ದೆಹಲಿ-ಬೆಂಗಳೂರಲ್ಲಿ 250 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಚಿನ್ನದ ಅಕ್ರಮ ವಹಿವಾಟು..!

ಈ ಸುದ್ದಿಯನ್ನು ಶೇರ್ ಮಾಡಿ

Costomes-01

ನವದೆಹಲಿ,ಡಿ.24-ದೇಶದ ರಾಜಧಾನಿ ನವದೆಹಲಿ ಭಾರೀ ಹಣಕಾಸು ಅಕ್ರಮಗಳು ಮತ್ತು ಅವ್ಯವಹಾರಗಳ ಕಾರಸ್ಥಾನವಾಗಿ ಪರಿವರ್ತಿತವಾಗಿದ್ದು , ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಿನ್ನೆಯಿಂದ ಆಭರಣ ಮಳಿಗೆಗಳ ಮೇಲೆ ನಡೆಸುತ್ತಿರುವ ಸತತ ದಾಳಿಗಳಲ್ಲಿ ಈವರೆಗೆ 250 ಕೋಟಿ ರೂ.ಗಳಿಗೂ ಹೆಚ್ಚು ಮೊತ್ತದ ಅಕ್ರಮ ವಹಿವಾಟು ಪತ್ತೆಯಾಗಿದೆ. ನಿಷೇಧಿತ 250 ಕೋಟಿ ರೂ.ಗಳನ್ನು ಚಿನ್ನಾಭರಣಗಳಾಗಿ ಪರಿವರ್ತಿಸಲಾಗಿದೆ ಎಂಬ ಸುಳಿವಿನ ಮೇರೆಗೆ ಈ ಸರಣಿ ದಾಳಿಗಳು ನಡೆದಿವೆ.  ಬೆಂಗಳೂರಿನ ಏಳು ಆಭರಣ ಮಳಿಗೆಗಳ ಮೇಲೆ ನಿನ್ನೆ ದಾಳಿಸಿರುವ ಐಟಿ ಅಧಿಕಾರಿಗಳು 47.74 ಕೋಟಿ ಮೊತ್ತದ ಅಕ್ರಮ ವಹಿವಾಟನ್ನು ಪತ್ತೆ ಮಾಡಿದ್ದರು.

ಆದಾಯ ತೆರಿಗೆ ಇಲಾಖೆ(ಐಟಿ) ಜಾರಿ ನಿರ್ದೇಶನಾಲಯ(ಇಡಿ) ಹಾಗೂ ಆದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್‍ಐ) ಅಧಿಕಾರಿಗಳು ದೆಹಲಿಯಲ್ಲಿ ನಡೆಸಿದ ದಾಳಿಯಲ್ಲಿ ಈವರೆಗೆ 450 ಕೋಟಿ ರೂ. ಮೌಲ್ಯದ ಅಕ್ರಮ ಚಿನ್ನಾಭರಣಗಳನ್ನು ಪತ್ತೆ ಮಾಡಿರುವುದು ಭಾರೀ ಅವ್ಯವಹಾರ ದಂಧೆಗಳಿಗೆ ಪುರಾವೆಯಾಗಿದೆ.  ನಿನ್ನೆ ರಾತ್ರಿ ದೆಹಲಿಯ 12 ಅಂಗಡಿಗಳು ಮತ್ತು ಎಂಟು ಮನೆಗಳ ಮೇಲೆ ದಾಳಿ ನಡೆಸಿದ ಐಟಿ ಅಧಿಕಾರಿಗಳು 250 ಕೋಟಿ ರೂ. ಮೊತ್ತದ ಚಿನ್ನದ ವಹಿವಾಟವನ್ನು ಪತ್ತೆ ಮಾಡಿದ್ದು , ಅನೇಕರನ್ನು ವಿಚಾರಣೆಗೊಳಪಡಿಸಿದ್ದಾರೆ.  ದೆಹಲಿ ಮತ್ತು ನೊಯ್ಡಾದ ಕಂಪನಿಗಳ ಮೇಲೆ ದಾಳಿ ನಡೆಸಿದ ಆದಾಯ ಗುಪ್ತಚರ ನಿರ್ದೇಶನಾಲಯ ಅಧಿಕಾರಿಗಳು 120 ಕೋಟಿ ರೂ. ಮೌಲ್ಯದ 430 ಕೆಜಿ ಚಿನ್ನ ಮತ್ತು 2.48 ಕೋಟಿ ರೂ.ಗಳ ಹಳೆ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.

ಇದಲ್ಲದೆ 12 ಲಕ್ಷ ರೂ. ಹೊಸ ಕರೆನ್ಸಿ, 80 ಕೆಜಿ ಬೆಳ್ಳಿ ಆಭರಣ ಮತ್ತು 15 ಕೆಜಿ ವಿವಿಧ ಚಿನ್ನಾಭರಣಗಳನ್ನು ಸಹ ಜಪ್ತಿ ಮಾಡಲಾಗಿದೆ.  ನಿನ್ನೆ ಬೆಂಗಳೂರಿನ ಏಳು ಪ್ರಸಿದ್ಧ ಆಭರಣ ಮಳಿಗೆಗಳ ಮೇಲೆ ದಾಳಿ ನಡೆಸಿದ ಐಟಿ ಅಧಿಕಾರಿಗಳು 47.74 ಕೋಟಿ ಮೊತ್ತದ ಅಕ್ರಮ ವಹಿವಾಟನ್ನು ಪತ್ತೆ ಮಾಡಿದ್ದರು. ಕೇಂದ್ರ ಸರ್ಕಾರ 500 ಮತ್ತು 1000 ಮುಖ ಬೆಲೆಯ ನೋಟುಗಳನ್ನು ರದ್ದುಪಡಿಸಿದ ನಂತರ ಈ ಆಭರಣ ಮಳಿಗೆಗಳು ಅಕ್ರಮ ವಹಿವಾಟು ನಡೆಸಿದ ಸುಳಿವಿನ ಮೇರೆಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin