ಪಂಚರಾಜ್ಯಗಳ ಚುನಾವಣೆಗೆ ಮಹೂರ್ತ ಫಿಕ್ಸ್

ಈ ಸುದ್ದಿಯನ್ನು ಶೇರ್ ಮಾಡಿ

Election-Commissions

ನವದೆಹಲಿ,ಜ.4-ಮುಂದಿನ ಲೋಕಸಭೆ ಚುನಾವಣೆಗೆ ದಿಕ್ಸೂಚಿ ಎಂದೇ ಹೇಳಲಾಗಿರುವ ಐದು ರಾಜ್ಯಗಳ ವಿಧಾನಸಭೆ ಚುನಾವಣೆಗೆ ಮುಹೂರ್ತ ನಿಗದಿಯಾಗಿದೆ. ಫೆ.4ರಿಂದ ಮಾ.8ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಮಾರ್ಚ್ 11ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.   ಉತ್ತರ ಪ್ರದೇಶ, ಪಂಜಾಬ್, ಉತ್ತರಖಂಡ್, ಗೋವಾ ಹಾಗೂ ಮಣಿಪುರ ರಾಜ್ಯಗಳ ವಿಧಾನಸಭೆ ಚುನಾವಣೆಗೆ ಇಂದು ಕೇಂದ್ರ ಚುನಾವಣಾ ಮುಖ್ಯ ಅಯುಕ್ತ ನಜೀಂ ಜೈನ್ ದಿನಾಂಕವನ್ನು ಘೋಷಣೆ ಮಾಡಿದರು.  ಗೋವಾ, ಉತ್ತರಖಂಡ್ ಮತ್ತು ಪಂಜಾಬ್‍ನಲ್ಲಿ ಫೆ.4ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಮಣಿಪುರದಲ್ಲಿ ಎರಡು ಹಂತ ಹಾಗೂ ದೇಶದ ಅತಿದೊಡ್ಡ ರಾಜ್ಯವಾದ ಉತ್ತರ ಪ್ರದೇಶದಲ್ಲಿ 7 ಹಂತದ ಮತದಾನ ನಡೆಯಲಿದೆ.

ಇಂದಿನಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಯಾಗಲಿದ್ದು , ಮತದಾರರನ್ನು ಆಕರ್ಷಿಸಲು ಯಾವುದೇ ರೀತಿಯ ಹೊಸ ಯೋಜನೆಗಳನ್ನು ಆಯೋಗದ ಒಪ್ಪಿಗೆ ಇಲ್ಲದೆ ಘೋಷಣೆ ಮಾಡುವಂತಿಲ್ಲ ಎಂದು ಆಯುಕ್ತರು ಸ್ಪಷ್ಟಪಡಿಸಿದ್ದಾರೆ.  ರಾಷ್ಟ್ರ ರಾಜಕಾರಣದಲ್ಲಿ ನಿರ್ಣಾಯಕ ಪಾತ್ರ ವಹಿಸುವ ಉತ್ತರಪ್ರದೇಶ(403), ಪಂಚಾಬ್(117), ಉತ್ತರಖಂಡ್(70), ಮಣಿಪುರ(60) ಹಾಗೂ ಕಡಲ ಕಿನಾರೆ ಪುಟ್ಟರಾಜ್ಯ ಗೋವಾದ (40) ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

ಒಟ್ಟು 16 ಕೋಟಿಗೂ ಹೆಚ್ಚು ಮತದಾರರು ಮತದಾನದ ಅರ್ಹತೆ ಹೊಂದಿದ್ದಾರೆ. ಗೋವಾ, ಮಣಿಪುರ ಮತ್ತು ಉತ್ತರಖಂಡ್‍ನಲ್ಲಿ ಪ್ರತಿ ಅಭ್ಯರ್ಥಿಗಳಿಗೆ 20 ಲಕ್ಷ ಚುನಾವಣಾ ವೆಚ್ಚದ ಮಿತಿ ನಿಗದಿಗೊಳಿಸಿದ್ದರೆ, ಉತ್ತರಪ್ರದೇಶ ಮತ್ತು ಪಂಜಾಬ್‍ನಲ್ಲಿ ಪ್ರತಿ ಅಭ್ಯರ್ಥಿಗೆ 28 ಲಕ್ಷ ವೆಚ್ಚವನ್ನು ನಿಗದಿ ಮಾಡಲಾಗಿದೆ. ಐದು ರಾಜ್ಯಗಳಲ್ಲಿ ನೋಟಾ ವ್ಯವಸ್ಥೆಯಿದ್ದು , ಮತದಾರರಿಗೆ ಇವಿಎಂನಲ್ಲೇ ಈ ವ್ಯವಸ್ಥೆ ಕಲ್ಪಿಸಲಾಗಿದೆ.

ಕೇಂದ್ರ ಸರ್ಕಾರಕ್ಕೆ ಅಗ್ನಿಪರೀಕ್ಷೆ :

ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಅಗ್ನಿಪರೀಕ್ಷೆ ಎಂದೇ ಹೇಳಲಾಗಿದೆ. 500 ಹಾಗೂ 1000 ಮುಖಬೆಲೆಯ ನೋಟುಗಳ ಚಲಾವಣೆಗೆ ನಿಷೇಧ ಹೇರಿದ ಬಳಿಕ ಚುನಾವಣೆ ಎದುರಾಗಿರುವುದರಿಂದ ಮೋದಿ ನಾಯಕ್ವಕ್ಕೂ ಇದು ಸವಾಲಾಗಿ ಪರಿಣಮಿಸಿದೆ.   ಕೇಂದ್ರದಲ್ಲಿ ಅಧಿಕಾರ ಹಿಡಿದು ಎರಡೂವರೆ ವರ್ಷ ಪೂರೈಸಿರುವ ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರದ ಸಾಧನೆಗಳನ್ನು ಮತದಾರ ಓರೆಗೆ ಹಚ್ಚಲಿದ್ದಾನೆ. ನೋಟು ನಿಷೇಧದ ಬಳಿಕ ದೇಶದೆಲ್ಲೆಡೆ ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ.
ಈ ಚುನಾವಣೆಯಲ್ಲಿ ಮತದಾರ ಕೇಂದ್ರ ಸರ್ಕಾರಕ್ಕೆ ಯಾವ ಸಂದೇಶ ನೀಡಲಿದ್ದಾನೆ ಎಂಬುದನ್ನು ದೇಶದ ಜನತೆ ಕಾತುರದಿಂದ ಎದುರು ನೋಡುತ್ತಿದೆ. ಇನ್ನು ಐದು ವರ್ಷ ಆಡಳಿತ ನಡೆಸಿರುವ ಇತರೆ ರಾಜಕೀಯ ಪಕ್ಷಗಳಿಗೂ ಈ ಚುನಾವಣೆ ಮಾಡು ಇಲ್ಲವೆ ಮಡಿ ಎನ್ನುವಂತಾಗಿದೆ.

ಉತ್ತರಪ್ರದೇಶದಲ್ಲಿ ಆಡಳಿತಾರೂಢ ಸಮಾಜವಾದಿ ಪಕ್ಷದ ಸೈಕಲ್ ಪಂಕ್ಚರ್ ಮಾಡಲು ಬಿಜೆಪಿ, ಬಿಎಸ್‍ಪಿ, ಕಾಂಗ್ರೆಸ್ ಹವಣಿಸುತ್ತಿವೆ. ಇನ್ನು ಗಿರಿಶಿಖರಗಳ ನಾಡು ಉತ್ತರಖಂಡ್‍ನಲ್ಲಿ ಮುಖ್ಯಮಂತ್ರಿ ಹರೀಶ್ ರಾವತ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅಧಿಪತ್ಯವನ್ನು ಕೊನೆಗಾಣಿಸಿ ಕಮಲ ಮುಡಿಗೇರಿಸಿಕೊಳ್ಳಲು ಬಿಜೆಪಿ ಕೂಡ ರಣತಂತ್ರ ನಡೆಸಿದೆ.  ಪ್ರವಾಸಿಗರ ಸ್ವರ್ಗವೆಂದೇ ಕರೆಯುವ ಪುಟ್ಟ ರಾಜ್ಯ ಗೋವಾದಲ್ಲಿ ಮತ್ತೆ 2ನೇ ಬಾರಿಗೆ ಅಧಿಕಾರದ ಕನಸು ಕಾಣುತ್ತಿರುವ ಬಿಜೆಪಿಯನ್ನು ಮಣಿಸಲು ಆಮ್ ಆದ್ಮಿ ಹಾಗೂ ಕಾಂಗ್ರೆಸ್ ಮುಂದಾಗಿವೆ.

ಪಂಜಾಬ್‍ನಲ್ಲಿ ಒಂದೂವರೆ ದಶಕಗಳ ಕಾಲ ನಿರಂತರವಾಗಿ ಆಡಳಿತ ನಡೆಸುತ್ತಿರುವ ಶಿರೋಮಣಿ ಅಕಾಲಿ ದಳದ ನೇತೃತ್ವದ ಎನ್‍ಡಿಎ ಮೈತ್ರಿಕೂಟವನ್ನು ಬಗ್ಗುಬಡಿಯಲು ಕಾಂಗ್ರೆಸ್ ಮತ್ತು ಎಎಪಿ ತುದಿಗಾಲಲ್ಲಿ ನಿಂತಿವೆ.

ಯಾವಾಗ ಮತದಾನ:

ಗೋವಾ -ಒಟ್ಟು ಕ್ಷೇತ್ರ -40, ಮತದಾನ ಫೆ.4
ಪಂಜಾಬ್- ಒಟ್ಟು ಕ್ಷೇತ್ರ -117, ಮತದಾನ ಫೆ.4
ಉತ್ತರಖಂಡ್-ಒಟ್ಟು ಕ್ಷೇತ್ರ -70, ಮತದಾನ ಫೆ.15

ಮಣಿಪುರ-ಒಟ್ಟುಕ್ಷೇತ್ರ-40, ಮೊದಲ ಹಂತ ಮಾ.4, 2ನೇ ಹಂತ ಮಾ.8

ಉತ್ತರಪ್ರದೇಶ-ಒಟ್ಟು ಕ್ಷೇತ್ರ-403
ಮೊದಲ ಹಂತ-ಫೆ.11- 73 ಕ್ಷೇತ್ರ
2ನೇ ಹಂತ- ಫೆ.15- 67 ಕ್ಷೇತ್ರ
3ನೇ ಹಂತ- ಫೆ.19- 69 ಕ್ಷೇತ್ರ
4ನೇ ಹಂತ-ಫೆ.23- 53 ಕ್ಷೇತ್ರ
5ನೇ ಹಂತ- ಫೆ.27-53 ಕ್ಷೇತ್ರ
6ನೇ ಹಂತ – ಮಾ.4-49 ಕ್ಷೇತ್ರ
7ನೇ ಹಂತ- ಮಾ.8- 40 ಕ್ಷೇತ್ರ
ಮತಗಳ ಎಣಿಕೆ: ಮಾರ್ಚ್ 11

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin