ವಿದೇಶಗಳಿಂದ ಕೊರಿಯರ್ ಮೂಲಕ ಕರೆನ್ಸಿ ಕಳ್ಳಸಾಗಣೆ : ಕಾಳಧನಿಕರ ಹೊಸ ತಂತ್ರ

ಈ ಸುದ್ದಿಯನ್ನು ಶೇರ್ ಮಾಡಿ

Corier

ಬೆಂಗಳೂರು, ಜ.13-ಗರಿಷ್ಠ ಮೌಲ್ಯದ ನೋಟುಗಳನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದ ನಂತರ ಕಾಳಧನಿಕರ ಹೊಸ ತಂತ್ರ-ಕುತಂತ್ರಗಳು ಬೆಳಕಿಗೆ ಬರುತ್ತಿರುವಾಗಲೇ, ವಿದೇಶಗಳಲ್ಲಿರುವ ಭಾರತೀಯರ ಐನಾತಿ ವಾಮಮಾರ್ಗವೂ ಬಹಿರಂಗಗೊಂಡಿದೆ. ಇತ್ತೀಚೆಗೆ ಬೆಂಗಳೂರು ವಿಮಾನನಿಲ್ದಾಣದಲ್ಲಿ 1.24 ಕೋಟಿ ರೂ. ಹಳೆ ನೋಟುಗಳು ಪತ್ತೆಯಾಗಿದ್ದು, ಈ ಜಾಲದ ಬೇರುಗಳನ್ನು ಪತ್ತೆ ಮಾಡುವ ಕಾರ್ಯಾಚರಣೆ ಚುರುಕುಗೊಂಡಿದೆ.  ದಾಖಲೆಪತ್ರಗಳು, ಉಡುಗೊರೆಗಳು, ಮೊಬೈಲ್ ಫೋನ್‍ಗಳು, ಇತ್ಯಾದಿ ವಸ್ತುಗಳ ಒಳಗೆ ನೋಟುಗಳನ್ನು ಇರಿಸಿ ಕೊರಿಯರ್ ಪಾರ್ಸಲ್‍ಗಳ ಮೂಲಕ ಬೆಂಗಳೂರಿಗೆ ಕಳ್ಳಸಾಗಣೆ ಮಾಡಲು ಹವಣಿಸಿದ್ದ ವ್ಯವಸ್ಥಿತ ಕುತಂತ್ರಗಳನ್ನು ಸೀಮಾ ಸುಂಕ (ಕಸ್ಟಮ್ಸ್) ಅಧಿಕಾರಿಗಳು ಪತ್ತೆ ಮಾಡಿದ್ದು, ಈ ಭಾಲದ ಮಾರ್ಗಗಳನ್ನು ಜಾಲಾಡುತ್ತಿದ್ದಾರೆ.

ವಿದೇಶಗಳಲ್ಲಿ ನೆಲೆಸಿರುವ ಭಾರತೀಯರು ತಮ್ಮಲ್ಲಿರುವ ಅಪಾರ ಹಳೆ ನೋಟುಗಳನ್ನು (ಬ್ಲಾಕ್ ಮನಿ) ಹೊಸ ನೋಟುಗಳಾಗಿ (ವೈಟ್ ಮನಿ) ಪರಿವರ್ತಿಸಲು ಕೊರಿಯರ್ ಮೂಲಕ ಕಳ್ಳಸಾಗಣೆ ಮಾಡುವ ದಂಧೆಗಳು ಬಯಲಾಗುತ್ತಿವೆ.  ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಸೀಮಾ ಸುಂಕ (ಕಸ್ಟಮ್ಸ್) ಅಧಿಕಾರಿಗಳು ಕಳೆದ ವಾರ ವಿವಿಧ ದೇಶಗಳಿಂದ ಬಂದಿದ್ದ 500 ಮತ್ತು 1,000 ರೂ. ಮುಖಬೆಲೆಯ 1,24,38,268 ರೂ.ಗಳಿದ್ದ ಕೊರಿಯರ್ ಪಾರ್ಸಲ್‍ಗಳನ್ನು ವಶಪಡಿಸಿಕೊಂಡಿದ್ದರು.

ಇದಲ್ಲದೇ, ದಾಖಲೆಪತ್ರಗಳು ಎಂಬ ಘೋಷಣೆಯೊಂದಿಗೆ ಬೆಂಗಳೂರಿಗೆ ಪಾರ್ಸಲ್ ಬಂದಿದ್ದ ವೆನಿಜುವೆಲಾದ 33,400 ಬೊಲಿವರ್ ಕರೆನ್ಸಿ (2.27 ಲಕ್ಷ ರೂ.ಗಳು) ಸಹ ಜಪ್ತಿ ಮಾಡಲಾಗಿದೆ.
ಬೆಂಗಳೂರಿನ ಕೊರಿಯರ್ ಘಟಕದ ಕಸ್ಟಮ್ಸ್ ಅಧಿಕಾರಿಗಳು ಸಂಶಯದ ಮೇಲೆ ಕೊರಿಯರ್ ಪಾರ್ಸಲ್‍ಗಳನ್ನು ತೀವ್ರ ತಪಾಸಣೆ ಮತ್ತು ಶೋಧಕ್ಕೆ ಒಳಪಡಿಸಿದ್ದಾಗ ಈ ಬೃಹತ್ ಮೊತ್ತದ ಹಳೆ ನೋಟುಗಳು ಪತ್ತೆಯಾದವು. ವಿವಿಧ ದೇಶಗಳಿಂದ ನೌಕೆಗಳ ಮೂಲಕ ಭಾರತಕ್ಕೆ ಕಳ್ಳಸಾಗಣೆ ಮೂಲಕ ಬಂದಿದ್ದ ಒಂದು ಭಾಗದ ಮಾಲುಗಳನ್ನು ವಿಮಾನಗಳಿಂದ ಬೆಂಗಳೂರಿಗೆ ರವಾನಿಸಲಾಗಿತ್ತು ಎಂದು ಜಂಟಿ ಕಸ್ಟಮ್ಸ್ ಆಯುಕ್ತ (ಕೊರಿಯರ್) ಹರ್ಷವರ್ಧನ್ ಉಮ್ರೆ ತಿಳಿಸಿದ್ದಾರೆ.

ದಾಖಲೆಪತ್ರಗಳು, ಉಡುಗೊರೆಗಳು, ಮೊಬೈಲ್ ಫೋನ್‍ಗಳು, ಇತ್ಯಾದಿ ವಸ್ತುಗಳ ಒಳಗೆ ನೋಟುಗಳನ್ನು ಕಾಣದಂತೆ ಇರಿಸಿ ಕೊರಿಯರ್ ಪಾರ್ಸಲ್‍ಗಳ ಮೂಲಕ ರವಾನಿಸಲಾಗಿತ್ತು. ಒಂದು ಪ್ರಕರಣದಲ್ಲಿ ಪುಸ್ತಕಗಳ ಹಾಳೆಗಳನ್ನು ಹಳೆ ನೋಟುಗಳ ಅಳತೆಗೆ ಕತ್ತರಿಸಿ ಅದರೊಳಗೆ ಕರೆನ್ಸಿಗಳನ್ನು ಇಟ್ಟು ಕಳ್ಳಸಾಗಣೆ ಮಾಡಲು ಯತ್ನಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.
ಕಾನೂನಿನ ಪ್ರಕಾರ, 5,000 ರೂ. ಮೌಲ್ಯದ ಭಾರತೀಯ ಮತ್ತು ವಿದೇಶಿ ಕರೆನ್ಸಿಗಳನ್ನು ಮಾತ್ರ ಅಂಚೆ ಮೂಲಕ ಆಮದು ಮಾಡಿಕೊಳ್ಳಲು ಅವಕಾಶವಿದೆ. ಇದಕ್ಕೆ ಮೇಲ್ಪಟ್ಟ ಮೊತ್ತಕ್ಕೆ ಆರ್‍ಬಿಐನಿಂದ ನಿರಾಕ್ಷೇಪಣಾ ಪತ್ರ (ಎನ್‍ಒಸಿ) ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin