ನೋಟು ನಿಷೇಧ ಖಂಡಿಸಿ ವಾಟಾಳ್ ವಿಭಿನ್ನ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

Vatal-Nagaraj-011

ಬೆಂಗಳೂರು, ಡಿ.20– ನೋಟು ನಿಷೇಧ ಮಾಡಿರುವುದರಿಂದ ಆರ್ಥಿಕ ಪರಿಸ್ಥಿತಿ ಬುಡಮೇಲಾಗಿದೆ. ಬಡವರ ಬದುಕು ಬೀದಿ ಪಾಲಾಗಿದೆ. ವ್ಯಾಪಾರ ವಹಿವಾಟು ಕುಸಿದು ಲಕ್ಷಾಂತರ ಜನ ಕಾರ್ಮಿಕರು ಕೆಲಸವಿಲ್ಲದೆ ಅಲೆದಾಡುತ್ತಿದ್ದಾರೆ. ಕೇಂದ್ರ ಸರ್ಕಾರದ ಕ್ರಮದಿಂದಾಗಿ ಹಣವಂತರಿಗೆ ಅನುಕೂಲವಾಯಿತೇ ಹೊರತು, ಬಡವರಿಗೆ ನ್ಯಾಯ ದೊರೆಯಲಿಲ್ಲ ಎಂದು ಆರೋಪಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನಗರದಲ್ಲಿಂದು ವಿನೂತನ ಚಳವಳಿ ನಡೆಸಿದರು.

ಕೆಂಪೇಗೌಡ ಬಸ್ ನಿಲ್ದಾಣದ ಬಳಿ ಕೇಂದ್ರದ ನೋಟು ನಿಷೇಧ ಕ್ರಮದಿಂದ ಆರ್ಥಿಕ ಪರಿಸ್ಥಿತಿ ಕಗ್ಗಂಟಾಗಿರುವುದನ್ನು ಎತ್ತಿನ ಗಾಡಿ ಮೇಲೆ ಇಟ್ಟು ತೋರಿಸುವ ಮೂಲಕ ಪ್ರತಿಭಟನೆ ನಡೆಸಿದ ವಾಟಾಳ್ ಅವರು, ನೋಟು ರದ್ಧತಿಯಿಂದ ಜನಸಾಮಾನ್ಯರು ಗೊಂದಲಕ್ಕೀಡಾಗಿದ್ದಾರೆ. ಆತಂಕದಿಂದ ಕಾಲ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.  ದೇಶದಲ್ಲಿರುವ ಭ್ರಷ್ಟಾಚಾರ ತೊಲಗಿಸಲು 500 ಮತ್ತು 1000 ನೋಟುಗಳ ರದ್ದುಪಡಿಸಿ ರುವ ಕ್ರಮವನ್ನು ಸ್ವಾಗತಿಸುತ್ತೇನೆ. ಆದರೆ ನಂತರ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಇದರಿಂದ ಜನಸಾಮಾನ್ಯರ ದೈನಂದಿನ ಬದುಕು ಬಿದ್ದು ಹೋಗಿದೆ. ವ್ಯಾಪಾರ ಇಲ್ಲ, ಹೊಟೇಲ್ ವ್ಯವಹಾರ ನಡೆಯುತ್ತಿಲ್ಲ. ಕೂಲಿ ಕಾರ್ಮಿಕರು ದಿಕ್ಕೆಟ್ಟು ಹೋಗಿದ್ದಾರೆ. ರಿಯಲ್ ಎಸ್ಟೇಟ್ ಸಂಪೂರ್ಣ ಬಿದ್ದು ಹೋಗಿರುವುದರಿಂದ ಅವಲಂಬಿತರು ಅತಂತ್ರರಾಗಿದ್ದಾರೆ ಎಂದು ಆರೋಪಿಸಿದರು.

ಪ್ರಧಾನಿ ನರೇಂದ್ರ ಮೋದಿ ಯವರು, ಆರ್ಥಿಕ ಸಚಿವ ಅರುಣ್ ಜೇಟ್ಲಿ ಅವರು ನೋಟು ನಿಷೇಧ ಆದರ್ಶ ಎಂದು ಹೇಳಿ ಕೊಳ್ಳುತ್ತಿದ್ದಾರೆ. ಆದರೆ ಜನರ ಪರಿಸ್ಥಿತಿಯನ್ನು ಅವರು ಗಮನಿಸುತ್ತಿಲ್ಲ. ನೋಟು ನಿಷೇಧದಿಂದ ಹಣವಂತರು ಬದುಕಿದರು. ತಮ್ಮ ಕಪ್ಪು ಗಂಟನ್ನು ಹೊಸ ನೋಟಿನಲ್ಲಿ ಸುಭದ್ರಪಡಿಸಿಕೊಂಡರು. ಆದರೆ ಸಣ್ಣಪುಟ್ಟ ಹಣ ಇಟ್ಟುಕೊಂಡಿದ್ದ ಬಡವರು ಬ್ಯಾಂಕ್‍ಗಳ ಮುಂದೆ ಅಲೆಯುಂತಾದರು. ದೇಶದಲ್ಲಿ ಕೆಲವೇ ಶ್ರೀಮಂತರು ತಮ್ಮಲ್ಲಿರುವ ಅಪಾರ ಸಂಪತ್ತನ್ನು ಆಡಿಟರ್‍ಗಳ ಮೂಲಕ ಸಕ್ರಮ ಮಾಡಿಕೊಳ್ಳುತ್ತಿದ್ದಾರೆ. ಅವರ ಅಕ್ರಮ ಸಂಪತ್ತನ್ನು ಸಕ್ರಮ ಮಾಡಿಕೊಳ್ಳಲು ಅವಕಾಶ ಮಾಡಿಕೊಡುವ ಸರ್ಕಾರ ಜನಸಾಮಾನ್ಯರಿಗೆ ದಿನಕ್ಕೊಂದು ನಿಯಮಗಳನ್ನು ರೂಪಿಸುತ್ತಿದೆ. ನಾವು ಹತ್ತು ವರ್ಷಗಳ ಹಿಂದೆ ಹೋಗಿದ್ದೇವೆ ಎಂಬಂತಾಗಿದೆ ಎಂದು ಹೇಳಿದರು.

ಜನಸಾಮಾನ್ಯರ ಮದುವೆ ಮಾಡಲು ನೂರಾರು ನಿಯಮ ರೂಪಿಸಲಾಗಿದೆ. ಆದರೆ ಅರಮನೆ ಮೈದಾನದಲ್ಲಿ ದೊಡ್ಡ ದೊಡ್ಡ ರಾಜಕಾರಣಿಗಳ ಮನೆಗಳಲ್ಲಿ ಪ್ರತಿದಿನ ಕೋಟ್ಯಂತರ ವೆಚ್ಚದಲ್ಲಿ ವೈಭವದ ಮದುವೆಗಳು ನಡೆಯುತ್ತಲೇ ಇವೆ. ಇವೆಲ್ಲ ಸರ್ಕಾರಗಳÀ ಕಣ್ಣಿಗೆ ಕಾಣುವುದಿಲ್ಲವೇ ಎಂದು ವಾಟಾಳ್ ಗುಡುಗಿದರು.
ನಗದು ರಹಿತ ವ್ಯವಸ್ಥೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಆದರೆ ಗ್ರಾಮೀಣ ಭಾಗದ ಜನರಿಗೆ ಇದರಿಂದ ಮತ್ತಷ್ಟು ತೊಂದರೆಯಾಗಲಿದೆ ಎಂದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin