ಲೋಕಾಯುಕ್ತ ಹುದ್ದೆಗೆ ಆಯ್ಕೆಯಾಗಿರುವ ನ್ಯಾ. ವಿಶ್ವನಾಥ್ ಶೆಟ್ಟಿ ಮೇಲೆ ಯಾವುದೇ ಆರೋಪಗಳಿಲ್ಲ : ಸಿಎಂ ಸಮರ್ಥನೆ

ಈ ಸುದ್ದಿಯನ್ನು ಶೇರ್ ಮಾಡಿ

Siddaramaiaha--c

ಗದಗ,ಜ.12-ಲೋಕಾಯುಕ್ತ ಹುದ್ದೆಗೆ ಆಯ್ಕೆ ಮಾಡಿರುವ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಅವರ ಮೇಲೆ ಯಾವುದೇ ಗುರುತರ ಆರೋಪಗಳಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ತಿಳಿಸಿದ್ದಾರೆ. ವಿಶ್ವನಾಥ್ ಶೆಟ್ಟಿ ವಿರುದ್ಧ ನ್ಯಾಯಾಂಗ ಬಡಾವಣೆಯಲ್ಲಿ ನಿವೇಶನ ಪಡೆದಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಶೇ.90ರಷ್ಟು ನ್ಯಾಯಾಧೀಶರು ಮನೆ, ಸೈಟ್ ಮಾಡಿಕೊಂಡಿದ್ದಾರೆ ಎಂದರು.  ಕನಕದಾಸ ಶಿಕ್ಷಣ ಸಮಿತಿಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಕಪ್ಪತ್ತಗುಡ್ಡ ಅರಣ್ಯ ಕುರಿತು ಸ್ಥಳೀಯರು ನೀಡಿರುವ ಮನವಿಯ ಬಗ್ಗೆ ಜಿಲ್ಲಾಧಿಕಾರಿಗಳು ಗಮನಕ್ಕೆ ತಂದಿದ್ದು, ಇದನ್ನು ಪರಿಶೀಲಿಸುವುದಾಗಿ ಹೇಳಿದ ಅವರು, ಈ ಅರಣ್ಯ ಪ್ರದೇಶಕ್ಕೆ ಸಂಬಂಧಿಸಿದಂತೆ ತೋಂಟಾದರ್ಯ ಶ್ರೀಗಳು ಸಲ್ಲಿಸಿರುವ ಮನವಿಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಸಂರಕ್ಷಿತ ಪ್ರದೇಶವೆಂದು ಘೋಷಿಸಲು ಗಡವು ಬೇಕಾಗುತ್ತದೆ ಎಂದರು.
ಕಳಸಾಬಂಡೂರಿ ಹೋರಾಟದ ವೇಳೆ ರೈತರನ್ನು ಗಡಿಪಾರು ಮಾಡಲಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಗೂಂಡಾಗಳನ್ನು ಮಾತ್ರ ಬಂಧಿಸಿ ಗಡಿಪಾರು ಮಾಡಲಾಗಿದೆಯೇ ಹೊರತು ರೈತರನಲ್ಲ. ರೈತರೇನು ಗೂಂಡಾಗಳೇ ಎಂದು ಸುದ್ದಿಗಾರರನ್ನೇ ಮರುಪ್ರಶ್ನಿಸಿದರು.

ಗೂಂಡಾಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆಯೇ ಹೊರತು ರೈತರ ವಿರುದ್ಧವಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.  ಹಾರಂಗಿ ಜಲಾಶಯ ಸಿವಿಲ್ ಟೆಂಡರ್‍ನ್ನು ನಿಯಮದ ಪ್ರಕಾರವೇ ನೀಡಲಾಗಿದೆ. ರಾತ್ರೋರಾತ್ರಿ ಯಾರಿಗೂ ಟೆಂಡರ್ ಕೊಟ್ಟಿಲ್ಲ ಎಂದು ಇದೇ ವೇಳೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.  ಈ ಬಾರಿಯ ಬಜೆಟ್ ಮಾರ್ಚ್‍ನಲ್ಲಿ ಮಂಡನೆ ಮಾಡುವುದಾಗಿ ಇದೇ ವೇಳೆ ತಿಳಿಸಿದರು.  ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ್, ಶಾಸಕರಾದ ಜಿ.ಎಸ್.ಪಾಟೀಲ, ಬಿ.ಆರ್.ಯಾವಗಲ್ಲ , ರಾಮಕೃಷ್ಣ ದೊಡ್ಡಮನಿ, ಬಸವರಾಜ ಹೊರಟ್ಟಿ , ರೇವಣ್ಣ , ತೋಂಟದಾರ್ಯ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಮತ್ತಿತರರು ಪಾಲ್ಗೊಂಡಿದ್ದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin