ಕಾಡಾನೆಗಳ ದಾಳಿಗೆ ರಾಜ್ಯದಲ್ಲಿ ಇಂದು ಮೂವರು ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

elephant-attack-01

ತುಮಕೂರು/ ಚಾಮರಾಜನಗರ, ಜ.9- ರಾಜ್ಯದ ಹಲವೆಡೆ ಕಾಡಾನೆಗಳ ಹಾವಳಿ ಮುಂದುವರೆದಿದ್ದು, ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಸೋರೆಕಾಯಿ ಪೆಂಟೆ ಗ್ರಾಮದಲ್ಲಿ ಇಬ್ಬರು ಹಾಗೂ ಚಾಮರಾಜನಗರ ತಾಲ್ಲೂಕಿನ ಗುಂಡ್ಲುಪೇಟೆ ತಾಲ್ಲೂಕಿನ ಹೊಸಹಳ್ಳಿ ಕಾಲೋನಿಯಲ್ಲಿ ಒಬ್ಬರು ಆನೆ ದಾಳಿಗೆ ಬಲಿಯಾಗಿದ್ದಾರೆ. ಗುಬ್ಬಿ ವರದಿ: ಕಳೆದ ಒಂದು ತಿಂಗಳಿನಿಂದ ಈ ಪ್ರದೇಶದಲ್ಲಿ ಬೀಡು ಬಿಟ್ಟಿದ್ದ ಮೂರು ಕಾಡಾನೆಗಳು ನಿನ್ನೆ ತಡ ರಾತ್ರಿ ಇಬ್ಬರು ಅನ್ನದಾತರನ್ನು ತುಳಿದು ಸಾಯಿಸಿವೆ. ಗಿರಿಯಪ್ಪ(55) ಹಾಗೂ ನಾಗರಾಜು (40) ಆನೆಗಳ ದಾಳಿಗೆ ಬಲಿಯಾಗಿದ್ದಾರೆ. ಒಂದು ತಿಂಗಳಿನಿಂದ ಕಾಡಾನೆ ಕಾಟ ಹೆಚ್ಚಿದ್ದು , ಸುತ್ತಮುತ್ತಲ ಗ್ರಾಮಸ್ಥರು ನಡೆಸಿದ ಪ್ರತಿಭಟನೆಯಿಂದ ಎಚ್ಚೆತ್ತ ಅರಣ್ಯ ಇಲಾಖೆ ಅಧಿಕಾರಿಗಳು ಆನೆಗಳನ್ನು ಓಡಿಸುವ ಪ್ರಯತ್ನ ಮಾಡಿದರಾದರೂ ಅದು ಫಲ ನೀಡಿಲ್ಲ.

ನಿನ್ನೆ ಗಿರಿಯಪ್ಪ ಮತ್ತು ನಾಗರಾಜು ಅವರು ಕುರಿ ಮೇಯಿಸಲು ಹೋದಾಗ ಈ ಘಟನೆ ನಡೆದಿದೆ. ಕುರಿಗಳು ಮಾತ್ರ ವಾಪಸ್ ಬಂದಿದ್ದು, ಆದರೆ, ಕುರಿ ಮೇಯಿಸಲು ಹೋದವರು ಮಾತ್ರ ಮನೆಗೆ ಬರಲಿಲ್ಲ. ಇದರಿಂದ ಗಾಬರಿಗೊಂಡ ಮನೆಯವರು ಹಾಗೂ ಗ್ರಾಮಸ್ಥರು ಜಮೀನು ಸುತ್ತಮುತ್ತ ಹುಡುಕಿದಾಗ ಇಂದು ಬೆಳಗ್ಗೆ ಇಬ್ಬರ ಶವಗಳು ಪತ್ತೆಯಾಗಿವೆ.  ಸುದ್ದಿ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಸಿಬ್ಬಂದಿಗಳು ಮತ್ತು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಚೇಳೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಚಾಮರಾಜನಗರ ವರದಿ:

ಗುಂಡ್ಲುಪೇಟೆ ತಾಲ್ಲೂಕಿನ ಹೊಸಹಳ್ಳಿ ಕಾಲೋನಿ ಬಳಿ ಆನೆ ತುಳಿದು ಚನ್ನಬಸಪ್ಪ (55) ಎಂಬುವರು ಬಲಿಯಾಗಿದ್ದಾರೆ. ಬಂಡಿಪುರ ರಾಷ್ಟ್ರೀಯ ಉದ್ಯಾನವನದ ಅಂಚಿನಲ್ಲೇ ಇರುವ ಈ ಗ್ರಾಮದಲ್ಲಿ ಕಳೆದ ರಾತ್ರಿ ಈ ದುರ್ಘಟನೆ ನಡೆದಿದೆ. ತನ್ನ ಜಮೀನಿನಲ್ಲಿ ಮುಸುಕಿನ ಜೋಳವನ್ನು ಕಾಯಲು ಚನ್ನಬಸಪ್ಪ ಹೋಗುತ್ತಿದ್ದಾಗ ಆನೆ ಎದುರಿಗೆ ಬಂದು ಆತನನ್ನು ತುಳಿದು ಸಾಯಿಸಿದೆ. ಇಂದು ಬೆಳಗ್ಗೆ ಇದು ಗೊತ್ತಾಗಿದ್ದು, ಅರಣ್ಯ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪ್ರತಿಭಟನೆ:

ಮೇಲಿಂದ ಮೇಲೆ ಕಾಡಾನೆಗಳ ದಾಳಿ ನಡೆಯುತ್ತಿದ್ದರೂ ಸಹ ಇವುಗಳನ್ನು ನಿಯಂತ್ರಿಸುವಲ್ಲಿ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ. ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin