ರಾಜ್ಯದಲ್ಲಿನ ಸಾರಿಗೆ ನೌಕರರಿಗಾಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ

ಈ ಸುದ್ದಿಯನ್ನು ಶೇರ್ ಮಾಡಿ

BMMMTC

ಬೆಂಗಳೂರು,ಡಿ.25- ರಾಜ್ಯದಲ್ಲಿನ ಸಾರಿಗೆ ನೌಕರರಿಗಾಗಿ ಬಿಎಂಟಿಸಿ ವತಿಯಿಂದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸುತ್ತೇವೆ ಎಂದು ಬಿಎಂಟಿಸಿ ಅಧ್ಯಕ್ಷ ಎಂ.ನಾಗರಾಜು ಯಾದವ್ ತಿಳಿಸಿದರು.   ನಗರದ ನಯನ ಸಭಾಂಗಣದಲ್ಲಿ ಬಿಎಂಟಿಸಿ ಕನ್ನಡ ಕ್ರಿಯಾ ಸಮಿತಿಯಿಂದ ಹಮ್ಮಿಕೊಳ್ಳಲಾಗಿದ್ದ ಡಾ.ರಾಜ್ ರಂಗಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಸಾರಿಗೆ ಸಂಸ್ಥೆಯ ನೌಕರರ ಆರೋಗ್ಯದ ಕಾಳಜಿ ಹಿನ್ನಲೆಯಲ್ಲಿ ಈ ಯೋಜನೆ ರೂಪಿಸಲಾಗಿದೆ ಎಂದರು.   ನಮ್ಮ ಸಂಸ್ಥೆಯಲ್ಲಿ ಅನೇಕ ರಂಗ ಕಲಾವಿದರಿದ್ದಾರೆ. ಅವರ ರಂಗ ಚಟುವಟಿಕೆಗಳಿಗೆ ನೆರವಾಗುವಂತೆ ನಗರದಲ್ಲಿರುವ ಸಂಸ್ಥೆಯ ಜಮೀನಿನಲ್ಲಿ ಸಾರಿಗೆ ಕಲಾವಿದರ ಭವನ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನುಬಳಿಗಾರ್ ಮಾತನಾಡಿ, ರಾಜ್ಯದ ಸಾರಿಗೆ ಸಂಸ್ಥೆಗಳಲ್ಲಿ 1.5ಲಕ್ಷಕ್ಕಿಂತ ಹೆಚ್ಚಿರುವ ನೌಕರರಲ್ಲಿ ಲೇಖಕರು, ಕಲಾವಿದರು, ಸಾಹಿತ್ಯಾಸಕ್ತರು ಇದ್ದಾರೆ. ಇಂತಹ ನೌಕರರಿಗಾಗಿ ಪ್ರತ್ಯೇಕ ಸಾಹಿತ್ಯ ಸಮ್ಮೇಳನ ಆಯೋಜಿಸಬೇಕು, ಇವರ ನೆರವಿಗೆ, ಸಲಹೆ, ಸೂಚನೆ ನೀಡಲು ಪರಿಷತ್ ಸಿದ್ಧವಿದೆ ಎಂದು ತಿಳಿಸಿದರು.  ಡಾ.ರಾಜ್‍ಕು ಮಾರ್ ಅವರು ರಂಗಭೂಮಿಯಿಂದ ಬೆಳ್ಳಿ ತೆರೆಗೆ ಬಂದವರಾಗಿದ್ದರು. ಅವರ ಗುಣಗಳು ಇತರರಿಗೂ ಮಾದರಿ. ಆದರೆ ಇಂದಿನ ನಟರಲ್ಲಿ ಅಂತಹ ಗುಣಗಳು ಇಲ್ಲ ಎಂದು ವಿಷಾದಿಸಿದರು.

ಹಿರಿಯ ಚಲನಚಿತ್ರ ನಿರ್ಮಾಪಕ ಎಸ್.ಎ.ಚಿನ್ನೇಗೌಡ ಮಾತನಾಡಿ, ರಾಜ್‍ಕುಮಾರ್ ಅವರ ವಿನಯ ಎಲ್ಲರಿಗೂ ಮಾರ್ಗದರ್ಶಕವಾಗಿದೆ. ನಿಜ ಜೀವನದಲ್ಲಿ ಅತ್ಯಂತ ಸರಳತೆಯಿಂದ ಬದುಕು ನಡೆಸಿದ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಿರುವುದು ಸಾರ್ಥಕ ಕೆಲಸ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ವೇಳೆ ಸಂಸ್ಥೆಯ ಸಿಬ್ಬಂದಿ ಮ.ದಾ.ವೆಂಕಟೇಶ್, ಬಿ.ಆರ್.ವಿಜಯ ಕುಮಾರ್, ಕೆ.ಪಿ.ರಂಗಸ್ವಾಮಿ, ಎಂ. ಎನ್. ರಂಗನಾಥ್‍ರಾವ್, ಜಿ.ಕೃಷ್ಣ , ಜಿ.ಟಿ.ಶ್ರೀನಿವಾಸಗೌಡ, ಶಂಕರಾಚಾರಿ, ಸಿ.ಸುಶೀಲ ಅವರಿಗೆ ಡಾ.ರಾಜ್ ರಂಗಪ್ರಶಸ್ತಿ ನೀಡಿ ಗೌರವಿಸಲಾಯಿತು. ಬಿಎಂಟಿಸಿ ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ಪ.ಗಜಣ್ಣ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರಫಾಯಲ್ ರಾಜ್ ನಿರೂಪಣೆ ಮಾಡಿದರು. ಕಾರ್ಯದರ್ಶಿ ಎಚ್.ಕೆ.ಸುರೇಶ್ ವಂದಿಸಿದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin