕೇಳಿಬರುತ್ತಿವೆ. ಆದರೆ, ಸ್ವೈಪಿಂಗ್ ಮೆಷಿನ್‍ಗಳಿಲ್ಲ. ಕನಿಷ್ಟ ಪ್ರಮಾಣದ ಹಣ ಚಲಾವಣೆಗೆ ಕೈಯಲ್ಲಿ ಕಾಸಿಲ್ಲ, ಬ್ಯಾಂಕ್‍ಗಳಲ್ಲಿ ವಿತ್‍ಡ್ರಾ ಮಾಡಿದರೂ ಗರಿಗರಿ 2000ರೂ. ಮುಖಬೆಲೆಯ ನೋಟುಗಳು ಸಿಗುತ್ತವೆ. ಖರ್ಚು ಮಾಡಲು ಹೋದರೆ ಚಿಲ್ಲರೆ ಸಿಗುತ್ತಿಲ್ಲ.

ಸದಾ ಗಿಜಿಗುಡುತ್ತಿದ್ದ ಎಪಿಎಂಸಿ, ಹಣ್ಣು-ತರಕಾರಿ, ಹೂವಿನ ಮಾರುಕಟ್ಟೆಗಳಲ್ಲಿ ಶೇಕಡ ಅರ್ಧದಷ್ಟು ಜನ ಇಲ್ಲ. ಕೊಳ್ಳುವವರೇ ಕಾಣುತ್ತಿಲ್ಲ. ಬಹುತೇಕ ಎಲ್ಲ ವ್ಯಾಪಾರ-ವಹಿವಾಟು ಕುಸಿದಿವೆ. ಎಟಿಎಂ ವ್ಯವಸ್ಥೆಗಳಿಲ್ಲದ ಗ್ರಾಮೀಣ ಪ್ರದೇಶಗಳಲ್ಲಿ ಹಣ ತೆಗೆಯಲಾರದೆ ಜನ ಬ್ಯಾಂಕ್ ಮುಂದೆ ನಿಲ್ಲುತ್ತಿದ್ದಾರೆ. ಸಹಕಾರಿ ಬ್ಯಾಂಕ್‍ಗಳಲ್ಲಿ ಹಣ ವಿನಿಮಯವಾಗದಿರುವ ಕಾರಣ ಕೃಷಿಕರ ಸಮಸ್ಯೆ ಮುಂದುವರಿದಿದೆ.  ಕಾರ್ಮಿಕರು, ನಿರ್ಮಾಣ ವಲಯದ ಕಾರ್ಮಿಕರು, ಕಾಫಿ ತೋಟಗಳಲ್ಲಿ ಕೆಲಸ ಮಾಡುವಂತಹವರು, ದಿನಗೂಲಿ ನೌಕರರು, ಕಾರ್ಪೆಂಟರ್, ಪೈಂಟರ್ ಸೇರಿದಂತೆ ಯಾರಿಗೂ ಹೆಚ್ಚು ಕೆಲಸ ಸಿಗುತ್ತಿಲ್ಲ. ಸಿಕ್ಕ ಕೆಲಸಕ್ಕೆ ನಿಗದಿತ ಕೂಲಿ ಬರುತ್ತಿಲ್ಲ. ಇದೆಲ್ಲ ನೋಟ್‍ಬ್ಯಾನ್ ಎಫೆಕ್ಟ್. ಯಾವಾಗ ಈ ಸಮಸ್ಯೆ ಬಗೆಹರಿಯುತ್ತದೆ. ಕೇಂದ್ರ ಸರ್ಕಾರ 50 ದಿನಗಳಲ್ಲಿ ನಿಮ್ಮ ಸಮಸ್ಯೆ ಬಗೆಹರಿಯುತ್ತದೆ. ಕಾಳ ಧನಿಕರನ್ನು ಮಟ್ಟ ಹಾಕುತ್ತೇವೆ ಎಂದು ಹೇಳಿತ್ತು. ಜನ ಭ್ರಷ್ಟಾಚಾರ, ಕಪ್ಪುಹಣ ತೊಲಗಲಿ. ನಮಗೆ ಸಮಸ್ಯೆಯಾದರೂ ಪರವಾಗಿಲ್ಲ ಎಂದು ಸಹಿಸಿಕೊಂಡಿದ್ದರು.

ಆದರೆ, ಆರ್‍ಬಿಐನವರು ಬ್ಯಾಂಕ್‍ಗಳವರೇ ಕಾಳ ಧನಿಕರೊಂದಿಗೆ ಶಾಮೀಲಾಗಿ ಭಾರೀ ಪ್ರಮಾಣದ ಹಣವನ್ನು ವರ್ಗಾವಣೆ ಮಾಡಿರುವುದು ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ.
2000, 4000 ಪಡೆಯಲು ದಿನವಿಡೀ ಕ್ಯೂ ನಿಲ್ಲಬೇಕು. ಬ್ಯಾಂಕ್‍ಗಳಿಗೆ ಹೋದರೆ ಅಷ್ಟು ಸಿಗುವುದಿಲ್ಲ, ಇಷ್ಟು ಸಿಗುವುದಿಲ್ಲ ಎನ್ನುತ್ತಾರೆ. ಆದರೆ, ದೊಡ್ಡದೊಡ್ಡವರಿಗೆ ಬಂಡಲ್‍ಗಟ್ಟಲೆ ಹಣ ಹೇಗೆ ಹೋಗುತ್ತದೆ. ಇದೇನಾ ನಮ್ಮ ವ್ಯವಸ್ಥೆ. ಇದನ್ನು ನಾವೇಕೆ ಸಹಿಸಿಕೊಂಡಿರಬೇಕು ಎಂದು ಹಲವರು ಅಲವತ್ತುಕೊಂಡಿದ್ದಾರೆ.

ಡಿಸೆಂಬರ್‍ನಲ್ಲಿ ಪ್ರವಾಸ ಹೋಗುವುದು, ಧನುರ್ಮಾಸದ ಈ ಸಂದರ್ಭದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ಇರುವುದು ಸಾಮಾನ್ಯ. ಆದರೆ, ನೊಟು ನಿಷೇಧದಿಂದ ಬಹುತೇಕ ಇವೆಲ್ಲ ಸ್ಥಗಿತವಾದಂತಾಗಿದೆ. ಪ್ರವಾಸ ಕಾರ್ಯಕ್ರಮಗಳು ರದ್ದಾಗಿವೆ. ದೇವಾಲಯಗಳಲ್ಲಿ ಪೂಜೆ, ಹೋಮ, ಹವನಗಳು ಅಷ್ಟಕ್ಕಷ್ಟೆ. ಹೂವು, ಹಣ್ಣು, ಗ್ರಂಥಿಗೆ ಅಂಗಡಿಗಳಲ್ಲಿ ನಿರೀಕ್ಷಿತ ವ್ಯಾಪಾರ ನಡೆಯುತ್ತಿಲ್ಲ. ಎಲ್ಲವೂ ಸರಿದಾರಿಗೆ ಬರಲು ಮತ್ತಷ್ಟು ದಿನ ಬೇಕಾಗುತ್ತದೆಯೋ ಕಾದು ನೋಡಬೇಕು. ನಿನ್ನೆ ಹಣಕಾಸು ಸಚಿವ ಅರುಣ್ ಜೇಟ್ಲಿಯವರು ಈ ವ್ಯವಸ್ಥೆ ಸರಿಹೋಗಲು ಇನ್ನೂ 50 ದಿನಗಳು ಬೇಕಾಗಬಹುದು ಎಂದು ಹೇಳಿದ್ದರು. ಅಂದರೆ ಜನಸಾಮಾನ್ಯರು ಇನ್ನೂ 50 ದಿನ ಸಮಸ್ಯೆಗಳೊಂದಿಗೆ ಇರಬೇಕು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin