ಈಶ್ವರಪ್ಪನವರ ಸ್ಥಾನಕ್ಕೆ ನಾನು ರೆಡಿ ಎಂದ ಶಾಣಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

K.B.Shanappa-Shanappa

ಲಬುರಗಿ, ಜ.13- ವಿಧಾನ ಪರಿಷತ್ ಪ್ರತಿಪಕ್ಷದ ಸ್ಥಾನ ನಿರ್ವಹಿಸಲು ನಾನು ಗಟ್ಟಿಯಾಗಿದ್ದೇನೆ. ಆದರೆ, ಕೆ.ಎಸ್.ಈಶ್ವರಪ್ಪನವರ ಸ್ಥಾನ ಇನ್ನೂ ಖಾಲಿಯಾಗಿಲ್ಲವೆ ಎಂದು ತಮ್ಮದೇ ಶೈಲಿಯಲ್ಲಿ ಕೆ.ಬಿ.ಶಾಣಪ್ಪ ಇಂದು ಹೇಳಿದರು. ಸಂಗೊಳ್ಳಿ ಬ್ರಿಗೇಡ್ ಸಂಬಂಧ ಪಕ್ಷದಲ್ಲಿ ಉಂಟಾಗಿರುವ ಅಸಮಾಧಾನದ ಹಿನ್ನೆಲೆಯಲ್ಲಿ ಈಶ್ವರಪ್ಪನವರನ್ನು ಕೈಬಿಟ್ಟು ತಮ್ಮನ್ನು ಮೇಲ್ಮನೆ ಪ್ರತಿಪಕ್ಷದ ನಾಯಕರನ್ನಾಗಿ ನೇಮಕ ಮಾಡುತ್ತಾರೆ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಾಣಪ್ಪ, ವಿಪಕ್ಷ ನಾಯಕ ಸ್ಥಾನ ತುಂಬಲು ನಾನು ಗಟ್ಟಿಯಾಗಿದ್ದೇನೆ. ಆದರೆ, ಈಶ್ವರಪ್ಪನವರಿಂದ ಇನ್ನೂ ಸ್ಥಾನ ಖಾಲಿಯಾಗಿಲ್ಲ ಎಂದು ಮಾರ್ಮಿಕವಾಗಿ ಹೇಳಿದರು.

ನನಗಿಂತ ಆ ಸ್ಥಾನ ಹಿರಿಯವರಾದ ರಾಮಚಂದ್ರಗೌಡರಿಗೆ ಕೊಟ್ಟರೆ ಸೂಕ್ತ ಎಂದೆನಿಸುತ್ತದೆ. ಹಾಗೆಂದ ಮಾತ್ರಕ್ಕೆ ನಾನು ಜವಾಬ್ದಾರಿ ನಿರ್ವಹಿಸಲು ಹಿಂದೇಟು ಹಾಕುತ್ತೇನೆ ಎಂದಲ್ಲ. ನಾನೂ ರೆಡಿಯಾಗಿದ್ದೇನೆ ಎಂದು ಹೇಳಿದರು. ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಂಬಂಧ ಬಿಎಸ್‍ವೈ ಮತ್ತು ಈಶ್ವರಪ್ಪ ನಡುವೆ ಕಂದಕವೇರ್ಪಟ್ಟಿದೆ. ಬಿಎಸ್‍ವೈ ಕಟ್ಟೆಚ್ಚರದ ನಡುವೆಯೂ ಬ್ರಿಗೇಡ್ ಚಟುವಟಿಕೆಗಳು ಮುಂದುವರಿದಿವೆ. ಬ್ರಿಗೇಡ್ ಚಟುವಟಿಕೆ ನಡೆಸಬಾರದು. ಬ್ರಿಗೇಡ್‍ಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ಬ್ರಿಗೇಡ್‍ನಲ್ಲಿ ಬಿಜೆಪಿ ಕಾರ್ಯಕರ್ತರು ಪಾಲ್ಗೊಳ್ಳಬಾರದು ಎಂದು ಯಡಿಯೂರಪ್ಪ ಫರ್ಮಾನು ಹೊರಡಿಸಿದ್ದರ ನಡುವೆಯೂ ಇತ್ತೀಚೆಗೆ ಬೆಂಗಳೂರಿನ ಪದ್ಮನಾಭನಗರದಲ್ಲಿ ರಾಯಣ್ಣ ಬ್ರಿಗೇಡ್ ಸಮಾವೇಶದ ಪೂರ್ವಭಾವಿ ಸಭೆ ನಡೆಸಿದ್ದ ಬ್ರಿಗೇಡ್ ಪ್ರಧಾನ ಕಾರ್ಯದಶಿ ಮಾಜಿ ಮೇಯರ್ ವೆಂಕಟೇಶಮೂರ್ತಿಯವರನ್ನು ಅಮಾನತು ಮಾಡಲಾಗಿತ್ತು.

ನಿನ್ನೆಯಷ್ಟೆ ಮತ್ತೊಬ್ಬರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿತ್ತು. ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಮೇಲ್ಮನೆ ಸದಸ್ಯರ ಸಭೆಯನ್ನು ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಕರೆದಿದ್ದರು. ಮೇಲ್ಮನೆ ಪ್ರತಿಪಕ್ಷದ ನಾಯಕರಾಗಿರುವ ಈಶ್ವರಪ್ಪ ಅವರನ್ನು ಈ ಹುದ್ದೆಯಿಂದ ಕೈಬಿಟ್ಟು ಬೇರೆಯವರನ್ನು ನೇಮಕ ಮಾಡುವ ಬಗ್ಗೆಯೂ ಕೂಡ ಬಿಜೆಪಿಯಲ್ಲಿ ಪ್ರಯತ್ನಗಳು ನಡೆದಿವೆ. ನಿನ್ನೆ ಈ ಸ್ಥಾನಕ್ಕೆ ಕೆ.ಬಿ.ಶಾಣಪ್ಪ ಅವರನ್ನು ನೇಮಿಸುವುದು ಸೂಕ್ತ ಎಂಬ ಅಭಿಪ್ರಾಯಗಳು ಕೇಳಿಬಂದಿವೆ. ಯಡಿಯೂರಪ್ಪನವರ ಸರ್ವಾಧಿಕಾರಿ ಧೋರಣೆ ಖಂಡಿಸಿ ಹಲವು ಶಾಸಕರು ಪತ್ರ ಬರೆದಿರುವುದು ಕೂಡ ಬಹಿರಂಗವಾಗಿದೆ. ಯಡಿಯೂರಪ್ಪ, ಈಶ್ವರಪ್ಪ ನಡುವೆ ಪರಸ್ಪರ ಆರೋಪ-ಪ್ರತ್ಯಾರೋಪಗಳು ನಡೆದಿವೆ, ಬಹಿರಂಗ ಹೇಳಿಕೆಗಳು ಕೇಳಿಬಂದಿವೆ. ಮುಂದೇನಾಗುತ್ತದೆಯೋ ಕಾದು ನೋಡಬೇಕು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin