ನೋಟ್ ಬ್ಯಾನ್ ಎಫೆಕ್ಟ್ : ರಾಜ್ಯ ಸರ್ಕಾರದ ಬೊಕ್ಕಸಕ್ಕೆ 5 ಸಾವಿರ ಕೋಟಿ ಆದಾಯ ಖೋತಾ

ಈ ಸುದ್ದಿಯನ್ನು ಶೇರ್ ಮಾಡಿ

Demonetization Notes

ಬೆಂಗಳೂರು, ಡಿ.31- ಪ್ರಧಾನಮಂತ್ರಿ ನರೇಂದ್ರ ಮೋದಿ ನ.8ರಂದು 500 ಹಾಗೂ 1000ರೂ. ಮುಖಬೆಲೆಯ ನೋಟುಗಳ ಚಲಾವಣೆಗೆ ನಿಷೇಧ ಹೇರಿದ ಬಳಿಕ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಭಾರೀ ಹೊಡೆತ ಬಿದ್ದಿದೆ.   ನೋಟು ನಿಷೇಧದ ಪರಿಣಾಮ ಸರ್ಕಾರಕ್ಕೆ ಬರಬೇಕಿದ್ದ ಸುಮಾರು ಐದು ಸಾವಿರ ಕೋಟಿಯಷ್ಟು ಆದಾಯ ತೆರಿಗೆ ಇಳಿಕೆಯಾಗಿದೆ.  ಸರ್ಕಾರಕ್ಕೆ ಹೆಚ್ಚಿನ ಆದಾಯ ತರುವ ವಾಣಿಜ್ಯ ತೆರಿಗೆ, ಮುದ್ರಣ ಮತ್ತು ನೋಂದಣಿ, ಅಬಕಾರಿ, ವಾಹನ ತೆರಿಗೆ, ವಾಣಿಜ್ಯ ತೆರಿಗೆ ಸೇರಿದಂತೆ ಅನೇಕ ಇಲಾಖೆಗಳಲ್ಲಿ ನಿರೀಕ್ಷಿತ ಪ್ರಮಾಣದ ತೆರಿಗೆ ಸಂದಾಯವಾಗಿಲ್ಲ. ಸರಿಸುಮಾರು ಐದು ಸಾವಿರ ಕೋಟಿ ನಷ್ಟವಾಗಿದ್ದು, ಇದರ ಮೊತ್ತವನ್ನು ಪರಿಹಾರದ ರೂಪದಲ್ಲಿ ನೀಡುವಂತೆ ಸರ್ಕಾರ ಕೇಂದ್ರಕ್ಕೆ ಮನವಿ ಮಾಡುವ ಸಾಧ್ಯತೆಯಿದೆ.
2015-16ಕ್ಕೆ ಹೋಲಿಸಿದರೆ ಈ ಬಾರಿ ಹೆಚ್ಚಿನ ತೆರಿಗೆ ಸಂಗ್ರಹವಾಗುವ ನಿರೀಕ್ಷೆಯಿತ್ತು. ಆದರೆ, ಏ.8ರಿಂದ ನೋಟುಗಳ ಚಲಾವಣೆಗೆ ನಿಷೇಧ ಹೇರಿದ್ದರಿಂದ ತೆರಿಗೆ ಪಾವತಿಸುವವರ ಪ್ರಮಾಣ ಕಡಿಮೆಯಾಗಿದೆ ಎಂದು ಹಣಕಾಸು ಇಲಾಖೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಾಮಾನ್ಯವಾಗಿ ತೆರಿಗೆ ಪಾವತಿಸುವವರು ನವೆಂಬರ್ ಹಾಗೂ ಡಿಸೆಂಬರ್‍ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ಕಟ್ಟುತ್ತಿದ್ದರು. ಇದ್ದಕ್ಕಿದ್ದಂತೆ ನೋಟುಗಳ ಚಲಾವಣೆ ರದ್ದುಗೊಂಡಿದ್ದರಿಂದ ಸುಮಾರು 10 ರಿಂದ 30ರಷ್ಟು ತೆರಿಗೆ ಸಂಗ್ರಹದ ಪ್ರಮಾಣ ಇಳಿಕೆಯಾಗಿದೆ. ಈ ಬಾರಿ ಸರ್ಕಾರ ವಾಣಿಜ್ಯ ತೆರಿಗೆಗೆ 51338 ಸಾವಿರ ಕೋಟಿ, ಅಬಕಾರಿ ಇಲಾಖೆಗೆ 16,510 ಕೊಟಿ, ಸ್ಟ್ಯಾಂಪ್ ಮತ್ತು ನೋಂದಣಿಗೆ 9100 ಕೋಟಿ ಹಾಗೂ ಮೋಟಾರು ವಾಹನ, ಸಾರಿಗೆಗೆ 5160 ಕೋಟಿ ತೆರಿಗೆ ಸಂಗ್ರಹಿಸಲು ಗುರಿ ಹೊಂದಲಾಗಿತ್ತು. ಆದರೆ, ನೋಟು ನಿಷೇಧ ಸರ್ಕಾರಕ್ಕೆ ಬರಬೇಕಾಗಿದ್ದ ಪ್ರಮುಖ ತಿಂಗಳಲ್ಲೇ ಹೊಡೆತ ಬಿದ್ದಿದೆ. ಮುಂದಿನ ಏಪ್ರಿಲ್‍ವರೆಗೂ ಇದೇ ಪರಿಸ್ಥಿತಿ ಮುಂದುವರಿಯಲಿದೆ ಎಂದು ಅಧಿಕಾರಿಯೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ.

ಜನವರಿಯಿಂದ ಪ್ರಧಾನಿ ನರೇಂದ್ರ ಮೋದಿ ಬೇನಾಮಿ ಆಸ್ತಿ ಮೇಲೆ ಕಣ್ಣಿಟ್ಟಿದ್ದಾರೆ. ಕಾನೂನು ಬಾಹಿರವಾಗಿ ಆಸ್ತಿ ಖರೀದಿಸುವವರಿಗೆ ಈಗಾಗಲೇ ಇದರ ಪರಿಣಾಮ ಚಳಿ ಹುಟ್ಟಿದೆ.
ಜನವರಿಯಿಂದ ಏಪ್ರಿಲ್‍ವರೆಗೂ ಯಾರೊಬ್ಬರೂ ಆಸ್ತಿ, ವಾಹನ, ಮನೆ, ಜಮೀನು ಖರೀದಿ ಮಾಡಲು ಮುಂದೆ ಬರುವುದಿಲ್ಲ. ಬೇನಾಮಿ ಆಸ್ತಿ ವಿವಾದ ಮುಗಿಯುವವರೆಗೂ ಈ ಸಂಕಟ ತಪ್ಪಿದ್ದಲ್ಲ.  2016-17ರಲ್ಲಿ ರಾಜ್ಯ ಸರ್ಕಾರ 82,102 ಕೋಟಿ ತೆರಿಗೆ ಸಂಗ್ರಹದ ಗುರಿ ಹೊಂದಿತ್ತು. ಇದರಲ್ಲಿ ಶೇ.10ರಷ್ಟು ಅಂದರೆ ಸರಿಸುಮಾರು 72 ಸಾವಿರ ಕೋಟಿ ಈವರೆಗೂ ತೆರಿಗೆ ಸಂಗ್ರಹ ಮಾಡಲಾಗಿದೆ. ಮುಂದಿನ ಆರ್ಥಿಕ ವರ್ಷದವರೆಗೂ ದೊಡ್ಡ ಪ್ರಮಾಣದಲ್ಲಿ ತೆರಿಗೆ ಸಂಗ್ರಹವಾಗುವ ನಿರೀಕ್ಷೆ ಇಲ್ಲ.

ಕೇಂದ್ರಕ್ಕೆ ಪತ್ರ:

ನೋಟು ನಿಷೇಧದಿಂದ 5 ಸಾವಿರ ಕೋಟಿ ನಷ್ಟವಾಗಿದ್ದು, ಇದನ್ನು ಕೇಂದ್ರ ಸರ್ಕಾರ ತುಂಬಿಕೊಡುವಂತೆ ರಾಜ್ಯ ಸರ್ಕಾರ ಮನವಿ ಮಾಡಲು ಮುಂದಾಗಿದೆ.  ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ, ಹಣಕಾಸು ಸಚಿವ ಅರುಣ್ ಜೇಟ್ಲಿ ಅವರಿಗೆ ಶೀಘ್ರದಲ್ಲೇ ಪತ್ರ ಬರೆಯಲಿದ್ದಾರೆ ಎಂದು ತಿಳಿದುಬಂದಿದೆ.  ತೆರಿಗೆ ಕಡಿತಗೊಂಡಿರುವುದರಿಂದ ಸರ್ಕಾರದ ಪ್ರಮುಖ ಯೋಜನೆಗಳ ಅನ್ನಭಾಗ್ಯ, ಕ್ಷೀರಭಾಗ್ಯ, ಶಾದಿ ಭಾಗ್ಯ ಸೇರಿದಂತೆ ಜನಪ್ರಿಯ ಯೋಜನೆಗಳಿಗೂ ಅನುದಾನ ಒದಗಿಸಲು ಸರ್ಕಾರ ಹಿಂದೇಟು ಹಾಕುವಂತಾಗಿದೆ. ಆದರೂ ಈ ಯೋಜನೆಗಳಿಗೆ ಅನುದಾನ ಒದಗಿಸುವುದಕ್ಕೆ ಸರ್ಕಾರಕ್ಕೆ ಕೆಟ್ಟ ಹೆಸರು ಬರಬಹುದೆಂಬ ಭೀತಿಯ ಹಿನ್ನೆಲೆಯಲ್ಲಿ ನಷ್ಟದಲ್ಲೇ ಸರಿದೂಗಿಸುವ ಕಾರ್ಯ ಮುಂದುವರಿದಿದೆ.
ಬೇನಾಮಿ ಆಸ್ತಿ ವಿವಾದ ಬಗೆಹರಿದ ನಂತರ ಹಳಿ ತಪ್ಪಿರುವ ತೆರಿಗೆ ಸಂಗ್ರಹದ ಸಮಸ್ಯೆ ಬಗೆಹರಿಯುವ ವಿಶ್ವಾಸವಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin