ಜೆಡಿಎಸ್ ಕಾರ್ಯಕರ್ತ ಹರೀಶ್ ಹಂತಕರ ಆರೋಪಿಗಳ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

JDS-Harish-Worker-Murderf

ಕೆಆರ್ ಪೇಟೆ, ಜ.4- ತಾಲೂಕಿನ ಮುರುಕನಹಳ್ಳಿ ಗ್ರಾಮದಲ್ಲಿ ಹೊಸ ವರ್ಷದ ಆಚರಣೆ ಸಂದರ್ಭದಲ್ಲಿ ಕೊಲೆಯಾದ ಜೆಡಿಎಸ್ ಕಾರ್ಯಕರ್ತ ಹರೀಶ್(ಗುಂಡ) ಕೊಲೆ ಆರೋಪಿಗಳಾದ ರಕ್ಷಿತ್(23) ಮತ್ತು ಯೋಗೇಶ್(28)ನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಡಿ.31ರಂದು ಸುಮಾರು 12 ಗಂಟೆ ಸಮಯದಲ್ಲಿ ಮುರುಕನಹಳ್ಳಿ ಗ್ರಾಮದ ಕೃಷಿಪತ್ತಿನ ಸಹಕಾರ ಸಂಘದ ಮುಂಭಾಗದಿಂದ ತಮ್ಮ ಮನೆಯ ಕಡೆ ಹೊರಟಿದ್ದ ಹರೀಶ್ ಅವರ ಮೇಲೆ ಹಲ್ಲೆ ನಡೆಸಿ ಚಾಕುವಿನಿಂದ ಇರಿದು ಹತ್ಯೆ ಮಾಡಿ ಪರಾರಿಯಾಗಿದ್ದರು ಎನ್ನಲಾದ ಮುರುಕನಹಳ್ಳಿ ಗ್ರಾಮದ ರಕ್ಷಿತ್(23) ಹಾಗೂ ಅದೇ ಗ್ರಾಮದ ಯೋಗೇಶ್(28) ಎಂಬುವವರನ್ನು ಜಿಲ್ಲಾ ಅಪರಾಧ ವಿಭಾಗದ ಪೊಲೀಸ್ ಇನ್ಸ್‍ಪೆಕ್ಟರ್ ಪ್ರಭಾಕರ್ ನೇತೃತ್ವದ ಅಧಿಕಾರಿಗಳ ತಂಡ ಪತ್ತೆ ಹಚ್ಚಿ ಬಂಧಿಸಿದೆ.

ಮುರುಕನಹಳ್ಳಿ ಗ್ರಾಮದ ರಾಜೇಗೌಡ ಅವರ ಪುತ್ರ ಹರೀಶ್(ಗುಂಡ) ಅವರ ಹತ್ಯೆಯಾದ ನಂತರ ಗ್ರಾಮದಲ್ಲಿ ಸ್ಮಶಾನ ಮೌನ ಮುಂದುವರೆದಿದ್ದು, ಬಹುತೇಕ ಮನೆಗಳು ಬಾಗಿಲು ಬಂದ್ ಮಾಡಿಕೊಂಡ ಸ್ಥಿತಿಯಲ್ಲಿವೆ. ಈ ನಡುವೆ ಕೊಲೆ ಆರೋಪಿಗಳನ್ನು ತಕ್ಷಣ ಬಂಧಿಸಬೇಕು, ಹರೀಶ್ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕೆಂದು ಸಂಸದ ಸಿ.ಎಸ್.ಪುಟ್ಟರಾಜು ಹಾಗೂ ಶಾಸಕ ಕೆ.ಸಿ.ನಾರಾಯಣಗೌಡ ಹಾಗೂ ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎನ್.ವಿಜಯಕುಮಾರ್ ಅವರು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾ ಅಪರಾಧ ವಿಭಾಗದ ಇನ್ಸ್‍ಪೆಕ್ಟರ್ ಪ್ರಭಾಕರ್ ನೇತೃತ್ವದಲ್ಲಿ ನಾಲ್ಕು ತಂಡ ರಚಿಸಿ ತನಿಖೆ ಕೈಗೊಳ್ಳಲಾಗಿತ್ತು.

ಆರೋಪಿಗಳ ಸ್ನೇಹಿತರು ಮತ್ತು ಸಂಬಂಧಿಕರ ಮೊಬೈಲ್ ಕರೆಗಳನ್ನು ಆಧರಿಸಿ ಹೊರ ಜಿಲ್ಲೆಗಳಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿಗಳಾದ ರಕ್ಷಿತ್ ಮತ್ತು ಯೋಗೇಶ್‍ನನ್ನು ಸ್ಥಳೀಯ ಪೊಲೀಸರ ನೆರವಿನೊಂದಿಗೆ ಬಂಧಿಸುವಲ್ಲಿ ಅಪರಾಧ ವಿಭಾಗದ ಪೊಲೀಸ್ ಅಧಿಕಾರಿಗಳ ತಂಡವು ಯಶಸ್ವಿಯಾಗಿದೆ. ತನಿಖೆ ಮುಂದುವರೆಸಿರುವ ತನಿಖಾಧಿಕಾರಿಗಳು ಕೊಲೆಗೆ ನಿಖರ ಕಾರಣ ಕಂಡು ಹಿಡಿಯುವ ಸತತ ಪ್ರಯತ್ನ ಮುಂದುವರೆಸಿದ್ದಾರೆ ಎಂದು ಪೊಲೀಸ್ ಇಲಾಖೆಯ ಖಚಿತ ಮೂಲಗಳು ತಿಳಿಸಿವೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin