ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಮಾರೋಪ : ಪಂಚರಾಜ್ಯ ಚುನಾವಣೆ ಗೆಲ್ಲಲು ಪಣ

ಈ ಸುದ್ದಿಯನ್ನು ಶೇರ್ ಮಾಡಿ

bjp-ne

ನವದೆಹಲಿ, ಜ.7-ಉತ್ತರಪ್ರದೇಶ ಸೇರಿದಂತೆ ಐದು ರಾಜ್ಯಗಳಲ್ಲಿ ನಡೆಯುವ ವಿಧಾನಸಭೆ ಚುನಾವಣೆಗಳಲ್ಲಿ ಸರ್ಕಾರದ ಸಾಧನೆಗಳನ್ನು ಜನತೆಯ ಮುಂದಿಟ್ಟು ಪಕ್ಷದ ಗೆಲುವಿಗೆ ಒಗ್ಗೂಡಿ ಶ್ರಮಿಸುವ ನಿರ್ಣಯವನ್ನು ಇಂದು ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯ ಸಮಾರೋಪ ಸಭೆಯಲ್ಲಿ ಕೈಗೊಳ್ಳಲಾಗಿದೆ.   ಪಂಚ ರಾಜ್ಯಗಳ ಚುನಾವಣಾ ಸಮರದ ಹಿನ್ನೆಲೆಯಲ್ಲಿ ಪಕ್ಷ ಅನುಸರಿಸಬೇಕಾದ ರಣತಂತ್ರ ಸೇರಿದಂತೆ ಮಹತ್ವದ ವಿಷಯಗಳ ಬಗ್ಗೆ ಸಭೆಯಲ್ಲಿ ಮಹತ್ವದ ಚರ್ಚೆ ನಡೆಲಾಯಿತು.  ದೆಹಲಿಯಲ್ಲಿ ನಿನ್ನೆಯಿಂದ ನಡೆದ ಎರಡು ದಿನಗಳ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಇಂದು ಕೂಡ ಪ್ರಮುಖ ಚುನಾವಣಾ ಸಿದ್ದತೆಗಳು, ನೋಟು ರದ್ದತಿ ಬಳಿಕ ಕಂಡುಬಂದ ಬೆಳವಣಿಗೆಗಳು, ಹಾಗೂ ಪ್ರಚಲಿತ ವಿದ್ಯಮಾನಗಳ ಬಗ್ಗೆ ಚರ್ಚೆ-ಸಮಾಲೋಚನೆಗಳು ನಡೆದವು

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮಾತನಾಡಿ, 5 ರಾಜ್ಯಗಳ ಚುನಾವಣೆಗಾಗಿ ಪಕ್ಷವನ್ನು ಸಂಘಟಿಸಲು ಮುಖಂಡರು ಮತ್ತು ಕಾರ್ಯಕರ್ತರು ಶ್ರಮಿಸಬೇಕೆಂದು ಕರೆ ನೀಡಿದರು.
ಐದು ರಾಜ್ಯಗಳ ಚುನಾವಣೆಗಳಲ್ಲಿ ಅಪನಗದೀಕರಣದ ಪೂರಕ ಪರಿಣಾಮಗಳನ್ನು ಮತದಾರರ ಮುಂದೆ ದೊಡ್ಡ ಮಟ್ಟದಲ್ಲಿ ಬಿಂಬಿಸುವಂತೆ ಅವರು ನಿನ್ನೆ ನಡೆದ ಸಭೆಯಲ್ಲಿ ಮುಖಂಡರಿಗೆ ಸೂಚಿಸಿದರು.  ಈ ಸಭೆಯಲ್ಲಿ ಚುನಾವಣಾ ಕಾರ್ಯತಂತ್ರಗಳನ್ನು ರೂಪಿಸುವುದು, ನೋಟು ರದ್ದತಿ ನಂತರದಲ್ಲಿ ಕೇಂದ್ರ ಸರ್ಕಾರಕ್ಕೆ ಆಗಿರುವ ಪ್ರಯೋಜನಗಳು ಹಾಗೂ ಭಯೋತ್ಪಾದಕರ ವಿರುದ್ಧ ನಡೆಸಲಾದ ಸರ್ಜಿಕಲ್ ಸ್ಟ್ರೈಕ್ ನಂತರದ ಸನ್ನಿವೇಶ ಮೊದಲಾದ ವಿಷಯಗಳ ಬಗ್ಗೆ ಗಹನ ಚರ್ಚೆ ನಡೆದವು.

ಇಂದು ನಡೆದ ಸಮಾರೋಪ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿ ಚುನಾವಣೆಗಳು, ನೋಟು ರದ್ದತಿ ನಂತರದ ಫಲಶೃತಿ ಮೊದಲಾದ ವಿಷಯಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು.  ಸರ್ಕಾರದ ಸಾಧನೆಗಳು, ಬಡವರ ಪರ ಕೈಗೊಂಡ ಯೋಜನೆಗಳನ್ನು ಪ್ರಚಾರದ ಅಸ್ತ್ರವಾಗಿ ಬಳಸಿಕೊಂಡು ಐದು ರಾಜ್ಯಗಳ ಚುನಾವಣೆಗಳಲ್ಲಿ ಪಕ್ಷದ ಗೆಲುವಿಗೆ ಶ್ರಮಿಸಬೇಕೆಂಧು ಬಿಜೆಪಿಯ ಎಲ್ಲ ರಾಜ್ಯಗಳ ಮುಖಂಡರು, ಪದಾಧಿಕಾರಿಗಳು ಮತ್ತು ಕಾರ್ಯಕರ್ತರಿಗೆ ಮೋದಿ ಕರೆ ನೀಡಿದರು. ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಕರ್ನಾಟಕ ರಾಜ್ಯದಿಂದ ಪಕ್ಷದ ಹಿರಿಯ ಮುಖಂಡರಾದ ಬಿ.ಎಸ್.ಯಡಿಯೂರಪ್ಪ, ಕೆ.ಎಸ್.ಈಶ್ವರಪ್ಪ, ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವರಾದ ಅನಂತ್‍ಕುಮಾರ್, ಸದಾನಂದ ಗೌಡ ಮೊದಲಾದವರು ಭಾಗವಹಿಸಿದ್ದರು.

ಬಿಜೆಪಿ ಕೇಂದ್ರೀಯ ಚುನಾವಣಾ ಸಮಿತಿ ಜ.14ರ ಮಕರ ಸಂಕ್ರಾಂತಿ ದಿನಾಂಕದಂದು ಉತ್ತರಪ್ರದೇಶ, ಪಂಜÁಬ್, ಗೋವಾ, ಉತ್ತರಖಂಡ್ ಮತ್ತು ಮಣಿಪುರ ರಾಜ್ಯಗಳಲ್ಲಿ ಸ್ಫರ್ಧಿಸುವ ತನ್ನ ಅಧಿಕೃತ ಪಟ್ಟಿಯನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin