ಹೊಸ ವರ್ಷಾಚರಣೆಯಲ್ಲಿ ಮತ್ತೊಂದು ನರಮೇಧ : 15 ಮಂದಿ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

15-Kiled

ರಿಯೊ ಡಿ ಜನೈರೋ, ಜ.2– ಹೊಸ ವರ್ಷದ ಸಂಭ್ರಮಾಚರಣೆಯ ಮೋಜು-ಮಸ್ತಿಯಲ್ಲಿದ್ದ ಗುಂಪೊಂದರ ಮೇಲೆ ಹಠಾತ್ ದಾಳಿ ನಡೆಸಿದ ಬಂದೂಕುಧಾರಿಯೊಬ್ಬ 15 ಜನರನ್ನು ಕೊಂದು ತಾನೂ ಗುಂಡು ಹಾರಿಸಿಕೊಂಡು ಸತ್ತಿರುವ ಭೀಕರ ಘಟನೆ ಬ್ರೆಜಿಲ್‍ನ ಕ್ಯಾಂಪಿನಸ್ ನಗರದಲ್ಲಿ ನಡೆದಿದೆ. ಈ ಘಟನೆಯಲ್ಲಿ ಕೆಲವರಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ.
ಟರ್ಕಿಯ ಇಸ್ತಾನ್‍ಬುಲ್‍ನಲ್ಲಿ ಉಗ್ರಗಾಮಿಗಳು ಗುಂಡು ಹಾರಿಸಿ 39 ಜನರನ್ನು ಹತ್ಯೆ ಮಾಡಿದ ಭೀಭತ್ಸ ಕೃತ್ಯದ ಹಿಂದೆಯೇ ಬ್ರೆಜಿಲ್‍ನಲ್ಲಿ ಇನ್ನೊಂದು ನರಮೇಧ ಮರುಕಳಿಸಿದ್ದು, ನೂತನ ವರ್ಷಕ್ಕೆ ರಕ್ತತರ್ಪಣದ ಸ್ವಾಗತ ದೊರೆತಿದೆ.

ಬ್ರೆಜಿಲ್‍ನ ಆಗ್ನೇಯ ಭಾಗದಲ್ಲಿರುವ ಕ್ಯಾಂಪಿನಸ್ ನಗರದ ಹೌಸ್ ಪಾರ್ಟಿಯಲ್ಲಿ ಈ ದುರಂತ ನಡೆದಿದೆ. ಕೌಟುಂಬಿಕ ಕಲಹವೇ ಈ ಘೋರ ಹತ್ಯಾಕಾಂಡಕ್ಕೆ ಕಾರಣವೆಂದು ಸಾವೊ ಪಾಲೊ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.  ಗುಂಡು ಹಾರಿಸಿ 15 ಜನರ ಸಾವಿಗೆ ಕಾರಣವಾದ ಶೂಟರ್ ತನ್ನ ಮಾಜಿ ಪತ್ನಿಯಿಂದ ಬೇರ್ಪಟ್ಟಿದ್ದ. ಹೊಸ ವರ್ಷದ ಔತಣಕೂಟದಲ್ಲಿ ಪಾಲ್ಗೊಂಡಿದ್ದ ಪತ್ನಿ, 8 ವರ್ಷದ ಮಗ ಹಾಗೂ 13 ಮಂದಿಯ ಸಾಮೂಹಿಕ ಹತ್ಯೆ ನಡೆಸಿದ ನಂತರ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ.

ಈ ದಾಳಿಯಲ್ಲಿ ಇನ್ನೂ ಕೆಲವರು ತೀವ್ರ ಗಾಯಗೊಂಡಿದ್ಧಾರೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ. ಹೊಸ ವರ್ಷದ ಸಂಭ್ರಮಾಚರಣೆ ನಡೆಯುತ್ತಿತ್ತು. ಪಟಾಕಿ-ಸಿಡಿಮದ್ದುಗಳು ಹಾಗೂ ಬಾಣಬಿರುಸುಗಳ ಶಬ್ಧದ ನಡುವೆಯೇ ಗುಂಡು ಹಾರಿಸಿದ ಶಬ್ಧವೂ ಸೇರಿಕೊಂಡಿದ್ದರಿಂದ ನಮಗೆ ಈ ನರಮೇಧದ ಬಗ್ಗೆ ತಿಳಿಯಲಿಲ್ಲ ಎಂದು ನೆರೆಹೊರೆಯವರು ಗ್ಲೋಬೊ ಟೆಲಿವಿಷನ್‍ಗೆ ತಿಳಿಸಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin