ರಸ್ತೆಗಿಳಿದ 25 ಬಯೋಬಸ್ ಗಳು : ಮಾರ್ಚ್’ನಲ್ಲಿ ಬಿಎಂಟಿಸಿಗೆ 1650 ಹೊಸ ಬಸ್ ಖರೀದಿ

ಈ ಸುದ್ದಿಯನ್ನು ಶೇರ್ ಮಾಡಿ

Bio-Bus

ಬೆಂಗಳೂರು, ಡಿ.24- ದೇಶದಲ್ಲೇ ಪ್ರಪ್ರಥಮ ಬಾರಿಗೆ ಪರಿಚಯಿಸುತ್ತಿರುವ 25 ಬಯೋಬಸ್ (ಜೈವಿಕ ಇಂಧನ ಚಾಲಿತ) ಬಸ್‍ಗಳಿಗೆ ಇಂದು ವಿಧ್ಯುಕ್ತ ವಾಗಿ ಚಾಲನೆ ದೊರೆಕಿತು. ನಗರದ ಕೆಎಸ್‍ಆರ್‍ಟಿಸಿ ಕೇಂದ್ರ ಕಚೇರಿಯಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಕುಮಾರ್ ಕಟಾರಿಯಾ ಸೇರಿದಂತೆ ಮತ್ತಿತರರು 25 ನೂತನ ಬಯೋಬಸ್‍ಗಳಿಗೆ ಹಸಿರು ನಿಶಾನೆ ತೋರಿದರು.  ಪ್ರಾರಂಭಿಕ ಹಂತದಲ್ಲಿ ಈ ಬಸ್‍ಗಳು ಬೆಂಗಳೂರು-ಕುಂದಾಪುರ, ಬೆಂಗಳೂರು-ಚೆನ್ನೈ, ಬೆಂಗಳೂರು- ತಿರುಪತಿ, ಬೆಂಗಳೂರು- ಬೀದರ್ ನಡುವೆ ಸಂಚರಿಸಲಿವೆ.  ಸಾರ್ವಜನಿಕರಿಂದ ವ್ಯಕ್ತವಾಗುವ ಅಭಿಪ್ರಾಯಗಳನ್ನಧರಿಸಿ ಮುಂದಿನ ದಿನಗಳಲ್ಲಿ ಜೈವಿಕ ಬಸ್‍ಗಳನ್ನು ರಾಜ್ಯಾದ್ಯಂತ ವಿಸ್ತರಿಸುವ ಗುರಿ ಸಾರಿಗೆ ಇಲಾಖೆ ಹೊಂದಿದೆ.
ತಲಾ 93 ಲಕ್ಷ ವೆಚ್ಚದಲ್ಲಿ ಈ ಬಸ್‍ಗಳನ್ನು ಖರೀದಿಸಲಾಗಿದೆ. ಪರಿಸರ ಸ್ನೇಹಿ, ಮಾಲಿನ್ಯ ನಿಯಂತ್ರಣ ಹಾಗೂ ಡೀಸಲ್ ದರಕ್ಕಿಂತ ಕಡಿಮೆ ವೆಚ್ಚದಲ್ಲಿ ಜೈವಿಕ ಇಂಧನ ಲಭ್ಯವಾಗಲಿದೆ. ಒಂದು ವೇಳೆ ಪ್ರಯಾಣಿಕರಿಂದ ಸಕಾರಾತ್ಮಕ ವಾದ ಅಭಿಪ್ರಾಯ ವ್ಯಕ್ತವಾದರೆ ಮುಂದಿನ ದಿನಗಳಲ್ಲಿ ಈ ಸೇವೆ ರಾಜ್ಯಾದ್ಯಂತ ವಿಸ್ತರಣೆಯಾಗಲಿದೆ.

ಮಲಿನಕಾರಕ, ಜೈವಿಕ ಕುಸಿತ, ಪುನರ್ ನವೀಕರಣ, ರೈತ ಸ್ನೇಹಿ, ಸುರಕ್ಷಿತ ಕಡಿಮೆ ವಿಷಯುಕ್ತ ಮಾಲಿನ್ಯಕಾರಕ, ಮರುಬಳಕೆ ಮತ್ತು ಮಿತವ್ಯಯಕಾರಿ, ಪುನರ್ ನವೀಕರಣ ಸೇರಿದಂತೆ ಜೈವಿಕ ಇಂಧನ ಹಲವು ವೈವಿಧ್ಯಮಯಗಳನ್ನು ಒಳಗೊಂಡಿದೆ.

ನಗದು ರಹಿತಕ್ಕೆ ಕ್ರಮ:

ಮುಂದಿನ ದಿನಗಳಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ನಗದು ರಹಿತ (ಕ್ಯಾಷ್‍ಲೆಸ್)ಕ್ಕೆ ಒತ್ತು ನೀಡಲಿದೆ. ಈಗಾಗಲೇ ಸಿಬ್ಬಂದಿಗೆ ಇದರ ಬಗ್ಗೆ ತರಬೇತಿ ನೀಡುವ ಕಾರ್ಯಾಗಾರ ಅಂತಿಮ ಹಂತದಲ್ಲಿದೆ ಎಂದು ತಿಳಿಸಿದರು. ಪ್ರಾಯೋಗಿಕವಾಗಿ ಇದನ್ನು ಕೆಲವು ಕಡೆ ಜಾರಿ ಮಾಡಲಾಗುವುದು. ಪ್ರಯಾಣಿಕರಿಂದ ಉತ್ತಮ ಅಭಿಪ್ರಾಯ ವ್ಯಕ್ತವಾದರೆ ರಾಜ್ಯಾದ್ಯಂತ ವಿಸ್ತರಣೆ ಮಾಡುವ ಬಗ್ಗೆ ಚಿಂತನೆ ನಡೆದಿದೆ ಎಂದರು.

ಇನ್ನಷ್ಟು ಬಸ್ ಖರೀದಿ:

ಬಸ್ ಸಂಚಾರಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾರ್ಚ್ ತಿಂಗಳಲ್ಲಿ ಬಿಎಂಟಿಸಿಗೆ 1650 ಬಸ್‍ಗಳನ್ನು ಖರೀದಿಸುವುದಾಗಿ ತಿಳಿಸಿದರು.  ನಗರದಲ್ಲಿ ಬಿಎಂಟಿಸಿ ಸಾರಿಗೆ ಸೇವೆಯನ್ನು ಹೆಚ್ಚೆಚ್ಚು ಜನ ಅವಲಂಬಿಸುತ್ತಿದ್ದಾರೆ. ಇದಕ್ಕಾಗಿ ಸಂಸ್ಥೆ ಹೊಸ ಬಸ್‍ಗಳನ್ನು ಖರೀದಿಸಲು ತೀರ್ಮಾನಿಸಿದೆ. ಜನರಿಗೆ ಉತ್ತಮ ಸೇವೆ ಒದಗಿಸುವುದು ಸಂಸ್ಥೆಯ ಹೆಗ್ಗುರಿ ಎಂದು ಹೇಳಿದರು. ಶಾಲಾ ಆಡಳಿತ ಮಂಡಳಿ ಮಕ್ಕಳ ಸುರಕ್ಷತೆಗೆ ಗಮನಹರಿಸಬೇಕು. ಸುರಕ್ಷಿತ ಕ್ರಮಗಳನ್ನು ಅವರೇ ತೆಗೆದುಕೊಳ್ಳುವುದು ಉತ್ತಮ. ಈಗಾಗಲೇ ಆಡಳಿತ ಮಂಡಳಿಗೆ ನಾವು ಈ ಬಗ್ಗೆ ನಿರ್ದೇಶನವನ್ನೂ ನೀಡಿದ್ದೇವೆ. ಅಲ್ಲದೆ, ನಮ್ಮ ಸಿಬ್ಬಂದಿಗೂ ಈ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ ಎಂದರು.

ನಗರದ ಹೊರಭಾಗಕ್ಕೂ ಸಾರಿಗೆ ಸೇವೆ ಒದಗಿಸುವ ಯೋಜನೆ ಹಾಕಿಕೊಳ್ಳ ಲಾಗಿದೆ. ಇನ್ನು 2-3 ವರ್ಷದೊಳಗೆ ಹೊರವಲಯದಲ್ಲಿ ಬಸ್ ನಿಲ್ದಾಣಗಳನ್ನು ನಿರ್ಮಿಸುವುದಾಗಿ ತಿಳಿಸಿದರು.
ಕೆಎಸ್‍ಆರ್‍ಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರಕುಮಾರ್ ಕಟಾರಿಯಾ ಮಾತನಾಡಿ, ಪ್ರಾಯೋಗಿಕವಾಗಿ ಆರಂಭವಾಗಿ ರುವ ಬಸ್‍ಗಳಿಗೆ ಆಂಧ್ರಪ್ರದೇಶದಿಂದ ಜೈವಿಕ ಇಂಧನ ಖರೀದಿಸಲಾಗುತ್ತದೆ. ನಮಗೆ ಡೀಸಲ್ ದರಕ್ಕಿಂತಲೂ 5 ರೂ. ಕಡಿಮೆ ವೆಚ್ಚದಲ್ಲಿ ಸಿಗಲಿದೆ. ಜೊತೆಗೆ ಮಾಲಿನ್ಯ ನಿಯಂತ್ರಣ, ಪರಿಸರ ಸ್ನೇಹಿಯಾಗಿರುವುದರಿಂದ 25 ಬಸ್‍ಗಳನ್ನು ಖರೀದಿಸಿದ್ದೇವೆ. ಚಾಲಕರು ಮತ್ತು ಸಾರ್ವಜನಿಕರ ಅಭಿಪ್ರಾಯ ಪಡೆದೇ ಬಸ್‍ಗಳ ಖರೀದಿಗೆ ತೀರ್ಮಾನಿಸಲಾಯಿತು ಎಂದು ಹೇಳಿದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin