ಫೆ.6ರಿಂದ ರಾಜ್ಯ ವಿಧಾನಮಂಡಲದ ಉಭಯ ಸದನಗಳ ಜಂಟಿ ಅಧಿವೇಶನ

ಈ ಸುದ್ದಿಯನ್ನು ಶೇರ್ ಮಾಡಿ

TB

ಬೆಂಗಳೂರು, ಜ.10– ರಾಜ್ಯ ವಿಧಾನಮಂಡಲದ ಉಭಯ ಸದನಗಳ ಜಂಟಿ ಅಧಿವೇಶನವನ್ನು ಫೆ.6ರಿಂದ ನಡೆಸಲು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟ.ಬಿ.ಜಯಚಂದ್ರ ಮಾತನಾಡಿ, ಫೆ.6ರಿಂದ 10ರವರೆಗೆ 5 ದಿನಗಳ ಕಾಲ ವಿಧಾನಸಭೆ ಮತ್ತು ವಿಧಾನಪರಿಷತ್‍ನ   ಅಧಿವೇಶನ ನಡೆಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು. ಪೊಲೀಸ್ ಗೃಹ ಯೋಜನೆಯಡಿ 11 ಸಾವಿರ ವಸತಿ ಗೃಹಗಳನ್ನು ನಿರ್ಮಿಸಲು 2027.37 ಕೋಟಿ ರೂ. ಪರಿಷ್ಕøತ ಅಂದಾಜು ಪಟ್ಟಿಗೆ ಇಂದು ನಡೆದ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿದೆ.

ಹುಡ್ಕೋ ಸೇರಿದಂತೆ ಯಾವುದೇ ಹಣಕಾಸು ಸಂಸ್ಥೆಯಲ್ಲಿ 1363 ಕೋಟಿ ರೂ. ಸಾಲ ಪಡೆಯಲು ಸರ್ಕಾರ ಖಾತ್ರಿ ನೀಡಲಿದೆ. ಶಿವಮೊಗ್ಗ ನಿರ್ಮಿಸಲಾಗುತ್ತಿರುವ ಜಿಲ್ಲಾ ಕಾರಾಗೃಹದಲ್ಲಿ 100 ಕೊಠಡಿ ಮಹಿಳಾ ಖೈದಿಗಳಿಗೆ, 500 ಪುರುಷ ಖೈದಿಗಳಿಗೆ ನಿರ್ಮಿಸಲಾಗುತ್ತಿದೆ. 134 ಹುದ್ದೆಗಳನ್ನು ಸೃಷ್ಟಿಸಿ ವಿವಿಧ 18 ವಾಹನಗಳನ್ನು ಖರೀದಿಸಲು ಅನುಮತಿ ಸಿಕ್ಕಿದೆ. ಸೌರವಿದ್ಯುತ್ 2014-2021ಕ್ಕೆ ತಿದ್ದುಪಡಿ ಮಾಡಲು ತೀರ್ಮಾನ ಕೈಗೊಳ್ಳಲಾಗಿದ್ದು, ಎಲ್ಲಾ ತಾಲೂಕುಗಳಲ್ಲೂ ಸೌರವಿದ್ಯುತ್ ಘಟಕ ಆರಂಭಿಸಲು ನಿರ್ಧರಿಸಲಾಗಿದೆ. 2 ಸಾವಿರ ಮೆಗಾ ವ್ಯಾಟ್ ವಿದ್ಯುತ್ತನ್ನು ಇದರಿಂದ ಉತ್ಪಾದಿಸಲು ಸಾಧ್ಯವಾಗಲಿದೆ ಎಂದರು.

ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಲ್ಲಿ ಖಾಲಿ ಇರುವ 100 ಬ್ಯಾಕ್‍ಲಾಗ್ ಹುದ್ದೆಗಳು ಸೇರಿದಂತೆ 550 ಹುದ್ದೆಗಳ ನೇಮಕಾತಿಗೆ ಅನುಮೋದನೆ ನೀಡಲಾಗಿದೆ. ಗದಗ ಜಿಲ್ಲೆಯ ನರಗುಂದದಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ನಿರ್ಮಿಸಲು ರಾಜ್ಯದ ಪಾಲು ಸೇರಿ 58 ಕೋಟಿ ರೂ.ಗಳಿಗೆ ಆಡಳಿತಾತ್ಮಕ ಒಪ್ಪಿಗೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.
2016-17ನೆ ಸಾಲಿಗೆ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಗೆ 75 ಕೋಟಿಗಳ ಷೇರು ಬಂಡವಾಳವನ್ನು ಸಂಸ್ಥೆಯ ಕಾರ್ಯಾಚರಣೆಗಾಗಿ ನೀಡಲು ಸಮ್ಮತಿಸಲಾಗಿದೆ.
ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ರಬ್ಬರ್ ವಿಭಾಗದ ಸುಳ್ಯಾ ಮತ್ತು ಪುತ್ತೂರು ತಾಲೂಕುಗಳಲ್ಲಿ 330 ಹೆಕ್ಟೇರ್ ಪ್ರದೇಶದಲ್ಲಿ 19.04 ಕೋಟಿ ವೆಚ್ಚದಲ್ಲಿ ರಬ್ಬರ್ ನೆಡುತೋಪುಗಳ ಮರುನಾಟಿ ಮಾಡುವ ಯೋಜನೆಗೆ ಅನುಮೋದನೆ ನೀಡಲಾಗಿದೆ.

ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗಳ ಕಟ್ಟಡ ನಿರ್ಮಾಣ ಕಾಮಗಾರಿಗೆ 29.60 ಕೋಟಿರೂ.ಗಳಿಗೆ ಅನುಮೋದನೆ ನೀಡಿದ್ದು, ಧಾರವಾಡದ ಪ್ರಾದೇಶಿಕ ವಿಜ್ಞಾನ ಕೇಂದ್ರದ ಆವರಣದಲ್ಲಿ ಅತ್ಯಾಧುನಿಕ ತ್ರಿಡಿ ಡಿಜಿಟಲ್ 8ಎ ರೆಸೆಲ್ಯೂಷನ್‍ನಲ್ಲಿ ತಾರಾಲಯವನ್ನು 22 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲು ಒಪ್ಪಿಗೆ ನೀಡಲಾಗಿದೆ. ದೇವನಹಳ್ಳಿ-ಕೆಂಪಾಪುರ ರಾಜ್ಯ ಹೆದ್ದಾರಿ 96ನ್ನು ವಿಜಯಪುರ-ವೇಮಗಲ್ ಮಾರ್ಗವಾಗಿ ದೇವನಹಳ್ಳಿ-ಕೋಲಾರದವರೆಗಿನ ಹೆದ್ದಾರಿಗಳಲ್ಲಿ ಹದಿನೆಂಟೂವರೆ ವರ್ಷ ಟೋಲ್ ಸಂಗ್ರಹಕ್ಕೆ ಅನುಮತಿ ದೊರೆತಿದೆ. ಚಾಮರಾಜನಗರದ ಇಂಟರ್‍ನ್ಯಾಷನಲ್ ಬುದ್ಧಿಸ್ಟ್ ಮಾಂಕ್ ಚಾರಿಟಬಲ್ ಟ್ರಸ್ಟ್‍ಗೆ, ಉತ್ತುವಳ್ಳಿ ಗ್ರಾಮದ ಸರ್ವೆ ನಂ.117ರಲ್ಲಿ ಮಾರ್ಗಸೂಚಿ ಶೇ.50ರಷ್ಟು ದರದಲ್ಲಿ ಸ್ಥಳ ನೀಡಲು ಸೂಚನೆ ನೀಡಲಾಗಿದೆ. ಅದೇ ರೀತಿ ದಾವಣಗೆರೆಯ ಹೊನ್ನಾಳಿ ತಾಲೂಕಿನ ಸೂರಗೊಂಡನಕೊಪ್ಪದ ಸಂತ ಸೇವಾಲಾಲ್ ಜನ್ಮಸ್ಥಳ ಮಹಾಮಠ ಸಮಿತಿಗೆ ಜಮೀನು ಮಂಜೂರು ಮಾಡಲು ತೀರ್ಮಾನಿಸಲಾಗಿದೆ.
2016-17ನೆ ಸಾಲಿನಲ್ಲಿ ಸರ್ಕಾರಿ ಅನುದಾನಿತ ಮತ್ತು ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ 10,380 ಮಂದಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡಲಾಗುವುದು.

ಜೆಎನ್‍ಎನ್‍ಯುಆರ್‍ಎಂ ಯೋಜನೆಯಡಿ ನಗರ ಸಾರಿಗೆ ವಾಹನಗಳನ್ನು ಖರೀದಿಸಲು ಒಪ್ಪಿಗೆ ನೀಡಲಾಗಿದೆ.  ರಸ್ತೆ ಬದಿ ನೆಡುತೋಪು ನಿರ್ಮಿಸಲು ಯೋಜನಾ ವೆಚ್ಚಕ್ಕೆ ಶೇ.1ರಷ್ಟು ಉಪಕರ ವಿಧಿಸಲು ಒಪ್ಪಿಗೆ ದೊರೆತಿದ್ದು, ಎನ್‍ಆರ್‍ಎಚ್(ನ್ಯಾಷನಲ್ ರೂರಲ್ ಹೆಲ್ತ್) ಉಚಿತ ರೋಗ ಪತ್ತೆಗಾಗಿ 41.77 ಕೋಟಿಗೆ ಅನುಮೋದನೆ ನೀಡಲಾಗಿದೆ. ಕಾರವಾರ ಬಂದರಿನಲ್ಲಿ ಅಲೆಗಳ ತಡೆಯಲು 820 ಮೀಟರ್ ಗೋಡೆಯನ್ನು 125 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲು ಒಪ್ಪಿಗೆ ನೀಡುವುದರೊಂದಿಗೆ ನಾಡಪ್ರಭು ಕೆಂಪೇಗೌಡ ಪ್ರಾಧಿಕಾರದ ಉಪಾಧ್ಯಕ್ಷರಾಗಿ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಲು ಸಮ್ಮತಿ ದೊರೆತಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin