ತಮಿಳುನಾಡು ಸರ್ಕಾರದ ಮುಖ್ಯ ಕಾರ್ಯದರ್ಶಿ ಮನೆ ಮತ್ತು ಕಚೇರಿ ಮೇಲೆ ಐಟಿ ರೇಡ್

ಈ ಸುದ್ದಿಯನ್ನು ಶೇರ್ ಮಾಡಿ

TN-CS

ಚೆನ್ನೈ,ಡಿ.21-ತಮಿಳುನಾಡು ಸರ್ಕಾರದ ಮುಖ್ಯ ಕಾರ್ಯದರ್ಶಿ ರಾಮ್‍ಮೋಹನ್ ರಾವ್ ನಿವಾಸ ಮತ್ತು ಕಚೇರಿಗಳೂ ಸೇರಿದಂತೆ ಏಳು ಸ್ಥಳಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು(ಐಟಿ) ಇಂದು ಬೆಳಗ್ಗೆ ದಿಢೀರ್ ದಾಳಿ ನಡೆಸಿದ್ದಾರೆ.   ಇಲ್ಲಿನ ಅಣ್ಣನಗರದಲ್ಲಿರುವ ರಾಮ್‍ಮೋಹನ್ ರಾವ್ ನಿವಾಸ, ಕಚೇರಿ ಹಾಗೂ ಸಂಬಂಧಿಕರ ಮನೆಗಳ ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸಿ ನಗದು, ಬೆಲೆ ಬಾಳುವ ಚಿನ್ನಾಭರಣಗಳು ಹಾಗೂ ಕೆಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಕಳೆದ ತಿಂಗಳಷ್ಟೇ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಮುಂಬಡ್ತಿ ಪಡೆದಿದ್ದ ರಾವ್, ಅಧಿಕಾರ ದುರುಪಯೋಗಪಡಿಸಿಕೊಂಡು ಅಕ್ರಮವಾಗಿ ಬೇನಾಮಿ ಹಣ, ವಹಿವಾಟು ನಡೆಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ.

ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವಧಿಯಲ್ಲಿ ಸಾಕಷ್ಟು ಪ್ರಭಾವಿಯಾಗಿದ್ದ ಮೋಹನ್‍ರಾವ್ ಆಡಳಿತ ಸುಧಾರಣೆಯ ಆಯುಕ್ತರಾಗಿದ್ದರಲ್ಲದೆ ಜಾಗೃತದಳದ ಹÉಚ್ಚುವರಿ ಆಯುಕ್ತರಾಗಿದ್ದರು. ಅವರ ಸೇವೆಯನ್ನು ಪರಿಗಣಿಸಿ ಸರ್ಕಾರ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಮುಂಬಡ್ತಿ ನೀಡಿತ್ತು.  ಕಳೆದ ನವೆಂಬರ್ 8ರಂದು ಪ್ರಧಾನಿ ನರೇಂದ್ರ ಮೋದಿ ದೇಶಾದ್ಯಂತ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳ ಚಲಾವಣೆಗೆ ನಿಷೇಧ ಹೇರಿದ್ದರು. ಇದಾದ ಬಳಿಕ ಕೆಲವು ಸರ್ಕಾರಿ ಅಧಿಕಾರಿಗಳೇ ರಿಯಲ್ ಎಸ್ಟೇಟ್ ಕುಳಗಳ ಜೊತೆ ಸೇರಿ ಬೇನಾಮಿ ಹಣ ವಹಿವಾಟಿನಲ್ಲಿ ಶಾಮೀಲಾಗಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ರಾವ್ ಕೂಡ ಭಾಗಿಯಾಗಿರುವ ಕಾರಣ ಐಟಿ ಅಧಿಕಾರಿಗಳು ಇಂದು ಬಿಸಿ ಮುಟ್ಟಿಸಿದ್ದಾರೆ.

ನಿನ್ನೆಯಷ್ಟೇ ಐಟಿ ಅಧಿಕಾರಿಗಳು ಮಧ್ಯಪ್ರದೇಶದ ರಾಜಧಾನಿ ಭೂಪಾಲ್‍ನಲ್ಲಿ ಬಿಜೆಪಿ ಮುಖಂಡ ಸುಶೀಲ್ ವಾಸ್ವಾನಿ ನಿವಾಸದ ಮೇಲೆ ದಾಳಿ ನಡೆಸಿ 1.6 ಕೋಟಿ 2000 ಮುಖಬೆಲೆಯ ನೋಟುಗಳನ್ನು ವಶಪಡಿಸಿಕೊಂಡಿದ್ದರು.  ಮತ್ತೊಂದೆಡೆ ಹರ್ಯಾಣದ ಗುರುಗಾಂವ್‍ನಲ್ಲಿ ದಾಳಿ ನಡೆಸಿ 2000 ಮತ್ತು 500 ರೂ. ಮುಖಬೆಲೆಯ ಎರಡು ಕೋಟಿ ನಗದನ್ನು ಜಪ್ತಿ ಮಾಡಿದ್ದರು. ಕಳೆದ 20 ದಿನಗಳಿಂದ ಐಟಿ ಅಧಿಕಾರಿಗಳು ದೇಶಾದ್ಯಂತ ಮಿಂಚಿನ ದಾಳಿ ನಡೆಸುತ್ತಿದ್ದಾರೆ. ಬ್ಯಾಂಕ್ ಅಧಿಕಾರಿಗಳು, ಪೊಲೀಸರು ಕಪ್ಪು ಕುಬೇರರ ಜೊತೆ ಶಾಮೀಲಾಗಿದ್ದರ ಹಿನ್ನೆಲೆಯಲ್ಲಿ ದಾಳಿ ಮುಂದುವರೆದಿದೆ.  ಇದುವರೆಗೂ ದೇಶಾದ್ಯಂತ 2600 ಕೋಟಿ ಅಕ್ರಮ ಆಸ್ತಿ ವಶಪಡಿಸಿಕೊಂಡಿದ್ದು, ಸುಮಾರು 300 ಪ್ರಕರಣಗಳನ್ನು ದಾಖಲಿಸಿದ್ದಾರೆ. ಇದಲ್ಲದೆ ಕೇಂದ್ರ ನೇರ ತೆರಿಗೆ ಮಂಡಳಿಯು ಮೂರು ಸಾವಿರ ನೋಟಿಸ್‍ಗಳನ್ನು ಕಪ್ಪು ಕುಬೇರರಿಗೆ ನೀಡಿದ್ದಾರೆ.  ಇದಲ್ಲದೆ ಭಾರೀ ಪ್ರಮಾಣದ ಚಿನ್ನಾಭರಣಗಳನ್ನು ಸಹ ವಶಕ್ಕೆ ಪಡೆಯಲಾಗಿದ್ದು , ಜನ್‍ಧನ್ ಖಾತೆಯಲ್ಲಿ ಅಕ್ರಮವಾಗಿ ಹಣ ಠೇವಣಿ ಮಾಡಿರುವವರ ಮೇಲೆ ಹದ್ದಿನಕಣ್ಣಿಡಲಾಗಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin