ಪೊಲೀಸರಿಂದಲೇ 16 ಮಹಿಳೆಯ ರೇಪ್ : ಛತ್ತೀಸ್‍ಗಢ ಸರ್ಕಾರಕ್ಕೆ ನೋಟಿಸ್

ಈ ಸುದ್ದಿಯನ್ನು ಶೇರ್ ಮಾಡಿ
Rape-Police
ರಾಂಚಿ, ಜ.8 – ಛತ್ತೀಸ್‍ಗಢ ಪೊಲೀಸರು 2015 ಮತ್ತು 2016ರಲ್ಲಿ 16 ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ ಚಿತ್ರಹಿಂಸೆ ನೀಡಿರುವುದು ದೃಢಪಟ್ಟಿದೆ ಎಂದು ಆರೋಪಿಸಿರುವ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‍ಎಚ್‍ಆರ್‍ಸಿ) ಇದಕ್ಕೆ ರಾಜ್ಯ ಸರ್ಕಾರವೇ ಹೊಣೆ ಎಂದು ಆಪಾದಿಸಿ ನೋಟಿಸ್ ಜಾರಿಗೊಳಿಸಿದೆ.  ಈ ಸಂಬಂಧ ಎನ್‍ಎಚ್‍ಆರ್‍ಸಿ ಶನಿವಾರ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದು, ಸಂತ್ರಸ್ತೆಯರಿಗೆ 37 ಲಕ್ಷ ರೂ.ಗಳ ಮಧ್ಯಂತರ ಪರಿಹಾರ ನೀಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದೆ.  ಪೊಲೀಸರ ವಿಕೃತ ಕೃತ್ಯಗಳಲ್ಲಿ ಬಲಿಪಶುಗಳಾಗಿರುವ ಇತರ 20 ಸಂತ್ರಸ್ತರ ಹೇಳಿಕೆಯನ್ನು ದಾಖಲಿಸಿಕೊಳ್ಳಬೇಕಿದೆ ಎಂದು ಆಯೋಗ ಹೇಳಿದ್ದು, ಇನ್ನಷ್ಟು ಹೀನಾಯ ಘಟನೆಗಳು ಬೆಳಕಿಗೆ ಬರಲಿವೆ.
ಪೊಲೀಸರಿಂದ ಅತ್ಯಾಚಾರ ಮತ್ತು ಹಿಂಸಾಚಾರಕ್ಕೆ ಒಳಗಾದ ಇತರರ ಹೇಳಿಕೆಯನ್ನು ಎನ್‍ಎಚ್‍ಆರ್‍ಸಿ ತಂಡದಿಂದ ಅಥವಾ ದಂಡಾಧಿಕಾರಿಯವರಿಂದ ದಾಖಲಿಸಿಕೊಂಡಿಲ್ಲ. ಈ ಬಗ್ಗೆ ಅವರಿಂದ ಹೇಳಿಕೆಗಳನ್ನು ಪಡೆಯುವಂತೆ ತನ್ನ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿರುವ ಆಯೋಗವು, ಇನ್ನೊಂದು ತಿಂಗಳಲ್ಲಿ ಸಂಪೂರ್ಣ ವರದಿಯನ್ನು ಕೇಂದ್ರಕ್ಕೆ ಸಲ್ಲಿಸುವುದಾಗಿ ಹೇಳಿದೆ.  ಅತ್ಯಾಚಾರ, ಲೈಂಗಿಕ ದೌರ್ಜನ್ಯ ಮತ್ತು ಚಿತ್ರಹಿಂಸೆಗೆ ಒಳಗಾದ ಮಹಿಳೆಯರಿಗೆ 37 ಲಕ್ಷ ರೂ.ಗಳ ಮಧ್ಯಂತರ ಪರಿಹಾರಕ್ಕೆ ಏಕೆ ಶಿಫಾರಸು ಮಾಡಿಲ್ಲ ಎಂಬುದಕ್ಕೆ ವಿವರಣೆ ನೀಡುವಂತೆ ಎನ್‍ಎಚ್‍ಆರ್‍ಸಿ ಸರ್ಕಾರದಿಂದ ವಿವರಣೆ ಕೋರಿದೆ.
ಅತ್ಯಾಚಾರಕ್ಕೆ ಒಳಗಾದೆ 8 ಮಂದಿಗೆ ತಲಾ 3 ಲಕ್ಷ ರೂ., ಲೈಂಗಿಕ ಹಲ್ಲೆಗೆ ಗುರಿಯಾದ ಆರು ಸಂತ್ರಸ್ತರಿಗೆ ತಲಾ 2 ಲಕ್ಷ ರೂ. ಹಾಗೂ ಹಿಂಸೆ ಅನುಭವಿಸಿದವರಿಗೆ ತಲಾ 50,000 ರೂ.ಗಳ ಮಧ್ಯಂತರ ಪರಿಹಾರ ನೀಡುವಂತೆ ಸಮಿತಿ ಆಗ್ರಹಿಸಿದೆ.  ಛತ್ತೀಸ್‍ಗಢದ ಬಿಜಾಪುರ ಜಿಲ್ಲೆಯ ಐದು ಗ್ರಾಮಗಳ 40 ಮಹಿಳೆಯರ ಮೇಲೆ ರಾಜ್ಯ ಪೊಲೀಸ್ ಇಲಾಖೆಯ ಸಿಬ್ಬಂದಿ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಇವರಲ್ಲಿ ಇಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ ಎಂದು ನವೆಂಬರ್ 2015ರಲ್ಲಿ ಆಂಗ್ಲ ದೈನಿಕವೊಂದು ತನಿಖಾ ವರದಿ ಮಾಡಿತ್ತು.
ಇದೇ ರೀತಿ ಕಳೆದ ವರ್ಷ ಜನವರಿ 11 ಮತ್ತು 14ರ ನಡುವೆ ಎರಡು ಗ್ರಾಮಗಳ ಮಹಿಳೆಯರ ಮೇಲೂ ಅತ್ಯಾಚಾರ ಎಸಗಿ ಚಿತ್ರಹಿಂಸೆ ನೀಡಲಾಗಿತ್ತು. ಈ ಎರಡೂ ಪ್ರಕರಣಗಳಲ್ಲೂ ಗ್ರಾಮಸ್ಥರಿಗೆ ಸೇರಿದ ಬೆಲೆಬಾಳುವ ವಸ್ತುಗಳನ್ನು ಪೊಲೀಸರೇ ಕಳುವು ಮಾಡಿದ್ದರು ಎಂದು ವರದಿಯಲ್ಲಿ ತಿಳಿಸಲಾಗಿತ್ತು. ಈ ವರದಿಗಳನ್ನು ಆಧರಿಸಿ ಆಯೋಗ ವಿಸ್ತತ ತನಿಖೆ ನಡೆಸಿತ್ತು.
Facebook Comments

Sri Raghav

Admin