ಗೋವಾ ಮೇಲೆ ಜೈಷ್, ಲಷ್ಕರ್ ಭಯೋತ್ಪಾದಕರ ದಾಳಿ ಭೀತಿ, ತೀವ್ರ ಕಟ್ಟೆಚ್ಚರ

ಈ ಸುದ್ದಿಯನ್ನು ಶೇರ್ ಮಾಡಿ

Goa-025

ನವದೆಹಲಿ, ಜ.1-ಹೊಸ ವರ್ಷದ ಸಂದರ್ಭದಲ್ಲಿ ಕರಾವಳಿ ರಾಜ್ಯ ಗೋವಾ ಮೇಲೆ ಜೈಷ್-ಎ-ಮಹಮದ್(ಜೆಇಎಂ) ಮತ್ತು ಲಷ್ಕರ್-ಎ-ತೊಯ್ಬಾ (ಎಲ್‍ಇಟಿ) ಭಯೋತ್ಪಾದಕರು ದಾಳಿ ನಡೆಸುವ ಸಾಧ್ಯತೆ ಬಗ್ಗೆ ಗುಪ್ತಚರ ಮಾಹಿತಿ ಲಭಿಸಿದ್ದು, ರಾಜ್ಯಾದ್ಯಂತ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಭಯೋತ್ಪಾದನೆ ನಿಗ್ರಹ ದಳ ಮತ್ತು ಮೀಸಲು ಪೊಲೀಸ್ ಪಡೆಯನ್ನು ಆಯಕಟ್ಟಿನ ಸ್ಥಳಗಳಲ್ಲಿ ನಿಯೋಜಿಸಲಾಗಿದೆ. ಹೊಸ ವರ್ಷಾಚರಣೆ ಸಂದರ್ಭದಲ್ಲಿ ಉತ್ತರ ಗೋವಾದ ಜನಪ್ರಿಯ ಕಡಲ ಕಿನಾರೆ ಮೋಜಿನ ತಾಣಗಳ ಮೇಲೆ ಭಯೋತ್ಪಾದಕರು ದಾಳಿ ನಡೆಸುವ ಬಗ್ಗೆ ಗುಪ್ತಚರ ಇಲಾಖೆಗೆ ನಿಖರ ಮಾಹಿತಿ ಲಭಿಸಿದೆ.

ಜೈಷ್ ಮತ್ತು ಲಷ್ಕರ್ ಭಯೋತ್ಪಾದಕರು ದಾಳಿ ನಡೆಸುವ ಸಾಧ್ಯತೆ ಬಗ್ಗೆ ಗುಪ್ತಚರ ಮಾಹಿತಿ ಲಭಿಸಿರುವುದನ್ನು ಗೋವಾ ಪೊಲೀಸ್ ಮಹಾ ನಿರ್ದೇಶಕ ಮುಕ್ತೇಶ್ ಚಂದರ್ ಖಚಿತಪಡಿಸಿದ್ದಾರೆ.
ಅಂಜುನಾ, ಕ್ಯಾಲನ್‍ಗುಟೆ ಮತ್ತು ಬಾಗಾ ಕಡಲ ಕಿನಾರೆ ಗ್ರಾಮಗಳೂ ಸೇರಿದಂತೆ ಗೋವಾ ಸಮುದ್ರ ತೀರಗಳು ಮತ್ತು ಗಡಿ ಪ್ರದೇಶಗಳಲ್ಲಿ ಭಯೋತ್ಪಾದನೆ ನಿಗ್ರಹ ದಳ (ಎಟಿಎಸ್) ಮತ್ತು ಮೀಸಲು ಪೊಲೀಸ್ ಪಡೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಗೋವಾದಲ್ಲಿ ಒಂದು ವಾರ ಕಾಲ ಹೊಸ ವರ್ಷಾಚರಣೆ ಸಂಭ್ರಮ ಮುಂದುವರಿಯುವ ಹಿನ್ನೆಲೆಯಲ್ಲಿ ಸೂಕ್ಷ್ಮ ಪ್ರದೇಶಗಳು ಹಾಗೂ ನೂರಾರು ವಿದೇಶಿಯರು ಹೆಚ್ಚಾಗಿ ಸೇರುವ ಸ್ಥಳಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ ಎಂದು ಡಿಐಜಿ ಹೇಳಿದ್ದಾರೆ.

ಹೊಸ ವರ್ಷಾಚರಣೆ ಸಂದರ್ಭದಲ್ಲಿ ಗೋವಾದಲ್ಲಿ ಪ್ರತಿ ವರ್ಷ 40 ಲಕ್ಷ ಪ್ರವಾಸಿಗಳು ಸೇರುತ್ತಾರೆ. ಇವರಲ್ಲಿ 50 ಸಾವಿರ ಮಂದಿ ವಿದೇಶಿಯರಿರುತ್ತಾರೆ. ರಷ್ಯಾ, ಬ್ರಿಟನ್ ಸೇರಿದಂತೆ ಅನೇಕ ದೇಶಗಳ ಪ್ರವಾಸಿಗರು ಹೆಚ್ಚಾಗಿ ಗೋವಾ ಕರಾವಳಿ ಪ್ರದೇಶಗಳಿಗೆ ಭೇಟಿ ನೀಡುತ್ತಾರೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತವ್ಯಾಪಕ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಇಸ್ತಾನ್‍ಬುಲ್‍ನ ನೈಟ್‍ಕ್ಲಬ್‍ನಲ್ಲಿ ಉಗ್ರರು ದಾಳಿ ನಡೆಸಿ 40ಕ್ಕೂ ಹೆಚ್ಚು ಮಂದಿಯನ್ನು ಕೊಂದಿರುವ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಮತ್ತು ಗಡಿ ಪಹರೆಯನ್ನು ಹೆಚ್ಚಿಸಲಾಗಿದೆ.

ದೇಶಾದ್ಯಂತ ಕಟ್ಟೆಚ್ಚರ :

ಭಾರತದ ಪ್ರಮುಖ ಪ್ರವಾಸಿ ತಾಣಗಳು, ಪ್ರೇಕ್ಷಣೀಯ ಸ್ಥಳಗಳು, ಕಡಲ ಕಿನಾರೆಗಳು ವಿದೇಶಿಯರು ಹೆಚ್ಚಾಗಿ ಸೇರುವ ಕ್ಲಬ್‍ಗಳು ಮತ್ತು ರೆಸಾರ್ಟ್‍ಗಳು, ಜನದಟ್ಟಣೆ ಇರುವ ಜಾಗಗಳು, ಮಾರುಕಟ್ಟೆ ಪ್ರದೇಶಗಳು, ಶಾಪಿಂಗ್ ಮಾಲ್‍ಗಳ ಮೇಲೆ ಭಯೋತ್ಪಾದಕರು ದಾಳಿ ನಡೆಸಲಿದ್ದಾರೆ ಎಂಬ ಗುಪ್ತಚರ ಮಾಹಿತಿಗಳ ಹಿನ್ನೆಲೆಯಲ್ಲಿ ನಿನ್ನೆಯಿಂದ ದೇಶಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.  ಈ ಹಿನ್ನೆಲೆಯಲ್ಲಿ ದೇಶದ ಪ್ರಮುಖ ನಗರಿಗಳು ಮತ್ತು ಕರಾವಳಿ ಪ್ರದೇಶಗಳಲ್ಲಿ ವ್ಯಾಪಕ ಬಂದೋಬಸ್ತ್ ಮಾಡಲಾಗಿದೆ. ಪ್ರವಾಸಿಗರ ರಕ್ಷಣೆಗಾಗಿ ಭಯೋತ್ಪಾದನೆ ನಿಗ್ರಹ ದಳ (ಎಟಿಎಸ್) ಕಮ್ಯಾಂಡೋಗಳೂ ಸೇರಿದಂತೆ ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.

ಇಸ್ರೇಲ್ ಎಚ್ಚರಿಕೆ :

ಇದೇ ವೇಳೆ ಭಯೋತ್ಪಾದಕರ ದಾಳಿ ಭೀತಿ ಹಿನ್ನೆಲೆಯಲ್ಲಿ, ಭಾರತದ ಪ್ರವಾಸದಲ್ಲಿರುವ ತನ್ನ ನಾಗರಿಕರಿಗೆ ಎಚ್ಚರದಿಂದಿರಲು ಇಸ್ರೇಲ್ ಈಗಾಗಲೇ ಸೂಚನೆ ನೀಡಿದೆ. ಹೊಸ ವರ್ಷದ ಸಂಭ್ರಮಾಚರಣೆ ವೇಳೆ. ಭಾರತದ ವಾಯುವ್ಯ ಭಾಗಗಳಲ್ಲಿ ಪ್ರವಾಸಿಗರನ್ನು ಗುರಿಯಾಗಿಟ್ಟುಕೊಂಡು ಭಯೋತ್ಪಾದಕರು ದಾಳಿ ನಡೆಸುವ ಆತಂಕವಿದ್ದು, ಪ್ರವಾಸದಲ್ಲಿರುವ ಇಸ್ರೇಲಿಗರು ಅತ್ಯಂತ ಎಚ್ಚರಿಕೆಯಿಂದ ಇರುವಂತೆ ಇಸ್ರೇಲ್ ಪ್ರಧಾನಮಂತ್ರಿಯವರ ಕಾರ್ಯಾಲಯ ಬಿಡುಗಡೆ ಮಾಡಿರುವ ಹೇಳಿಕೆಯನ್ನು ಉಲ್ಲೇಖಿಸಿ ಭಯೋತ್ಪಾದನೆ ನಿಗ್ರಹ ನಿರ್ದೇಶನಾಲಯ ಸೂಚನೆ ನೀಡಿತ್ತು.

ಭಾರತ ಪ್ರವಾಸ ಕೈಗೊಳ್ಳಲು ಉದ್ದೇಶಿಸಿರುವ ತನ್ನ ನಾಗರಿಕರು ಯೋಜನೆಯನ್ನು ಮುಂದೂಡುವಂತೆ ತಿಳಿಸಲಾಗಿದೆ. ವಿದೇಶಿ ಪ್ರವಾಸಿಗರು ಹೆಚ್ಚಾಗಿ ಸೇರುವ ಸಮುದ್ರ ತೀರಗಳು ಮತ್ತು ಕ್ಲಬ್‍ಗಳ ಮೇಲೆ ದಾಳಿ ನಡೆಯಲಿದೆ ಎಂಬ ಗುಪ್ತಚರ ಮಾಹಿತಿಯು ಇಸ್ರೇಲ್‍ಗೆ ಲಭಿಸಿದೆ.  ನಿರ್ದಿಷ್ಟವಾಗಿ ಗೋವಾ, ಪುಣೆ, ಮುಂಬೈ, ಕೊಚ್ಚಿಗಳಂಥ ಜನಪ್ರಿಯ ರಜೆ ಪ್ರವಾಸಿ ತಾಣಗಳು ಭಯೋತ್ಪಾದಕರ ಆಕ್ರಮಣದ ಕೇಂದ್ರ ಬಿಂದುಗಳಾಗಲಿದ್ದು, ವಿಧ್ವಂಸಕ ಕೃತ್ಯಗಳ ಸಾಧ್ಯತೆ ಹಿನ್ನೆಲೆಯಲ್ಲಿ ಹೆಚ್ಚಿನ ನಿಗಾ ವಹಿಸುವಂತೆ ತಿಳಿಸಲಾಗಿದೆ.  ದೆಹಲಿಯಲ್ಲಿರುವ ಇಸ್ರೇಲ್ ರಾಯಭಾರಿ ಕಚೇರಿಯ ವಕ್ತಾರರು ಸಹ ತಮ್ಮ ನಾಗರಿಕರಿಗೆ ನೀಡಲಾಗಿರುವ ಎಚ್ಚರಿಕೆ ಸಂದೇಶವನ್ನು ಖಚಿತಪಡಿಸಿದ್ದಾರೆ.  ಈಗಾಗಲೇ ಅಮೆರಿಕ ಸಹ ಭಾರತದಲ್ಲಿರುವ ತನ್ನ ಪ್ರವಾಸಿಗರು ಮತ್ತು ಪ್ರಜೆಗಳಿಗೆ ಇಸ್ಲಾಮಿಕ್ ಸ್ಟೇಟ್ ಉಗ್ರರ ದಾಳಿ ಸಾಧ್ಯತೆ ಬಗ್ಗೆ ಎಚ್ಚರಿಕೆ ನೀಡಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin