ಮತ್ತೆ 10 ಮಂದಿ ಬೆಸ್ತರನ್ನು ಬಂಧಿಸಿದ ಶ್ರೀಲಂಕಾ ನೌಕಾಪಡೆ : ದೇಶಾದ್ಯಂತ ಪ್ರತಿಭಟನೆಗೆ ಸಜ್ಜು

ಈ ಸುದ್ದಿಯನ್ನು ಶೇರ್ ಮಾಡಿ

Tamil-Fishermen-Srilanka

ರಾಮೇಶ್ವರ, ಜ.8-ಭಾರತ-ಶ್ರೀಲಂಕಾ ಜಲ ಗಡಿ ಬಳಿ ಮೀನುಗಾರಿಕೆಯಲ್ಲಿ ತೊಡಗಿದ್ದ ತಮಿಳುನಾಡಿನ 10 ಮಂದಿ ಮೀನುಗಾರರನ್ನು ದ್ವೀಪರಾಷ್ಟ್ರದ ನೌಕಾಪಡೆ ಇಂದು ಮತ್ತೆ ಬಂಧಿಸಿದ್ದು, ದೋಣಿಗಳನ್ನು ವಶಪಡಿಸಿಕೊಂಡಿದೆ. ಇದರೊಂದಿಗೆ ಕಳೆದ ಒಂದು ವಾರದಲ್ಲಿ ಶ್ರೀಲಂಕಾ ನೌಕಾ ಸಿಬ್ಬಂದಿ ಬಂಧಿಸಿದ ಬೆಸ್ತರ ಸಂಖ್ಯೆ 20ಕ್ಕೆ ಏರಿದೆ.  ಕಚ್ಚತೀವು ಜಲ ಪ್ರದೇಶದ ಬಳಿ ಮೀನುಗಾರಿಕೆಯಲ್ಲಿ ತೊಡಗಿದ್ದ ಪುದುಕೊಟ್ಟೈ ಜಿಲ್ಲೆಯ ಜಗದಪಟ್ಟಿಣಂನ ಮೀನುಗಾರರನ್ನು ನೌಕಾ ಸಿಬ್ಬಂದಿ ಸೆರೆ ಹಿಡಿದು ಶ್ರೀಲಂಕಾದ ತಲೈಮನ್ನಾರ್‍ಗೆ ಕರೆದೊಯ್ದಿದೆ ಎಂದು ಮೀನುಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಮೀನುಗಾರರ ಮೇಲೆ ನಿರಂತರವಾಗಿ ದೌರ್ಜನ್ಯ ಎಸಗಿ ಬಂಧಿಸುತ್ತಿರುವ ಶ್ರೀಲಂಕಾ ನೌಕಾಪಡೆ ಕೃತ್ಯವನ್ನು ಖಂಡಿಸಿ ರಾಷ್ಟ್ರಾದ್ಯಂತ ಪ್ರತಿಭಟನೆ ನಡೆಸುವುದಾಗಿ ತಮಿಳುನಾಡು ಮತ್ತು ಪುದುಚೇರಿ ಮೀನುಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಜೆ.ಬೋಸ್ ತಿಳಿಸಿದ್ದಾರೆ.  ನೆಡುಂತೀವು ಜಲಪ್ರದೇಶದಲ್ಲಿ ಮೀನುಗಾರಿಕೆಯಲ್ಲಿ ತೊಡಗಿದ್ದ ಕೆಲವರ ಮೇಲೆ ಶ್ರೀಲಂಕಾ ನೌಕಾಪಡೆ ಸಿಬ್ಬಂದಿ ನಿನ್ನೆ ಹಲ್ಲೆ ನಡೆಸಿದ್ದರು.  ತಮಿಳುನಾಡು ಬೆಸ್ತರಿಗೆ ರಕ್ಷಣೆ ಮತ್ತು ಭದ್ರತೆ ನೀಡಿದ ರಾಜತಾಂತ್ರಿಕ ಒತ್ತಡದ ಮೂಲಕ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಮುಖ್ಯಮಂತ್ರಿ ಒ. ಪನ್ನೀರ್ ಸೆಲ್ವಂ ಅವರು ಜನವರಿ 5ರಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದರು.

ಭಾರತ ಮತ್ತು ಶ್ರೀಲಂಕಾ ಜಲಗಡಿ ಬಳಿ ತಮಿಳುನಾಡು ಮೀನುಗಾರರು ಮತ್ತು ದ್ವೀಪರಾಷ್ಟ್ರದ ನೌಕಾಪಡೆ ನಡುವೆ ಕಳೆದ ಕೆಲುವು ದಿನಗಳಿಂದ ಸಂಘರ್ಷ ಮುಂದುವರಿದಿದೆ. ಜ.5ರಂದು ದ್ವೀಪರಾಷ್ಟ್ರದ ನೌಕಾದಳದವರು 3,500 ಮೀನುಗಾರರನ್ನು ಬೆದರಿಸಿ ಓಡಿದ್ದರೆ, ಇನ್ನೊಂದು ಘಟನೆಯಲ್ಲಿ 10 ಮಂದಿ ಬೆಸ್ತರನ್ನು ಬಂಧಿಸಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin