ಪ್ರಜಾತಂತ್ರದ ಆಶಯಗಳು ಕ್ಷೀಣಿಸುತ್ತಿವೆಯೇ..?

ಈ ಸುದ್ದಿಯನ್ನು ಶೇರ್ ಮಾಡಿ

Note-ban-01

ಭಾರತದ ಆರ್ಥಿಕ ವ್ಯವಸ್ಥೆಯಲ್ಲಿ ನವೆಂಬರ್ 8ರ ನಂತರ ಅಭೂತ ಪೂರ್ವ ವಿದ್ಯಮಾನಗಳು ಕಂಡು ಬಂದಿವೆ.   ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ಪ್ರಜೆಗಳ ಹಿತಾಸಕ್ತಿಗಳಿಗೆ ಯಾವುದೇ ಮಹತ್ವದ ಕಾನೂನು ಮತ್ತು ನಿಯಮ ಅನುಷ್ಠಾನಗೊಳ್ಳಬೇಕಾದರೆ ಅದಕ್ಕೆ ಮಸೂದೆಯೊಂದನ್ನು ಜಾರಿಗೆ ತರಲಾಗುತ್ತದೆ. ಈ ಬಗ್ಗೆ ಸಂಸತ್‍ನಲ್ಲಿ ಆಡಳಿತ ಹಾಗೂ ವಿರೋಧ ಪಕ್ಷಗಳು ಪರಸ್ಪರ ಚರ್ಚೆ ನಡೆಸಿ ಅದರ ಸಾಧಕ-ಬಾಧಕಗಳನ್ನು ಗಣನೆಗೆ ತೆಗೆದುಕೊಂಡು ಕಾರ್ಯಗತಗೊಳಿಸುವುದು ವಾಡಿಕೆ. ಆದರೆ, ನವೆಂಬರ್ 8ರ ಮಧ್ಯರಾತ್ರಿಯಿಂದ ಹಠಾತ್ತನೆ ಜಾರಿಗೆ ಬಂದ 500 ಹಾಗೂ 1000ರೂ. ಮುಖ ಬೆಲೆ ನೋಟು ಅಮಾನ್ಯಗೊಳಿಸಿರುವ ಕ್ರಮವೂ ಜನತಂತ್ರ ವ್ಯವಸ್ಥೆಯಲ್ಲಿ ಒಂದು ವಿರಳ, ವಿಚಿತ್ರ ಬೆಳವಣಿಗೆಯಾಗಿದೆ.

ಪ್ರಜಾತಂತ್ರದ ಆಶಯ:

ಪ್ರಜಾತಾಂತ್ರಿಕ ವ್ಯವಸ್ಥೆಯ ಆಶಯಗಳನ್ನು ಆಡಳಿತದಲ್ಲಿ ಜಾರಿಗೊಳಿಸುವುದು ಜನನಾಯಕರಾದವರ ಹೊಣೆಯಾಗಿರುತ್ತದೆ. ಇಲ್ಲಿ ಪ್ರಜೆಗಳೇ ಪ್ರಭುಗಳಾದರೂ ಪ್ರಜಾಪ್ರಭುತ್ವದ ಸಾರಥಿಗಳು ಪ್ರಜೆಗಳಿಂದ ಚುನಾಯಿತರಾದ ಜನನಾಯಕರೇ. ಹಾಗಾಗಿ ಅವರು ಪ್ರಜಾಪ್ರಭುತ್ವದ ಮೂಲ ತತ್ವಗಳನ್ನು ಯಾವ ಆಯಾಮದಲ್ಲಿ ಅರ್ಥೈಸಿಕೊಂಡು ಅನುಷ್ಠಾನಕ್ಕೆ ತರುತ್ತಾರೆ ಎಂಬುದು ಚಿಂತನೆಗೆ ಹಚ್ಚುವ ವಿಚಾರ.  ಇದಕ್ಕೆ ನೋಟು ನಿಷೇಧ ಒಂದು ಉತ್ತಮ ಉದಾಹರಣೆ ಎನ್ನಬಹುದು. ಕೇಂದ್ರ ಸರ್ಕಾರವು ಅತ್ಯುನ್ನತ ಧ್ಯೇಯಗಳನ್ನಿಟ್ಟುಕೊಂಡು ಅಧಿಕ ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ್ದು ಸರಿಯಲ್ಲ ಎಂದೇನೂ ಹೇಳುವಂತಿಲ್ಲ. ಆದರೆ ಅದಕ್ಕಾಗಿ ರೂಪಿಸಿದ ನೀತಿ, ಜಾರಿಗೆ ತಂದ ರೀತಿಗಳು ಮಾತ್ರ ಸರಿಯಿಲ್ಲವೇನೊ ಎನಿಸುತ್ತದೆ.

ನಿರ್ದಿಷ್ಟ ಮೊತ್ತದ ಕರೆನ್ಸಿ ಎಂಬುದು ಕೇವಲ ನಂಬಿಕೆಯ ಮೇಲೆ ನಡೆಯುವ ವ್ಯವಹಾರ. ಇಂತಹ ನೋಟನ್ನು ಚಲಾವಣೆಗೆ ತರುವಾಗ ಅಥವಾ ಚಲಾವಣೆಯಿಂದ ರದ್ದುಗೊಳಿಸುವ ಸಂದರ್ಭ ಆಡಳಿತ ಯಂತ್ರದ ಇಡೀ ಜನಪ್ರತಿನಿಧಿಗಳು ಆ ಮಹತ್ತರ ಯಜ್ಞದಲ್ಲಿ ಪಾಲ್ಗೊಂಡಿರಬೇಕು. ಅಂದರೆ ಇಡೀ ದೇಶವನ್ನು ಪ್ರತಿನಿಧಿಸುವ 545 ಮಂದಿ ಸಂಸದರು(ಆಡಳಿತ ಪಕ್ಷ-ವಿಪಕ್ಷ) ಹಾಗೂ ಎಲ್ಲ ರಾಜಕೀಯ ವ್ಯಕ್ತಿಗಳು ಈ ವಿಷಯದಲ್ಲಿ ಒಮ್ಮತಕ್ಕೆ ಬರುವಂತೆ ಮಾಡುವುದು ಆಡಳಿತಾರೂಢ ಸರ್ಕಾರದ ನಾಯಕತ್ವ ವಹಿಸಿಕೊಂಡವರ ಕರ್ತವ್ಯ.  ಏಕೆಂದರೆ ಸರ್ಕಾರದ ಈ ನೀತಿಯನ್ನು ದೇಶದ 125 ಕೋಟಿ ಜನತೆಗೆ ತಲುಪಿಸುವ ಮತ್ತು ಅವರನ್ನು ಹೊಸ ವ್ಯವಸ್ಥೆಗೆ ಹೊಂದಿಕೊಳ್ಳುವಂತೆ ಅಣಿ ಮಾಡುವ ಹೊಣೆ ಇವರೆಲ್ಲರ ಮೇಲಿದೆ. ಹಾಗಾಗಿ ಈ ವಿಷಯ ಜನಪ್ರತಿನಿಧಿಗಳಿಗೇ ಅರಿವಿಲ್ಲದಂತೆ ಜಾರಿಯಾಗಿದ್ದರೆ ಇದು ಪ್ರಜಾಪ್ರಭುತ್ವಕ್ಕೆ ಶೋಭೆ ತರುವ ವಿಷಯವಲ್ಲ.

ಅದೇ ರೀತಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯ(ಆರ್‍ಬಿಐ) ಒಂದು ಸ್ವಾಯತ್ತ ಸಂಸ್ಥೆ. ಅದಕ್ಕೆ ಅದರದೇ ಆದ ರೀತಿ ರಿವಾಜುಗಳಿವೆ. ನೋಟು ನಿಷೇಧದ ಇಂದಿನ ಪರಿಸ್ಥಿತಿಯನ್ನು ಅವಲೋಕಿಸಿದರೆ ನಿಜಕ್ಕೂ ಆರ್‍ಬಿಐ ಇದರಲ್ಲಿ ತಾನು ಪಾಲುದಾರನೇ ಅಥವಾ ಆ ಸಂಸ್ಥೆಯ ಮೇಲೆ ಇಂಥದೊಂದು ತೀರ್ಮಾನವನ್ನು ಹೇರಲಾಗಿದೆಯೇ ಎಂಬುದು ಚರ್ಚೆಯಾಗಬೇಕು. ಆಗ ಮಾತ್ರ ಪ್ರಜಾಪ್ರಭುತ್ವದ ಆಶೋತ್ತರಗಳು ಈಡೇರಲಿವೆ ಎಂದು ಸಮಾಧಾನಪಟ್ಟುಕೊಳ್ಳಬಹುದು. ಆದರೆ ನೋಟು ನಿಷೇಧ ಮತ್ತು ನಂತರದ ಎಲ್ಲಾ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಇಲ್ಲಿ ಪ್ರಜಾತಂತ್ರದ ಆಶಯಗಳ ಕೊರತೆ ಇರುವುದು ಎದ್ದು ಕಾಣುತ್ತದೆ.

ಮುಂದಾಲೋಚನೆ ಅಗತ್ಯ:

ಯಾವುದೇ ಮುಂದಾಲೊಚನೆ ಇಲ್ಲದೆ ಕೇಂದ್ರ ಸರ್ಕಾರ ಈ ನಿರ್ಧಾರವನ್ನು ತರಾತುರಿಯಲ್ಲಿ ತೆಗೆದುಕೊಂಡಿದೆ ಎಂದು ವಿಪಕ್ಷಗಳು ನವೆಂಬರ್ 9ರಿಂದ ದೇಶಾದ್ಯಂತ ವ್ಯಾಪಕ ಪ್ರತಿಭಟನೆ ನಡೆಸುತ್ತಿವೆ. ದೇಶ ಹಾಗೂ ರಾಷ್ಟ್ರದ ಜನತೆಗಾಗಿ ನಿರ್ಧಾರಗಳನ್ನು ಕೈಗೊಳ್ಳುವ ಭಾರತದ ಶಕ್ತಿ ಕೇಂದ್ರವಾದ ಪಾರ್ಲಿಮೆಂಟ್‍ನಲ್ಲಿ ನೋಟು ರದ್ದತಿ ವಿಷಯ ಮಾರ್ದನಿಸಿ ಹಿಂದೆಂದೂ ಕಂಡು ಕೇಳರಿಯದಂತಹ ಗದ್ದಲ, ಕೋಲಾಹಲಕ್ಕೆ ಕಾರಣವಾಯಿತು. ಸಂಸತ್‍ನ ಚಳಿಗಾಲದ ಅಧಿವೇಶನದ 26 ದಿನಗಳು ಕಲಾಪ ನಡೆಯದೆ ಸದನದ ಅಮೂಲ್ಯ ಸಮಯ ಮತ್ತು ಹಣ ವ್ಯರ್ಥಕ್ಕೆ ಕಾರಣವಾಯಿತು. ಈ ಎಲ್ಲಾ ಬೆಳವಣಿಗೆಗಳನ್ನು ಅವಲೋಕಿಸಿದರೆ ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಎಷ್ಟರ ಮಟ್ಟಿಗೆ ಫಲಪ್ರದವಾಗುತ್ತದೆ ಎಂಬ ದೊಡ್ಡ ಪ್ರಶ್ನೆ ಹುಟ್ಟಿಕೊಳ್ಳುವುದು ಸಹಜ.
ಪ್ರಧಾನಮಂತ್ರಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ 30 ತಿಂಗಳಿನಲ್ಲಿ 23ಸುಗ್ರೀವಾಜ್ಞೆಗಳನ್ನು ಹೊರಡಿಸಿದೆ. ಆದರೆ, ನೋಟು ರದ್ದತಿ ವಿಷಯದಲ್ಲಿ ಯಾವುದೇ ಮುಂದಾಲೋಚನೆ ಇಲ್ಲದೆ ತರಾತುರಿಯಲ್ಲಿ ಈ ನಿರ್ಧಾರ ಕೈಗೊಳ್ಳಲು ಕಾರಣವೇನು ಎಂಬ ಬಗ್ಗೆ ರಾಜಕೀಯ ಪಂಡಿತರು ಪ್ರಶ್ನೆ ಮಾಡುತ್ತಲೇ ಇದ್ದಾರೆ.

ಈ ವಿಷಯದಲ್ಲಿ ಕಾನೂನು ರೂಪಿಸುವವರು, ಅಧಿಕಾರ ವರ್ಗದವರು ಮತ್ತು ವಿವಿಧ ಇಲಾಖೆಗಳ ನಡುವೆ ಭಿನ್ನಾಭಿಪ್ರಾಯಗಳ ದೊಡ್ಡ ಕಂದಕವೇ ಸೃಷ್ಟಿಯಾಗಿರುವುದು ಪ್ರಜಾಪ್ರಭುತ್ವವ್ಯವಸ್ಥೆಯ ದುರಂತವೆಂದೇ ರಾಜಕೀಯ ವಿಜ್ಞಾನಿಗಳು ಬಣ್ಣಿಸುತ್ತಿದ್ದಾರೆ. ಒಬ್ಬ ನಾಯಕನಾದವನ ಕಿವಿಯು ಜನರ ದ್ವನಿಯೊಂದಿಗೆ ಮೊಳಗಿ ಆತ ಎಚ್ಚೆತ್ತುಕೊಳ್ಳಬೇಕು ಎಂದು ಅಮೆರಿಕದ 28ನೇ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ, ಸ್ವತಃ ರಾಜಕೀಯ ಮೇಧಾವಿಯೂ ಆದ ವುಡ್‍ರೊವಿಲ್ಸನ್ ವಿಶ್ಲೇಷಿಸುತ್ತಿರುವುದು ಭಾರತದ ಪ್ರಸ್ತುತ ಪರಿಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ.
ಕೇಂದ್ರ ಸರ್ಕಾರ ಕೈಗೊಂಡಿರುವ ನಿರ್ಧಾರವು ಒಳಿತನ್ನೇ ಬಯಸುತ್ತದೆಯಾದರೂ ಅದನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಲ್ಲಿ ಸಂಪೂರ್ಣ ಎಡವಿದೆ ಎಂಬ ಕಳಂಕವು ಅಂಟಿಕೊಂಡಿದೆ.

ಜನತೆಯ ನೋವು, ಸಂಕಷ್ಟಗಳಿಗೆ ಹಿಂದಿನ ಮತ್ತು ಈಗಿನ ಸರ್ಕಾರಗಳು ಸ್ಪಂದಿಸಿಲ್ಲ, ಸ್ಪಂದಿಸುತ್ತಿಲ್ಲ ಎಂಬ ಸಾರ್ವತ್ರಿಕ ಅಸಮಾಧಾನಗಳು ಈಗಲೂ ಮುಂದುವರೆದಿದೆ.
ಇವೆಲ್ಲವನ್ನು ಗಮನಿಸಿದರೆ ವಿಶ್ವದ ಅತಿದೊಡ್ಡ ಜನತಂತ್ರ ವ್ಯವಸ್ಥೆ ಇರುವ ಭಾರತದಲ್ಲಿ ಪ್ರಜಾಪ್ರಭುತ್ವದ ಆಶೋತ್ತರಗಳ ಯಥಾವತ್ ಅನುಷ್ಠಾನದ ಕೊರತೆ ಇದೆಯೇ ಎಂಬ ಯಕ್ಷಪ್ರಶ್ನೆ ಈಗ ಭೂತಾಕಾರವಾಗಿ ಕಾಡ ತೊಡಗಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin