ನಕಲಿ ವೈದ್ಯರ ಹಾವಳಿ ತಡೆಗಟ್ಟಲು ನೋಂದಣಿ ನವೀಕರಣ ಕಡ್ಡಾಯ

ಈ ಸುದ್ದಿಯನ್ನು ಶೇರ್ ಮಾಡಿ

doctor

ಬೆಂಗಳೂರು,ಜ.7-ರಾಜ್ಯಾದ್ಯಂತ ಹೆಚ್ಚುತ್ತಿರುವ ನಕಲಿ ವೈದ್ಯರನ್ನು ತಡೆಗಟ್ಟಲು ಐದು ವರ್ಷಕ್ಕೊಮ್ಮೆ ನಡೆಯುತ್ತಿದ್ದ ನೋಂದಣಿ ನವೀಕರಣವನ್ನು ಕಡ್ಡಾಯಗೊಳಿಸಲಾಗುತ್ತದೆ ಎಂದು ಕರ್ನಾಟಕ ಮೆಡಿಕಲ್ ಕೌನ್ಸಿಲ್ ಅಧ್ಯಕ್ಷ ಡಾ.ಎಚ್.ವೀರಭದ್ರಪ್ಪ ತಿಳಿಸಿದ್ದಾರೆ.   ಇತ್ತೀಚಿನ ದಿನಗಳಲ್ಲಿ ನಕಲಿ ವೈದ್ಯರ ಹಾವಳಿಯಿಂದಾಗಿ ವೈದ್ಯಕೀಯ ಕ್ಷೇತ್ರದಲ್ಲಿ ಆತಂಕ ಮೂಡಿದೆ. 1961ರ ಕಾಯ್ದೆ ಪ್ರಕಾರ ಎಂಬಿಬಿಎಸ್ ಪದವಿ ಗಳಿಸಿದವರು ಇಂತಿಷ್ಟು ಹಣ ಕಟ್ಟಿ ನೋಂದಣಿ ಮಾಡಿಸಿಕೊಳ್ಳಬೇಕು. ಆದರೆ 2000 ಇಸವಿ ನಂತರದಲ್ಲಿ ಆದ ಕೆಲವೊಂದು ಬೆಳವಣಿಗೆಗಳಿಂದ 2011ರ ವೇಳೆಯಲ್ಲಿ ಅಜೀವ ಸದಸ್ಯತ್ವವನ್ನು ಪಡೆದುಕೊಂಡಿದ್ದಾರೆ. ಈ ರೀತಿ ಕಾಯ್ದೆಗೆ ವಿರುದ್ಧವಾಗಿ ಸದಸ್ಯತ್ವ ಪಡೆದಿರುವ 2011ರ ನಂತರದ ಎಲ್ಲರಿಗೂ ಈಗಾಗಲೇ ನೋಟಿಸ್ ನೀಡಲಾಗಿದೆ ಎಂದು ಹೇಳಿದರು.

ಕೆಲವರದ್ದು 500, 1000 ನೀಡಿ ನೋಂದವಣಿಗೆ ಸೀಲು ಹಾಕಿಸಿಕೊಂಡಿದ್ದಾರೆ. ಇಂತಹ ಅವ್ಯವಸ್ಥೆಗಳನ್ನು ತಡೆಗಟ್ಟಲು ಹಾಗೂ ಎಲ್ಲ ರೀತಿಯ ಅಕ್ರಮಗಳನ್ನು ತಹಬದಿಗೆ ತರಲು ಕೌನ್ಸಿಲ್ ಮುಂದಾಗಿದ್ದು , ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.  ಈ ಸಂಬಂಧ ರಾಜ್ಯ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಅನುಮತಿ ಪಡೆಯಲಾಗಿದೆ. 2011ರ ನಂತರದಲ್ಲಿ ನಡೆದ ವೈದ್ಯರ ನೋಂದಣಿಯನ್ನು ರದ್ದುಗೊಳಿಸಲಾಗಿದೆ. 2017ರ ಜೂನ್‍ವರೆಗೂ ಗಡುವು ನೀಡಿ ಈ ಅವಧಿಯೊಳಗೆ ನೋಂದಣಿ ಹಾಗೂ ನವೀಕರಣ ಮಾಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ನೀಡಿ ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯ ಎಂದು ಸ್ಪಷ್ಟಪಡಿಸಿದರು.

ಕೆಲವರು ಐಎಂಎ(ಇಂಡಿಯನ್ ಮೆಡಿಕಲ್ ಕೌನ್ಸಿಲ್)ಯಿಂದ ನೋಂದಣಿಯಾಗಿದ್ದೇವೆ ಎಂದು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದರೆ ರಾಜ್ಯ ಮಟ್ಟದಲ್ಲಿ ಕರ್ನಾಟಕ ಮೆಡಿಕಲ್ ಕೌನ್ಸಿಲ್‍ನಲ್ಲಿ ನೋಂದಣಿಯಾಗಬೇಕಿರುವುದು ಕಡ್ಡಾಯವಾಗಿದೆ ಎಂದು ವಿವರಿಸಿದರು.  ರಾಜ್ಯ ಸರ್ಕಾರ ಇತ್ತೀಚೆಗೆ ಆರ್ಯುವೇದ, ಯುನಾನಿ ವೈದ್ಯರು ಆಲೋಪತಿ ಚಿಕಿತ್ಸೆಯನ್ನು ನೀಡಲು ಅನುಮತಿ ನೀಡಿದೆ. ಆದರೆ ಇದು ಸರಿಯಲ್ಲ. ಕೇವಲ ಆರು ತಿಂಗಳ ಆಲೋಪತಿ ತರಬೇತಿ ಪಡೆದು ಆರ್ಯುವೇದ ವೈದ್ಯರು ಸಹ ಆಲೋಪತಿ ಚಿಕಿತ್ಸೆ ನೀಡಬಹುದು ಎಂಬುದು ಸರಿಯಲ್ಲ. ಇಂತಹ ನಿರ್ಧಾರದಿಂದ ಜನರ ಆರೋಗ್ಯದ ಜೊತೆ ಚೆಲ್ಲಾಟವಾಡಿದಂತಾಗುತ್ತದೆ. ಕೂಡಲೇ ಸರ್ಕಾರ ಈ ನಿರ್ಧಾರವನ್ನು ಹಿಂಪಡೆಯಬೇಕೆಂದು ಮನವಿ ಮಾಡಿದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin