ಪೊಲೀಸ್ ಶ್ವಾನಗಳ ಪ್ರದರ್ಶನ : ಮೈ ಜುಮ್ ಎಣಿಸಿದ ಹರಿಯಾಣದ ಜಿಮ್ಮಿ ಸಾಹಸ

ಈ ಸುದ್ದಿಯನ್ನು ಶೇರ್ ಮಾಡಿ

Dog-01 ಮೈಸೂರು, ಡಿ.21-ನಗರದ ಕೆಎಸ್‍ಆರ್‍ಪಿ ಮೈದಾನದಲ್ಲಿ 60ನೆ ಅಖಿಲ ಭಾರತ ಪೊಲೀಸ್ ಕರ್ತವ್ಯ ಕೂಟದ ಅಂಗವಾಗಿ ಆಯೋಜಿಸಿದ್ದ ಪೊಲೀಸ್ ಶ್ವಾನಗಳ ಸ್ಪರ್ಧೆ ಹಾಗೂ ಪ್ರದರ್ಶನದಲ್ಲಿ ಶ್ವಾನಗಳು ತೋರಿದ ಸಾಹಸ ಮೈಜುಮ್ ಎನ್ನುವಂತಿತ್ತು. ಇಂದು ಬೆಳಗ್ಗೆ ಎಡಿಜಿಪಿ ಭಾಸ್ಕರರಾವ್ ಅವರು ಶ್ವಾನ ಪ್ರದರ್ಶನಕ್ಕೆ ಚಾಲನೆ ನೀಡಿದರು. ಈ ಸ್ಪರ್ಧೆಯಲ್ಲಿ ದೇಶದ ವಿವಿಧ ರಾಜ್ಯಗಳ 150ಕ್ಕೂ ಹೆಚ್ಚು ಶ್ವಾನಗಳು ಭಾಗವಹಿಸಿದ್ದವು. ದೆಹಲಿ, ಇಂಡೋ-ಪಾಕ್ ಬಾರ್ಡರ್ ತಂಡ, ಪಾಕ್ ಮತ್ತು ಪಂಜಾಬ್, ಕರ್ನಾಟಕ, ಹರಿಯಾಣದಿಂದ ಆಗಮಿಸಿದ್ದ ತಂಡ ವಿವಿಧ ಪ್ರಕರಣಗಳನ್ನು ಪತ್ತೆ ಹಚ್ಚುವ ಶ್ವಾನಗಳನ್ನು ಪ್ರದರ್ಶಿಸಿದರು.

ಮೊದಲು ಶ್ವಾನಗಳು ಯಾವ ರೀತಿ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚುತ್ತವೆ ಎಂಬ ಬಗ್ಗೆ ನಡೆದ ಸ್ಪರ್ಧೆಯಲ್ಲಿ ಹರಿಯಾಣದ ಜಿಮ್ಮಿ ಎಂಬ ಶ್ವಾನ ಎಲ್ಲರ ಗಮನಸೆಳೆಯಿತು.
ಈ ಶ್ವಾನ ಛತ್ತೀಸ್‍ಗಢದಲ್ಲಿ ನಕ್ಸಲೀಯರನ್ನು ಪತ್ತೆ ಹಚ್ಚಿತ್ತು. ಅಲ್ಲದೆ, ಮರಗಳ ಮೇಲೆ ಕಟ್ಟಿ ಬಚ್ಚಿಟ್ಟಿದ್ದಂತಹ ಸುಮಾರು 150 ಕೆಜಿ ತೂಕದ ಬಾಂಬನ್ನು ಪತ್ತೆ ಹಚ್ಚುವ ಮೂಲಕ ಸೈನಿಕರನ್ನು ರಕ್ಷಿಸುವಲ್ಲಿ ಈ ಶ್ವಾನ ಪ್ರಮುಖ ಪಾತ್ರ ವಹಿಸಿತ್ತು. ಈ ಶ್ವಾನ ಬಹಳ ಆಕ್ರಮಣಕಾರಿಯಾಗಿದ್ದು, ಗಡಿಗಳಲ್ಲಿ ಹಾಗೂ ಬೆಟ್ಟ-ಗುಡ್ಡಗಳಲ್ಲಿ ಭಯೋತ್ಪಾದಕರು, ನಕ್ಸಲೀಯರು ಅಡಗಿರುವ ತಾಣಗಳನ್ನು ಪತ್ತೆ ಹಚ್ಚಲು ಪ್ರಮುಖ ಪಾತ್ರ ವಹಿಸುತ್ತದೆ.

Dog-02

ನಕ್ಸಲೀಯರನ್ನು ಪತ್ತೆ ಹಚ್ಚುವಾಗ ಮೊದಲು ಈ ಶ್ವಾನ ಮುಂದಿರುತ್ತದೆ. ಇದರ ಹಿಂದೆ ಕಮಾಂಡೋಗಳು ಹಿಂಬಾಲಿಸುತ್ತಾರೆ. ಎರಡು ಕಿಲೋ ಮೀಟರ್ ದೂರದಿಂದಲೇ ಬಾಂಬ್ ಹಾಗೂ ನಕ್ಸಲೀಯರು ಇರುವುದನ್ನು ಪತ್ತೆ ಹಚ್ಚಿ ಆ ಸ್ಥಳದಲ್ಲಿ ಕುಳಿತು ತಲೆಯಾಡಿಸುತ್ತದೆ.  ಇದು ನೀಡುವ ಸುಳಿವಿನ ಮೇರೆಗೆ ಕಮಾಂಡೋಗಳು ಆ ಸ್ಥಳ ಸುತ್ತುವರೆದು ನಕ್ಸಲೀಯರನ್ನು ಪತ್ತೆ ಹಚ್ಚುತ್ತಾರೆ ಎಂದು ಶ್ವಾನದಳದ ಉಸ್ತುವಾರಿ ಕರ್ನಾಟಕದ ಭಾಸ್ಕರ್ ತಿಳಿಸಿದ್ದಾರೆ. ಈ ಶ್ವಾನದ ಮತ್ತೊಂದು ವಿಶಿಷ್ಟವೆಂದರೆ ಯಾರೇ ಆಹಾರ ನೀಡಿದರೂ ಇದು ತಿನ್ನುವುದಿಲ್ಲ. ಇದನ್ನು ನೋಡಿಕೊಳ್ಳುವವರೇ ಇದಕ್ಕೆ ಆಹಾರ ನೀಡಬೇಕು.

ಇನ್ನೂ ಕೆಲವು ಶ್ವಾನಗಳು ಕಳ್ಳರ ಪತ್ತೆ ಹಚ್ಚುವಲ್ಲಿ ಯಾವ ರೀತಿ ಮುನ್ನುಗ್ಗುತ್ತವೆ ಎಂಬ ಬಗ್ಗೆ ಪ್ರದರ್ಶನದಲ್ಲಿ ತೋರಿಸಲಾಯಿತು. ಈ ಶ್ವಾನಗಳು ಒಂದು ಬಾರಿ ನಕ್ಸಲರು ಅಥವಾ ಕಳ್ಳರ ಬಟ್ಟೆಯನ್ನು ಹಿಡಿದುಕೊಂಡರೆ ಕಮಾಂಡೋಗಳು ಹೇಳುವವರೆಗೂ ಬಿಡುವುದಿಲ್ಲ. ಇನ್ನೂ ಕೆಲವು ಶ್ವಾನಗಳು ಡ್ರಗ್ಸ್ ಪತ್ತೆ ಮತ್ತು ಅಪರಾಧ ನಡೆದ ಸ್ಥಳಗಳಲ್ಲಿ ವಾಸನೆ ಹಿಡಿದು ಆ ವ್ಯಕ್ತಿಯನ್ನು ಪತ್ತೆ ಹಚ್ಚುವಲ್ಲಿ ಯಾವ ರೀತಿ ಪ್ರಮುಖ ಪಾತ್ರ ವಹಿಸಲಿದೆ ಎಂಬುದನ್ನು ಪ್ರದರ್ಶನದಲ್ಲಿ ತೋರಿಸಿತು. ಈ ಸ್ಪರ್ಧೆ ವೀಕ್ಷಿಸಲು ಸಾರ್ವಜನಿಕರಿಗೆ ಮೈದಾನದೊಳಗೆ ಪ್ರವೇಶವಿರದ ಕಾರಣ, ಮೈದಾನದ ಹೊರಗೆ ಸಾರ್ವಜನಿಕರು ನಿಂತು ವೀಕ್ಷಿಸುತ್ತಿದ್ದುದು ಕಂಡು ಬಂತು. ಸಂಜೆ 4 ಗಂಟೆಯವರೆಗೂ ವಿವಿಧ ಶ್ವಾನಗಳ ಪ್ರದರ್ಶನ ನಡೆಯಲಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin