ಬೆಂಗಳೂರಿನ ಕಸದ ಸಮಸ್ಯೆ ನಿವಾರಿಸಲು ಬಿಬಿಎಂಪಿ, ಸರ್ಕಾರ ವಿಫಲ : ಗೌಡರ ವಾಗ್ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

Devegowda-1 ಬೆಂಗಳೂರು, ಜ.10- ನಗರದಾದ್ಯಂತ ಕಸದ ಸಮಸ್ಯೆ ತೀವ್ರವಾಗಿದ್ದು, ಇದನ್ನು ಪರಿಹರಿಸುವಲ್ಲಿ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ಆಡಳಿತ ವಿಫಲವಾಗಿದೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರು ಇಂದಿಲ್ಲಿ ವಾಗ್ದಾಳಿ ನಡೆಸಿದರು.  ಭಾರತೀಯ ವಿದ್ಯಾಭವನದಲ್ಲಿ ಆಯೋಜಿಸಲಾಗಿದ್ದ ಬಿ ಪ್ಯಾಕ್ ಪದವಿ ಪ್ರಮಾಣ ಪತ್ರ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, ಬೆಂಗಳೂರು ಕಸದ ಆಗರವಾಗಿದೆ. ಹೈಕೋರ್ಟ್ ಇದನ್ನು ಸರಿಪಡಿಸುವಂತೆ ಈಗಾಗಲೇ ಸೂಚನೆ ನೀಡಿದ್ದರೂ ಬಿಬಿಎಂಪಿ ಹಾಗೂ ಆಡಳಿತಾರೂಢ ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಗರದಲ್ಲಿ ಕಸದ ಸಮಸ್ಯೆಯೊಂದಿಗೆ ಕುಡಿಯುವ ನೀರು, ಟ್ರಾಫಿಕ್ ಸೇರಿದಂತೆ ಇನ್ನಿತರ ಸಮಸ್ಯೆಗಳು ಜನರನ್ನು ಜರ್ಝರಿತ ಮಾಡಿದೆ. ನಗರದಲ್ಲಿ ಇಂತಹ ಸಮಸ್ಯೆಗಳು ಉದ್ಭವಿಸಿರುವುದು ಆತಂಕಕಾರಿ ಬೆಳವಣಿಗೆ ಎಂದು ಹೇಳಿದರು.

ಹಿಂದಿನ ಹಾಗೂ ಇಂದಿನ ಬೆಂಗಳೂರು ನಗರಕ್ಕೆ ಸಾಕಷ್ಟು ವ್ಯತ್ಯಾಸವಿದೆ. ಒಂದು ಕಡೆ ಜನಸಂಖ್ಯೆ ಹೆಚ್ಚುತ್ತಿದೆ. ಮೂಲ ಸೌಕರ್ಯಗಳ ಸಮಸ್ಯೆ ಬೃಹದಾಕಾರವಾಗಿ ಬೆಳೆಯುತ್ತಿದೆ ಎಂದರು.
ರಾಜಕಾರಣಿಗಳು ಮೊದಲು ತಮ್ಮನ್ನು ತಾವು ತಿದ್ದಿಕೊಳ್ಳಬೇಕು. ಹೆಚ್ಚು ಸಮಸ್ಯೆ ಸೃಷ್ಟಿಸುವವರೇ ರಾಜಕಾರಣಿಗಳು. ಸಮಸ್ಯೆಗಳ ನಿವಾರಣೆಗೆ ಸಾಕಷ್ಟು ಗಮನ ಹರಿಸಬೇಕಿದೆ. ಆದರೆ, ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗಗಳು ತಮ್ಮ ಕೆಲಸ ನಿರ್ವಹಿಸುವಲ್ಲಿ ವಿಫಲವಾಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇಂತಹ ಸಮಸ್ಯೆಗಳನ್ನು ಸರಿಪಡಿಸುವುದು ತುಂಬ ಕಷ್ಟ. ಜನರಿಂದ ಮಾತ್ರ ಬದಲಾವಣೆ ಸಾಧ್ಯ ಎಂದರು. ನಾನು ಅಧಿಕಾರದಲ್ಲಿದ್ದಾಗ ಕೆರೆಗಳ ಸಂರಕ್ಷಣೆಗೆ ಕಾವೇರಿ ನಾಲ್ಕನೆ ಹಂತದ ಯೋಜನೆ ಸೇರಿದಂತೆ ಇನ್ನಿತರ ಹಲವಾರು ಕ್ರಮಗಳನ್ನು ಕೈಗೊಂಡಿದ್ದೆ ಎಂದು ಹೇಳಿದರು.

Devegowda-2

ನಾನು ನಿರಾಶಾವಾದಿಯಲ್ಲ, ಆಶಾವಾದಿ. ಹೀಗಾಗಿ ನನ್ನ ಕೊನೆಯ ದಿನಗಳಲ್ಲಿ ಇಂತಹ ವ್ಯವಸ್ಥೆ ನೋಡುತ್ತಿದ್ದೇನೆ. ದೇಶದ ಜನರು ಸಹ ಎಲ್ಲವನ್ನೂ ಗಮನಿಸುತ್ತಿದ್ದಾರೆ. ಕಾಲ ಬಂದಾಗ ಅವರೇ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ನುಡಿದರು.  ನನ್ನ ಅನುಭವಗಳನ್ನು ಮುಂದಿನ ಪೀಳಿಗೆಗಾಗಿ ಬರೆದಿಟ್ಟಿದ್ದೇನೆ. ಶೀಘ್ರವೇ ಅದನ್ನು ಬಿಡುಗಡೆ ಮಾಡಲಿದ್ದೇನೆ ಎಂದರು.

ನ್ಯಾಯಾಲಯಗಳ ವಿರುದ್ಧ ಅಸಮಾಧಾನ:

ಕಾವೇರಿ ನೀರು ಬಿಡುವ ವಿಚಾರದಲ್ಲಿ ನ್ಯಾಯಾಲಯಗಳು ಲಭ್ಯವಿರುವ ನೀರಿನ ಪ್ರಮಾಣವನ್ನು ಗಮನಿಸದೆ ನೀರು ಹರಿಸಲು ಸೂಚಿಸುತ್ತಿರುವುದು ಬೇಸರದ ಸಂಗತಿ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.  ಬೇರೆ ರಾಜ್ಯಗಳಿಗೆ ನೀರು ಬಿಡಲು ಅಗತ್ಯವಿರುವಷ್ಟು ನೀರು ನಮ್ಮಲ್ಲಿದೆಯೋ ಇಲ್ಲವೋ ಎಂಬುದನ್ನು ತಿಳಿಯದೆ ನೀರು ಬಿಡಿ ಎಂದು ಹೇಳುತ್ತಿದ್ದಾರೆ. ನೀರಿನ ಸಂಗ್ರಹ ಹಾಗೂ ಲಭ್ಯತೆ ಬಗ್ಗೆ ನ್ಯಾಯಾಲಯಗಳು ಅರ್ಥ ಮಾಡಿಕೊಳ್ಳಬೇಕು ಎಂದರು.

ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಮಾತನಾಡಿ, ರಾಜಕಾರಣಿಗಳು ನೈತಿಕ ಮೌಲ್ಯ ಅಳವಡಿಸಿಕೊಳ್ಳಬೇಕು. ಸಂಸತ್ ಕಲಾಪಗಳಿಗೆ ಅಡ್ಡಿ ಪಡಿಸಿದ್ದು ಸರಿಯಲ್ಲ. ಪ್ರತಿನಿತ್ಯ ಈ ಕಲಾಪಗಳಿಗೆ 10 ಕೋಟಿ ರೂ. ಖರ್ಚಾಗುತ್ತದೆ. ಇದನ್ನು ಅರಿತು ನಮ್ಮ ಜನನಾಯಕರು ನಡೆದುಕೊಳ್ಳಬೇಕು ಎಂದರು. ಮಾಜಿ ಸಚಿವೆ ಲೀಲಾದೇವಿ ಆರ್.ಪ್ರಸಾದ್ ಮಾತನಾಡಿ, ಬಿಬಿಎಂಪಿಗೆ ರಾಜಕೀಯೇತರರನ್ನು ನಾಮಕರಣ ಮಾಡಬೇಕು. ಇದರಿಂದ ಹೆಚ್ಚಿನ ಅನುಕೂಲವಾಗಲಿದೆ. ಚುನಾವಣೆ ವ್ಯವಸ್ಥೆಯಲ್ಲಿಯೂ ಬದಲಾವಣೆಯಾಗಬೇಕು ಎಂದು ಅಭಿಪ್ರಾಯಪಟ್ಟರು. ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ, ಬಿ ಪ್ಯಾಕ್ ಸಿಇಒ ರೇವತಿ ಅಶೋಕ್, ಉಪಾಧ್ಯಕ್ಷ ಟಿ.ವಿ.ಮೋಹನ್‍ದಾಸ್ ಪೈ ಮತ್ತಿತರರು ಉಪಸ್ಥಿತರಿದ್ದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin