ತಮಿಳುನಾಡು ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ಗಿರಿಜಾ ವೈದ್ಯನಾಥನ್ ನೇಮಕ

ಈ ಸುದ್ದಿಯನ್ನು ಶೇರ್ ಮಾಡಿ

#GirijaVaidyanathan

ಚೆನ್ನೈ, ಡಿ.22- ಆದಾಯ ತೆರಿಗೆ ಇಲಾಖೆಯ ವ್ಯಾಪಕ ದಾಳಿಯಿಂದ ಕಳಂಕಕ್ಕೆ ಗುರಿಯಾಗಿರುವ ತಮಿಳುನಾಡು ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರಾಮಮೋಹನ್‍ರಾವ್ ಬದಲಿಗೆ ಆ ಸ್ಥಾನಕ್ಕೆ ಗಿರಿಜಾ ವೈದ್ಯನಾಥನ್ ಅವರನ್ನು ನೇಮಕ ಮಾಡಲಾಗಿದೆ. ಆದಾಯ ತೆರಿಗೆ ಅಧಿಕಾರಿಗಳು ನಿನ್ನೆ ರಾಮರಾವ್ ಮನೆ ಮತ್ತು ಕಚೇರಿ ಸೇರಿದಂತೆ 15ಕ್ಕೂ ಹೆಚ್ಚು ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ 30 ಲಕ್ಷ ರೂ. ನಗದು, 5ಕೆಜಿ ಚಿನ್ನ ಹಾಗೂ ಮತ್ತಿತರ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದ್ದರು.  ಈ ದಾಳಿಯಿಂದ ತೀವ್ರ ಮುಖಭಂಗಕ್ಕೆ ಒಳಗಾದ ತಮಿಳುನಾಡು ಸರ್ಕಾರ ಹಿರಿಯ ಐಎಎಸ್ ಅಧಿಕಾರಿ ಗಿರಿಜಾ ವೈದ್ಯನಾಥನ್ ಅವರನ್ನು ರಾಜ್ಯದ ಮುಖ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ.

ಸಂಕ್ಷಿಪ್ತ ಪರಿಚಯ: ಕಳೆದ ಮೂರು ದಶಕಗಳಿಂದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿ ಅಪಾರ ಅನುಭವ ಗಳಿಸಿರುವ ಡಾ.ಗಿರಿಜಾ ವೈದ್ಯನಾಥನ್, ತಮಿಳುನಾಡು ಕೇಡರ್‍ನ ಅಧಿಕಾರಿ. 1981ರಿಂದ ಭಾರತೀಯ ಆಡಳಿತಾತ್ಮಕ ಸೇವೆಯಲ್ಲಿರುವ ಗಿರಿಜಾ ವೈದ್ಯನಾಥನ್ ಅಭಿವೃದ್ಧಿ ಕ್ಷೇತ್ರದಲ್ಲಿ ರೂಪಿಸಲಾದ ಹಲವು ಯೋಜನೆಗಳ ಅನುಷ್ಠಾನ ಹಾಗೂ ಆರ್ಥಿಕ ಕ್ರೋಢೀಕರಣದಲ್ಲಿ ಸಾಕಷ್ಟು ಅನುಭವಿಯಾಗಿದ್ದಾರೆ. ಸುಮಾರು 15 ವರ್ಷಗಳಿಗೂ ಹೆಚ್ಚು ಕಾಲ ಆರೋಗ್ಯ, ಪೌಷ್ಟಿಕಾಂಶಗಳ ಆಹಾರ ಹಾಗೂ ಪರಿಸರ ಕ್ಷೇತ್ರಗಳಲ್ಲಿ ವಿವಿಧ ಪಕ್ಷಗಳ ನಾಯಕರ (ಸರ್ಕಾರಗಳ) ಆಡಳಿತಾವಧಿಯಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸಿ, ಆ ಕ್ಷೇತ್ರಗಳಿಗೆ ಹೊಸ ಆಯಾಮ ಕಲ್ಪಿಸಿದವರು.

ಇವರು ಆರೋಗ್ಯ ಖಾತೆಯಲ್ಲಿ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭ ತಮಿಳುನಾಡು ಉತ್ತಮ ಪ್ರದರ್ಶನದ ಪ್ರಶಸ್ತಿಯನ್ನು ಪಡೆದಿತ್ತು. ಆರೋಗ್ಯ ಕ್ಷೇತ್ರದ ವಿವಿಧ ವಿಭಾಗಗಳಲ್ಲಿ ನೇರವಾಗಿ ಪಾಲ್ಗೊಂಡು ಭಾರೀ ಸುಧಾರಣೆ ತಂದಿದ್ದರು. ವಿಶೇಷವಾಗಿ ಬಾಣಂತಿಯರು ಹಾಗೂ ನವಜಾತ ಶಿಶುಗಳ ಸಂರಕ್ಷಣೆ ಹಾಗೂ ಸಬಲೀಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಇವರ ಕಾರ್ಯಕ್ಷಮತೆ, ಸಾಧನೆಗಳಿಗಾಗಿ ತಮಿಳುನಾಡಿನ ಇಂಡಿಯನ್ ಇನ್ಸ್‍ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಡಾಕ್ಟರೇಟ್ ನೀಡಲಾಗಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin