ಜಯಲಲಿತಾ ಸಾವು ಸಂಶಯಾಸ್ಪದ : ಅಗತ್ಯ ಬಿದ್ದರೆ ಶವ ಹೊರ ತೆಗೆದು ಪರಿಶೀಲನೆ..!

ಈ ಸುದ್ದಿಯನ್ನು ಶೇರ್ ಮಾಡಿ

Jayalalithaa

ಚೆನ್ನೈ,ಡಿ.29- ಎಐಎಡಿಎಂಕೆ ಪರಮೋಚ್ಚ ನಾಯಕಿ ಮತ್ತು ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅವರ ಸಾವಿನ ಸುತ್ತ ಅನುಮಾನದ ಹುತ್ತ ಬೃಹದಾ ಕಾರವಾಗಿ ಬೆಳೆಯುತ್ತಿರುವಾಗಲೇ ಮಹತ್ವದ ಬೆಳವಣಿಗೆ ಯೊಂದರಲ್ಲಿ ಮದ್ರಾಸ್ ಹೈಕೋರ್ಟ್ ಪುರುಚ್ಚಿ ತಲೈವಿ ನಿಧನದ ಬಗ್ಗೆ ಅನುಮಾನ ವ್ಯಕ್ತಪಡಿಸಿದೆ. ಅಲ್ಲದೆ ಸಮಾಧಿಯಲ್ಲಿರುವ ಶವವನ್ನು ಹೊರತೆಗೆದು ಏಕೆ ಪರೀಕ್ಷೆಗೆ ಒಳಪಡಿಸಬಾರದು ಎಂಬ ಗಂಭೀರ ಪ್ರಶ್ನೆಯನ್ನು ಮುಂದಿಟ್ಟಿದೆ. ಇದರೊಂದಿಗೆ ಜಯಾರ ನಿಧನ ಕುರಿತ ಸಂಶಯಗಳು ಹೊಸ ತಿರುವು ಪಡೆದುಕೊಂಡಿವೆ.   ಈ ಸಂಬಂಧ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಸೂಕ್ತ ಉತ್ತರ ನೀಡುವಂತೆ ಹೈಕೋರ್ಟ್ ಸೂಚನೆ ನೀಡಿದೆ.

ಜಯಲಲಿತಾರ ಸಾವಿನ ಸತ್ಯ ಸಂಗತಿಯನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಬೇಕು ಮತ್ತು ಈ ಬಗ್ಗೆ ತನಿಖೆ ನಡೆಸಬೇಕು ಎಂದು ಕೋರಿ ಅಣ್ಣಾ ಡಿಎಂಕೆ ಕಾರ್ಯಕರ್ತ ಜೋಸೆಫ್ ಎಂಬುವರು ಮದ್ರಾಸ್ ಹೈಕೋರ್ಟ್‍ಗೆ ಪಿಐಎಲ್(ಸಾರ್ವಜನಿಕ ಹಿತಾಸಕ್ತಿ ಅರ್ಜಿ) ಸಲ್ಲಿಸಿದ್ದರು. ಈ ಅರ್ಜಿ ಕುರಿತು ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ವೈದ್ಯನಾಥನ್ ಅವರು ಕೂಡ ಜಯಾ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದರು.  ಜಯಲಲಿತಾ ಅವರ ಸಾವಿನ ಬಗ್ಗೆ ಮಾಧ್ಯಗಳಲ್ಲಿ ಸಾಕಷ್ಟು ಅನುಮಾನಗಳು ವ್ಯಕ್ತವಾಗಿವೆ. ವೈಯಕ್ತಿಕವಾಗಿ ನನಗೂ ಕೂಡ ಈ ಬಗ್ಗೆ ಸಂಶಯಗಳಿವೆ ಎಂದು ನ್ಯಾಯಮೂರ್ತಿ ವೈದ್ಯನಾಥನ್ ಹೇಳುವ ಮೂಲಕ ಇಡೀ ದೇಶದ ಗಮನ ಸೆಳೆದಿದ್ದಾರೆ.

ಜಯಲಲಿತಾ ಅವರು ಪಥ್ಯಾಹಾರ ಸೇವಿಸುತ್ತಿದ್ದರು. ಆಸ್ಪತ್ರೆಯಲ್ಲಿದ್ದಾಗಲೂ ಕಠಿಣ ಪಥ್ಯವನ್ನು ಮುಂದುವರೆಸಿದ್ದರು ಎಂಬ ಬಗ್ಗೆ ಮಾಹಿತಿ ಇದೆ. ಜಯಲಲಿತಾ ಅವರ ನಿಧನಾನಂತರವಾದರೂ ಅವರ ಸಾವಿನ ಬಗ್ಗೆ ಸತ್ಯಾಂಶ ಬಹಿರಂಗಗೊಳ್ಳಬೇಕಿದೆ ಎಂದು ನ್ಯಾಯಮೂರ್ತಿ ಹೇಳಿದರು.  ವೈಯಕ್ತಿಕವಾಗಿ ನನಗೂ ಕೂಡ ಈ ಪ್ರಕರಣದ ಬಗ್ಗೆ ಸಾಕಷ್ಟು ಗುಮಾನಿ ಇದೆ. ಸಂಶಯಗಳು ನಿವಾರಣೆಯಾಗಬೇಕಾಗಿದ್ದು ಅಗತ್ಯ. ಪ್ರಕರಣದ ಗಂಭೀರತೆ ಹೀಗಿರುವಾಗ ಸಮಾಧಿಯಲ್ಲಿರುವ ಅವರ ಶವವನ್ನು ಹೊರತೆಗೆದು ಏಕೆ ಪರೀಕ್ಷೆಗೊಳಪಡಿಸಬಾರದು ಎಂಬುದು ನನ್ನ ಪ್ರಶ್ನೆಯಾಗಿದೆ ಎಂದು ನ್ಯಾಯಮೂರ್ತಿ ವೈದ್ಯನಾಥನ್ ಹೇಳುವ ಮೂಲಕ ತಮಿಳುನಾಡಿನಲ್ಲಿ ತೀವ್ರ ಕುತೂಹಲದ ಹೊಸ ಸಂಚಲನ ಉಂಟು ಮಾಡಿದ್ದಾರೆ.

ಈ ಬಗ್ಗೆ ಇನ್ನಷ್ಟು ವಿಚಾರಣೆ ನಡೆಸಲು ಈ ಅರ್ಜಿಯನ್ನು ಹೈಕೋರ್ಟ್‍ನ ಮುಖ್ಯ ನ್ಯಾಯಮೂರ್ತಿಯವರ ಪೀಠಕ್ಕೆ ವರ್ಗಾಯಿಸುವುದು ಸೂಕ್ತ ಎಂದು ಹೇಳಿದ ಅವರು, ಮದ್ರಾಸ್ ಹೈಕೋರ್ಟ್ ಸಿಜೆ ಪೀಠಕ್ಕೆ ಹಸ್ತಾಂತರಿಸುವುದಾಗಿ ತಿಳಿಸಿದರು.  ಈ ಸಂಬಂಧ ತಮಿಳುನಾಡು ರಾಜ್ಯ ಮತ್ತು ಕೇಂದ್ರ ಸರ್ಕಾರ ಸ್ಪಷ್ಟ ಉತ್ತರ ನೀಡಬೇಕಿದೆ ಎಂದು ಹೇಳಿದ ಅವರು, ಅರ್ಜಿ ಕುರಿತ ಮುಂದಿನ ವಿಚಾರಣೆಯನ್ನು ಜ.9ಕ್ಕೆ ಮುಂದೂಡಿದ್ದಾರೆ.  ಜಯಲಲಿತಾ ಅವರ ಸಾವಿನ ಸತ್ಯಾಂಶ ಬಹಿರಂಗಗೊಳ್ಳಬೇಕು, ಆಸ್ಪತ್ರೆಯಲ್ಲಿ ಅವರಿಗೆ ನೀಡಲಾಗುತ್ತಿದ್ದ ಚಿಕಿತ್ಸೆಯ ವಿಧಾನಗಳು ಮತ್ತು ಔಷಧೋಪಚಾರಗಳ ಮಾಹಿತಿಯನ್ನು ಬಹಿರಂಗಗೊಳಿಸಬೇಕು ಎಂದು ದಕ್ಷಿಣ ಭಾರತದ ಖ್ಯಾತ ಅಭಿನೇತ್ರಿ ಗೌತಮಿ ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಒತ್ತಾಯಿಸಿದರು.

ಜಯಲಲಿತಾ ಅವರ ಹತ್ತಿರದ ಸಂಬಂಧಿಗಳು ಸಹ ಇದೇ ಅನುಮಾನವನ್ನು ವ್ಯಕ್ತಪಡಿಸಿ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿರುವ ಶಶಿಕಲಾ ನಟರಾಜ್ ಅವರ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದು ಇಲ್ಲಿ ಉಲ್ಲೇಖಿಸಬಹುದು.   ಚೆನ್ನೈನ ಅಪೊಲೋ ಆಸ್ಪತ್ರೆಯಲ್ಲಿ ಎರಡು ತಿಂಗಳ ಕಾಲ ಚಿಕಿತ್ಸೆಗೊಳಗಾಗಿದ್ದ ಅವರು ಡಿ.5ರಂದು ವಿಧಿವಶರಾದರು. ಮರಿನಾಬೀಚ್‍ನಲ್ಲಿ ಮಾಜಿ ಮುಖ್ಯಮಂತ್ರಿ ಎಂ.ಜಿ.ರಾಮಚಂದ್ರನ್ ಅವರ ಸಮಾಧಿ ಪಕ್ಕದಲ್ಲೇ ಜಯಾ ಅವರ ಅಂತ್ಯಸಂಸ್ಕಾರ ನೆರವೇರಿತು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin