ಸಹಕಾರ ಮತ್ತು ಸಕ್ಕರೆ ಸಚಿವ ಹೆಚ್. ಎಸ್. ಮಹದೇವ್ ಪ್ರಸಾದ್ ಇನ್ನಿಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

Mahadev-Prasad

ಬೆಂಗಳೂರು, ಜ.3- ತೀವ್ರ ಹೃದಯಾಘಾತದಿಂದ ಹಿರಿಯ ಧುರೀಣ ಮತ್ತು ಸಹಕಾರ ಹಾಗೂ ಸಕ್ಕರೆ ಸಚಿವ ಎಚ್.ಎಸ್.ಮಹದೇವ ಪ್ರಸಾದ್ ಇಂದು ಬೆಳಗ್ಗೆ ಹಠಾತ್ ನಿಧನರಾಗಿದ್ದಾರೆ. ಅವರಿಗೆ 58 ವರ್ಷ ವಯಸ್ಸಾಗಿತ್ತು.  ಮೃತರು ಪತ್ನಿ ಗೀತಾ, ಪುತ್ರ ಗಣೇಶ್ ಸೇರಿದಂತೆ ಅಪಾರ ಬೆಂಬಲಿಗರು ಮತ್ತು ಬಂಧು-ಬಳಗವನ್ನು ಅಗಲಿದ್ದಾರೆ.   ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಮಹದೇವ ಪ್ರಸಾದ್ ನಿಧನ ರಾಜಕೀಯ ವಲಯದಲ್ಲಿ ಭಾರೀ ದಿಗ್ಭ್ರಾಂತಿ ಉಂಟುಮಾಡಿದೆ.  ಚಿಕ್ಕಮಗಳೂರು ಜಿಲ್ಲೆ ಕೊಪ್ಪದಲ್ಲಿಂದು ಸಹಕಾರ ಸಾರಿಗೆ ಸಂಘದ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಿನ್ನೆ ರಾತ್ರಿಯೇ ಚಿಕ್ಕಮಗಳೂರಿಗೆ ತೆರಳಿದ್ದರು. ಕಳೆದ ರಾತ್ರಿ ನಗರದ ಹೊರವಲಯದಲ್ಲಿರುವ ಸಾರಾಯಿ ರೆಸಾರ್ಟ್‍ನಲ್ಲಿ ಸಚಿವರು ತಂಗಿದ್ದರು.

mahadev--prasad

ಪ್ರತಿದಿನ 6 ಗಂಟೆಗೆ ವಾಯು ವಿಹಾರಕ್ಕೆ ತೆರಳುತ್ತಿದ್ದ ಮಹದೇವ ಪ್ರಸಾದ್ ಇಂದು ಬೆಳಗ್ಗೆ 8.30 ಆದರೂ ಎದ್ದಿರಲಿಲ್ಲ. ಇದರಿಂದ ಅನುಮಾನಗೊಂಡ ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಆಶ್ರಯ ನರ್ಸಿಂಗ್ ಹೋಂ ಡಾಕ್ಟರ್ ವಿಜಯ್‍ಕುಮಾರ್, ಜಂಗಲ್ ರೆಸಾರ್ಟ್ ಅಧ್ಯಕ್ಷ ಎ.ಎನ್.ಮಹೇಶ್ ಹಾಗೂ ಕಾರ್ಯಕ್ರಮದ ಸಂಘಟಕರು ಸೇರಿದಂತೆ ಮತ್ತಿತರರು ಸಚಿವರು ತಂಗಿದ್ದ ಕೊಠಡಿಯ ಬಾಗಿಲು ತೆರೆದು ನೋಡಿದರು.  ಹಾಸಿಗೆ ಮೇಲೆ ಸಚಿವರು ಮಲಗಿದ್ದಂತೆಯೇ ಕಂಡುಬಂದಿದ್ದರಿಂದ ಗಾಬರಿಗೊಂಡು ಬಾಗಿಲು ಮುರಿತು ಒಳ ಪ್ರವೇಶಿಸಿದರು. ಸ್ವತಃ ವಿಜಯ್‍ಕುಮಾರ್ ವೈದ್ಯರಾದ್ದರಿಂದ ಸಚಿವರ ದೇಹ ಪರಿಶೀಲಿಸಿದಾಗ ತಣ್ಣಗಾಗಿತ್ತು. ಗಾಬರಿಗೊಂಡು ಅವರನ್ನು ಮುಟ್ಟಿ ನೋಡಿದಾಗ ಹೃದಯಾಘಾತವಾಗಿರುವುದು ದೃಢಪಟ್ಟಿತು.
ಕೂಡಲೇ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಸರ್ಜನ್ ಅವರನ್ನು ಕರೆಸಿ ತಪಾಸಣೆಗೆ ಒಳಪಡಿಸಲಾಯಿತು. ಹೃದಯಾಘಾತವಾಗಿರುವುದನ್ನು ವೈದ್ಯರು ಖಚಿತಪಡಿಸಿದರು.

ಸಚಿವ ಮಹದೇವ ಪ್ರಸಾದ್ ರ ಮೈಸೂರಿನ ಮನೆಯಲ್ಲಿ ಮಡುಗಟ್ಟಿದ ಶೋಕ‌.

ಆಗಲೇ ಪ್ರಾಣ ಪಕ್ಷಿ ಹಾರಿಹೋಗಿತ್ತು:

ಸಚಿವ ಮಹದೇವ ಪ್ರಸಾದ್ ಕಳೆದ ರಾತ್ರಿ ಮಲಗಿದ್ದ ಸ್ಥಿತಿಯಲ್ಲಿಯೇ ಅವರು ಕೊನೆಯುಸಿರೆಳೆದಿದ್ದರು. ಸರಿಸುಮಾರು 5.30 ರಿಂದ 6 ಗಂಟೆ ಸಮಯದಲ್ಲಿ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ. ನಾಳೆ ಹುಟ್ಟೂರಿನಲ್ಲಿ ಅಂತ್ಯಕ್ರಿಯೆ ನಡೆಯುವ ಸಾಧ್ಯತೆ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಂಪುಟದ ಅನೇಕ ಸಹೋದ್ಯೋಗಿಗಳು, ಶಾಸಕರು, ವಿವಿಧ ರಾಜಕೀಯ ಪಕ್ಷಗಳ ಧುರೀಣರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ.

Mahadev-Prasad-1

ರಾಜಕೀಯ ಹಿನ್ನೆಲೆ:

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿದ್ದ ಅವರು ಹಿರಿಯ ರಾಜಕೀಯ ಧುರೀಣರಲ್ಲೊಬ್ಬರು.  1958 ಆಗಸ್ಟ್ 5ರಂದು ಅಂದಿನ ಮೈಸೂರು ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹಾಲಹಳ್ಳಿಯಲ್ಲಿಯಲ್ಲಿ ಜನಿಸಿದ್ದರು. ದೇವರಾಜ ಅರಸು ಅವರ ರಾಜಕೀಯ ಆಕರ್ಷಣೆಯ ಸೆಳೆತಕ್ಕೆ ಒಳಗಾಗಿ ರಾಜಕಾರಣ ಪ್ರವೇಶಿಸಿದ್ದ ಅವರು 1994ರಲ್ಲಿ ಮೊದಲ ಬಾರಿಗೆ ಜನತಾದಳದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರು. ತದನಂತರ 1999ರಲ್ಲಿ ಜೆಡಿಯು, 2004ರಲ್ಲಿ ಜೆಡಿಎಸ್, 2008 ಮತ್ತು 2013ರಲ್ಲಿ ಕಾಂಗ್ರೆಸ್‍ನಿಂದ ಆಯ್ಕೆಯಾಗಿದ್ದರು.
ಕನ್ನಡ ಮತ್ತು ಸಂಸ್ಕøತಿ, ಸಹಕಾರ, ಆಹಾರ ಮತ್ತು ನಾಗರಿಕ ಪೂರೈಕೆ, ಸಕ್ಕರೆ ಸೇರಿದಂತೆ ವಿವಿಧ ಖಾತೆಗಳನ್ನು ನಿಭಾಯಿಸಿದ್ದರು.

ಸಂತಾಪ:

ಸಚಿವ ಮಹದೇವ ಪ್ರಸಾದ್ ಅವರ ನಿಧನಕ್ಕೆ ರಾಜ್ಯಪಾಲ ವಿ.ಆರ್.ವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವರಾದ ಅನಂತ್‍ಕುಮಾರ್, ಡಿ.ವಿ.ಸದಾನಂದಗೌಡ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ವಿಧಾನಸಭೆ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್, ವಿಧಾನಸಭೆ ಸ್ಪೀಕರ್ ಕೆ.ಬಿ.ಕೋಳಿವಾಡ, ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಸೇರಿದಂತೆ ಹಲವು ಗಣ್ಯರು ತೀವ್ರ ಕಂಬನಿ ಮಿಡಿದಿದ್ದಾರೆ.

 

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin