ಸುಪ್ರೀಂ ಆದೇಶ ಪಾಲಿಸದಿರಲು ರಾಜ್ಯ ಸರ್ಕಾರ ನಿರ್ಧಾರ : ಪುನರ್ ಪರಿಶೀಲನೆಗೆ ಅರ್ಜಿ

ಈ ಸುದ್ದಿಯನ್ನು ಶೇರ್ ಮಾಡಿ

KRS dam Cauvery Supreme

ಬೆಂಗಳೂರು, ಜ.5- ಮುಂದಿನ ಆದೇಶದವರೆಗೆ ಪ್ರತಿನಿತ್ಯ ಕಾವೇರಿ ಜಲಾಶಯದಿಂದ ಎರಡು ಸಾವಿರ ಕ್ಯೂಸೆಕ್ಸ್ ನೀರು ಹರಿಸುವಂತೆ ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ಪಾಲನೆ ಮಾಡದಿರಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಒಂದೆರಡು ದಿನಗಳಲ್ಲಿ ರಾಜ್ಯ ಸರ್ಕಾರ ಸರ್ವೋಚ್ಚ ನ್ಯಾಯಾಲಯ ಬುಧವಾರ ನೀಡಿರುವ ತೀರ್ಪನ್ನು ಪುನರ್ ಪರಿಶೀಲನೆ ಮಾಡುವಂತೆ ಮಾರ್ಪಾಡು ಅರ್ಜಿ ಸಲ್ಲಿಸಲಿದೆ. n ಕಾವೇರಿ ಕೊಳ್ಳದ ಜಲಾಶಯಗಳಾದ ಕಬಿನಿ, ಹಾರಂಗಿ, ಕೆಆರ್‍ಎಸ್ ಮತ್ತು ಹೇಮಾವತಿ ಜಲಾಶಯಗಳಲ್ಲಿ ಸಂಗ್ರಹವಾದ ನೀರು ಕುಡಿಯುವುದಕ್ಕೂ ಸಾಕಾಗುವುದಿಲ್ಲ. ಪರಿಸ್ಥಿತಿ ಹೀಗಿರುವಾಗ ತಮಿಳುನಾಡಿಗೆ ಪ್ರತಿನಿತ್ಯ ಎರಡು ಸಾವಿರ ಕ್ಯೂಸೆಕ್ಸ್ ನೀರು ಹರಿಸಿದರೆ ಜಲಾಶಯ ಬರಿದಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದೆ.

ಸುಪ್ರೀಂಕೋರ್ಟ್‍ನ ತ್ರಿಸದಸ್ಯ ಪೀಠ ನೀಡಿರುವ ಆದೇಶದ ವಿರುದ್ಧ ಮಾರ್ಪಾಡು ಅರ್ಜಿ ಸಲ್ಲಿಸಲಾಗುವುದು. ಸದ್ಯದ ಪರಿಸ್ಥಿತಿಯಲ್ಲಿ ನಾವು ತಮಿಳುನಾಡಿಗೆ ನೀರು ಹರಿಸಲು ಸಾಧ್ಯವೇ ಇಲ್ಲ. ಇದನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲಿದ್ದೇವೆ ಎಂದು ಬೃಹತ್ ನೀರಾವರಿ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ. ನಾಲ್ಕೂ ಜಲಾಶಯಗಳಲ್ಲಿ ನೀರಿನ ಸಂಗ್ರಹ ಡೆಡ್ ಸ್ಟೋರೇಜ್ ತಲುಪಿದೆ. ಕೆಆರ್‍ಎಸ್‍ನಲ್ಲಿ ಸಂಗ್ರಹವಾಗಿರುವ ನೀರು ಬೆಂಗಳೂರು, ಮೈಸೂರು, ರಾಮನಗರ, ಮಂಡ್ಯ ಮತ್ತಿತರ ಪಟ್ಟಣಗಳಿಗೆ ಕುಡಿಯುವ ನೀರು ಪೂರೈಸಬೇಕು. ಜಲಾಶಯಗಳಲ್ಲಿ ಸಂಗ್ರಹವಾಗಿರುವ ನೀರನ್ನು ಕೃಷಿ ಚಟುವಟಿಕೆಗಳಿಗೂ ಬಳಸಿಕೊಳ್ಳುತ್ತಿಲ್ಲ. ವಾಸ್ತವ ಚಿತ್ರಣ ಹೀಗಿರುವಾಗ ತಮಿಳುನಾಡಿಗೆ ನೀರು ಹರಿಸುವುದು ಅಸಾಧ್ಯದ ಮಾತು ಎಂದು ತಿಳಿಸಿದ್ದಾರೆ.

ಕಬಿನಿ, ಕೆಆರ್‍ಎಸ್‍ನಲ್ಲಿ 13 ಟಿಎಂಸಿ ನೀರು ಸಂಗ್ರಹವಾಗಿದೆ. ನಾಗರಹೊಳೆ, ಬಂಡಿಪುರ ರಾಷ್ಟ್ರೀಯ ಉದ್ಯಾನದಲ್ಲಿರುವ ಕಾಡು ಪ್ರಾಣಿಗಳು, ಪಕ್ಷಿಗಳಿಗೂ ಬಳಸಬೇಕು. ಮೆಟ್ಟೂರು ಜಲಾಶಯದಲ್ಲಿ ಸಾಕಷ್ಟು ನೀರು ಸಂಗ್ರಹವಾಗಿರುವುದರಿಂದ ಇದನ್ನೇ ಬಳಸಿಕೊಳ್ಳುವಂತೆ ನ್ಯಾಯಾಲಯಕ್ಕೆ ಮನವಿ ಮಾಡಲಿದ್ದೇವೆ. ಈಗಾಗಲೇ ಕಾನೂನು ತಜ್ಞರ ಜತೆ ಚರ್ಚಿಸಿ ಮಾರ್ಪಾಡು ಅರ್ಜಿ ಸಲ್ಲಿಸುವುದಾಗಿ ಪಾಟೀಲ್ ತಿಳಿಸಿದ್ದಾರೆ.   ನಿನ್ನೆ ಸುಪ್ರೀಂಕೋರ್ಟ್‍ನ ಬ್ರಿಜೇಶ್ ಮಿಶ್ರ ನೇತೃತ್ವದ ತ್ರಿಸದಸ್ಯ ಪೀಠ ಮುಂದಿನ ಫೆ.7ರೊಳಗೆ ತಮಿಳುನಾಡಿಗೆ ಪ್ರತಿನಿತ್ಯ ಎರಡು ಸಾವಿರ ಕ್ಯೂಸೆಕ್ಸ್ ನೀರು ಹರಿಸುವಂತೆ ಆದೇಶ ಮಾಡಿತ್ತು. ಇದಕ್ಕೆ ರಾಜ್ಯ ಸರ್ಕಾರ ತೀವ್ರ ವಿರೋಧ ವ್ಯಕ್ತಪಡಿಸಿತ್ತು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin