2019ರಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬಂದಾಗ ‘ಅಚ್ಛೇದಿನ್’ ಬರುತ್ತದೆ : ರಾಹುಲ್

ಈ ಸುದ್ದಿಯನ್ನು ಶೇರ್ ಮಾಡಿ

Rahul-Gandhi

ನವದೆಹಲಿ, ಜ.11- ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ ಅಚ್ಛೇ ದಿನ್ ಯಾವತ್ತು ಬರುವುದೋ ಎಂದು ಜನಸಾಮಾನ್ಯರು ಕಾಯುತ್ತಿದ್ದಾರೆ. ಅದು ಬರುವುದು ಮತ್ತೆ ನಮ್ಮ ಪಕ್ಷದ ಅಧಿಕಾರಕ್ಕೆ ಬಂದಾಗ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‍ಗಾಂಧಿ ಹೇಳಿದರು. ದೆಹಲಿಯ ತಾಲ್‍ಕಟೋರ ಕ್ರೀಡಾಂಗಣದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಇಂದು ಹಮ್ಮಿಕೊಂಡಿದ್ದ ಜನವೇದನೆ ಕಾಂಗ್ರೆಸ್ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಆವರು ಮಾತನಾಡಿ, ನಿಜವಾದ ಅಚ್ಛೇ ದಿನ್ ಬರುವುದು 2019ರಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದಾಗ ಎಂದರು.
ಹಿಂದು ಮುಂದು ಆಲೋಚಿಸದ, ಯಾವುದೇ ಆರ್ಥಿಕ ತಜ್ಞರ ಸಲಹೆ ಪಡೆಯದೆ ಪ್ರಧಾನಿ ಮೋದಿ ಅವರು ಏಕಪಕ್ಷೀಯ ನಿರ್ಧಾರ ತೆಗೆದುಕೊಂಡು ಗರಿಷ್ಠ ಮೌಲ್ಯದ ನೋಟುಗಳನ್ನು ನಿಷೇಧಿಸುವ ಮೂಲಕ ದೇಶದ ಜನತೆಯನ್ನು ಸಂಕಷ್ಟಕ್ಕೆ ಗುರಿ ಮಾಡಿದ್ದಾರೆ. ಅಲ್ಲದೆ, ಭಾರತೀಯ ರಿಸರ್ವ್ ಬ್ಯಾಂಕ್‍ನಂತಹ ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಲಗೊಳಿಸುವ ದುಃಸ್ಸಾಹಸಕ್ಕೆ ಕೈ ಹಾಕಿದ್ದಾರೆ ಎಂದು ಪ್ರಧಾನಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಮೇಕ್ ಇನ್ ಇಂಡಿಯಾ ಘೋಷಣೆ ಮೂಲಕ ಭಾರೀ ಪ್ರಚಾರ ನಡೆಸಿದ ಮೋದಿಯವರ ಸರ್ಕಾರ ಕೈಗಾರಿಕೆ ಮತ್ತು ಉತ್ಪಾದನಾ ಕ್ಷೇತ್ರಗಳಲ್ಲಿ 16 ವರ್ಷಗಳಷ್ಟು ಹಿಂದಕ್ಕೆ ಹೋಗಿದೆ ಎಂದು ರಾಹುಲ್‍ಗಾಂಧಿ ವ್ಯಂಗ್ಯವಾಡಿದರು. ವಾಹನಗಳ ವಹಿವಾಟು ಶೇ.60ರಷ್ಟು ಕುಸಿದಿದೆ ಎಂದು ಅಂಕಿ-ಅಂಶಗಳು ಹೇಳುತ್ತಿವೆ. ನೋಟು ನಿಷೇಧದಿಂದ ಈ ದೇಶದ ಶೇ.90ರಷ್ಟಿರುವ ಬಡವರು, ರೈತರು, ಕೂಲಿಕಾರರು, ಸಣ್ಣಪುಟ್ಟ ವ್ಯವಹಾರಸ್ಥರು, ರಸ್ತೆ ಬದಿ ವ್ಯಾಪಾರಿಗಳು ಸೇರಿದಂತೆ ಕೋಟ್ಯಂತರ ಜನ ಇಂದು ಬೀದಿಗೆ ಬಿದ್ದಿದ್ದಾರೆ. ಕಟ್ಟಡ ಕಾರ್ಮಿಕರು ಕೆಲಸವಿಲ್ಲದೆ ಉಪವಾಸ ಮಲಗುವಂತಾಗಿದೆ. ಮಕ್ಕಳ ಮದುವೆ ಮಾಡಲು ಹಣವಿಲ್ಲದೆ ಶುಭಕಾರ್ಯಗಳನ್ನು ಮುಂದೂಡಲಾಗುತ್ತಿದೆ. ನೂರಾರು ಜನ ಬಡವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬ್ಯಾಂಕ್‍ಗಳು, ಎಟಿಎಂಗಳ ಮುಂದೆ ದಿನಗಟ್ಟಲೆ ಸರದಿ ಸಾಲಿನಲ್ಲಿ ನಿಂತ ಅನೇಕರು ಅಲ್ಲೇ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ. ಇದಕ್ಕೆಲ್ಲ ಕೇಂದ್ರ ಸರ್ಕಾರ ಹೊಣೆಯಾಗಬೇಕಾಗುತ್ತದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ಕೇಂದ್ರ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದರು.

ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‍ಎಸ್‍ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಇಬ್ಬರೇ ಈ ದೇಶದ ಆಡಳಿತ ನಡೆಸುತ್ತಿದ್ದಾರೆ. ನೋಟು ನಿಷೇಧ ಕುರಿತಂತೆ ದೇಶ-ವಿದೇಶಗಳ ಯಾವ ಅರ್ಥಶಾಸ್ತ್ರ ತಜ್ಞರೂ ಒಪ್ಪಿಗೆ ಸೂಚಿಸಿಲ್ಲ. ನರೇಂದ್ರ ಮೋದಿ ಈ ನೋಟು ನಿಷೇಧದ ಪ್ರಕರಣವನ್ನು ಮಹಾಯಜ್ಞ ಎನ್ನುತ್ತಿದ್ದಾರೆ. ಇದು ಯಾವ ಯಜ್ಞ ಎಂಬುದು ಯಾರಿಗೂ ಅರ್ಥವಾಗುತ್ತಿಲ್ಲ. ನೋಟ್ ಬ್ಯಾನ್‍ನಿಂದಾಗಿ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಸೃಷ್ಟಿಯಾಗಿದೆ. ಪ್ರಧಾನಿ ಮೋದಿಯವರು ನೋಟ್‍ಬ್ಯಾನ್ ವಿಷಯವನ್ನು ಯಾರಿಗೂ ತಿಳಿಸಿಯೇ ಇರಲಿಲ್ಲ. ಆರ್‍ಬಿಐ ಗವರ್ನರ್, ಸಚಿವರು, ಸಂಸದರು ಸೇರಿದಂತೆ ಎಲ್ಲರನ್ನೂ ಕತ್ತಲಲ್ಲಿಟ್ಟು ಆಡಳಿತ ನಡೆದಿದೆ. ಯೋಗ ಗುರುವೆಂದು ಹೇಳಿಕೊಳ್ಳುವ ಉದ್ಯಮಿ ಬಾಬಾ ರಾಮ್‍ದೇವ್ ಈ ಸರ್ಕಾರದ ಸೂತ್ರಧಾರರಾಗಿದ್ದಾರೆ. ಜನರ ನಂಬಿಕೆಗೆ ದ್ರೋಹ ಬಗೆದಿರುವ ಪ್ರಧಾನಿ ಮೋದಿ ಜನತೆಯ ವಿಶ್ವಾಸವನ್ನೇ ಹುಸಿಗೊಳಿಸಿದ್ದಾರೆ ಎಂದು ಹರಿಹಾಯ್ದರು.
ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ವಿವಿಧ ರಾಜ್ಯಗಳ ಪಕ್ಷದ ನಾಯಕರು ಈ ಸಮಾವೇಶದಲ್ಲಿ ಭಾಗವಹಿಸಿದ್ದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin