ಶೂ, ಒಳಉಡುಪು, ನಾಯಿ ಟೀಶರ್ಟ್ ಮೇಲೆ ಭಾರತದ ಲಾಂಛನ ಚಿತ್ರಿಸಿ ಅಮೆರಿಕ ಉದ್ಧಟತನ

ಈ ಸುದ್ದಿಯನ್ನು ಶೇರ್ ಮಾಡಿ

indian flag

ನವದೆಹಲಿ, ಜ.14-ಭಾರತದ ತ್ರಿವರ್ಣ ಧ್ವಜವನ್ನು ಚಿತ್ರಿಸಿರುವ ಕಾಲೊರಸು (ಡೋರ್ ಮ್ಯಾಟ್) ಮಾರಾಟಕ್ಕಿಟ್ಟು ಛೀಮಾರಿ ಹಾಕಿಸಿಕೊಂಡು ಇ-ಕಾಮರ್ಸ್ ಸಂಸ್ಥೆ ಅಮೆಜಾನ್ ಕೆನಡಾ ವಿವಾದಕ್ಕೆ ಒಳಗಾಗಿತ್ತು. ಆದರೆ ಅಮೆಜಾನ್ ಕೆನಡಾ ಮಾತ್ರವಲ್ಲ ಇನ್ನೂ ಕೆಲವು ಸಂಸ್ಥೆಗಳು ಭಾರತ ರಾಷ್ಟ್ರ ಲಾಂಛನ ಮತ್ತು ಬಾವುಟವಿರುವ ಉತ್ಪನ್ನಗಳನ್ನು ಮಾರಾಟ ಮಾಡುತ್ತಿವೆ. ಇವುಗಳಲ್ಲಿ ಡಾಗ್‍ಕೋಟ್ (ನಾಯಿಮರಿ ಟೀಶರ್ಟ್), ಶೂ, ಶೂಲೇಸ್‍ಗಳು,ಅಂಡರ್ ವೇರ್  ಸೇರಿವೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ಭುಗಿಲೆದ್ದಿದೆ.  ಅಮೆಜಾನ್ ಅಮೆರಿಕ ಭಾರತದ ಬಾವುಟವಿರುವ ಶೂ, ಶೂಲೇಸ್‍ಗಳನ್ನು ಮಾರಾಟ ಮಾಡುತ್ತಿದ್ದರೆ, ಕೆಫೆ ಪ್ರೆಸ್ ವೆಬ್‍ಸೈಟ್‍ನಲ್ಲಿ ಭಾರತದ ರಾಷ್ಟ್ರಲಾಂಛನವನ್ನು ನಾಯಿಮರಿ ಟೀ-ಶರ್ಟ್ ಮೇಲೆ ಮುದ್ರಿಸಿರುವ ಉತ್ಪನ್ನಗಳಿವೆ.

ಲಾಸ್ ಏಂಜಲೀಸ್ ಮೂಲಕ ಎನ್‍ವೈಎಲ್‍ಎ ಕಂಪನಿಯು ಚುಕ್ಕಾ ಕಾನ್ವಾಸ್ ಶೋಗಳನ್ನು ಅಮೆಜಾನ್‍ನಲ್ಲಿ ಮಾರಾಟಕ್ಕಿಟ್ಟಿದೆ. ಈ ಶೂ ಬೆಲೆ 43.99 ಡಾಲರ್ (ಸುಮಾರು 3,000 ರೂ.ಗಳು). ಒವಲ್ ಚಾರ್ಮ್ ಡೆಕೊರೇಷನ್ ಎಂಬ ಉತ್ಪನ್ನದಲ್ಲೂ ಭಾರತದ ಧ್ವಜವಿರುವ ಶೂ ಲೇಸ್ ಲಬ್ಯವಿದೆ. ಇದರ ಬೆಲೆ 4.39 ಡಾಲರ್‍ಗಳು (300 ರೂ.ಗಳು). ಇದಲ್ಲದೇ ಕೆಫೆ ಪ್ರೆಸ್ ಎಂಬ ಸಂಸ್ಥೆಯು ಭಾರತದ ರಾಷ್ಟ್ರಲಾಂಛನವಾದ ನಾಲ್ಕು ಸಿಂಹಗಳ ಚಿತ್ರವನ್ನು ಡಾಗ್‍ಕೋಟ್ (ನಾಯಿಮರಿ ಟೀ-ಶರ್ಟ್ ಮೇಲೆ ಮುದ್ರಿಸಿ ಮಾರಾಟಕ್ಕಿಟ್ಟು ದರ್ಪ ತೋರಿಸಿವೆ. ಇಂಡಿಯನ್ ಕೋಟ್ ಆಫ್ ಆರ್ಮ್ ಸೀಲ್ ಡಾಗ್ ಟೀ-ಶರ್ಟ್ ಹೆಸರಿನ ಈ ಟೀ-ಶರ್ಟ್‍ಗೆ 19.99 ಡಾಲರ್ (1,362 ರೂ.ಗಳು) ದರ ನಿಗದಿಗೊಳಿಸಲಾಗಿದೆ.

ಕಾನೂನಿನ ಪ್ರಕಾರ, ಭಾರತೀಯ ರಾಷ್ಟ್ರ ಲಾಂಛನವನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಸಿಕೊಳ್ಳುವುದು ಅಥವಾ ಅದಕ್ಕೆ ಅಪಮಾನ ಮಾಡುವಂತೆ ಜಾಹೀರಾತುಗಳಲ್ಲಿ ಚಿತ್ರಿಸುವುದು ಕಾನೂನಿನ ಪ್ರಕಾರ ಅಪರಾಧ.  ಈ ಬಗ್ಗೆ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕವಾಗಿದ್ದು, ಪ್ರತಿಭಟನೆ ನಡೆಸಲಾಗುತ್ತಿದೆ. ಡೋರ್‍ಮ್ಯಾಟ್‍ಗೆ ಭಾರತ ಬಿಸಿ ಮುಟ್ಟಿಸುತ್ತಿದ್ದಂತೆ ಅಮೆಜಾನ್ ಬಾಲ ಮುದುರಿಕೊಂಡು ಕ್ಷಮೆ ಯಾಚಿಸಿತ್ತು. ಈ ಉತ್ಪನ್ನಗಳ ಬಗ್ಗೆಯೂ ಸರ್ಕಾರ ಗಂಭೀರವಾಗಿ ಪರಿಗಣಿಸಿ ತೀವ್ರ ಪ್ರತಿಭಟನೆ ವ್ಯಕ್ತಪಡಿಸಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin