ಬಿಜೆಪಿಗೆ ನಾನೇ ಮೂಲ, ನಾನೇ ಹೈಕಮಾಂಡ್ : ಈಶ್ವರಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

Eshwarapa-01

ಶಿವಮೊಗ್ಗ,ಜ.15- ನಾನೇ ಮೂಲ ಬಿಜೆಪಿ. ನನಗಿಂತ ಮೂಲ ಇನ್ಯಾರೂ ಇಲ್ಲ. ನನಗೆ ಯಾವ ಹೈಕಮಾಂಡೂ ಇಲ್ಲ. ನಾನೇ ಹೈಕಮಾಂಡ್… ಹೀಗೆ ಆಕ್ರೋಶ ಭರಿತರಾಗಿ ಮಾತನಾಡಿದ್ದು ಬೇರೆ ಯಾರೂ ಅಲ್ಲ ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ .  ಶಿವಮೊಗ್ಗದಲ್ಲಿ ಪತ್ರಕರ್ತರು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಕುರಿತಂತೆ ಕೇಳಿದ ಪ್ರಶ್ನೆಗಳಿಗೆ ಖಡಕ್ಕಾಗಿ ಉತ್ತರ ನೀಡಿದ ಈಶ್ವರಪ್ಪ , ಸಂಗೊಳ್ಳಿ ರಾಯಣ್ಣ ಈ ನಾಡಿಗಾಗಿ ಬಲಿದಾನ ಮಾಡಿದ ಮಹಾತ್ಯಾಗಿ. ಅವರ ಸ್ಮರಣೆಯ ಮೂಲಕ ಜನರಲ್ಲಿ ಇನ್ನಷ್ಟು ಸ್ಪೂರ್ತಿ ತುಂಬಿಸಲು ಅವರ ಬಲಿದಾನ ದಿನವನ್ನು ಆಚರಿಸಲಾಗುತ್ತಿದೆ. ಇದು ತಪ್ಪೇ? ಎಂದು ಪ್ರಶ್ನಿಸಿದರು.

ಸಂಗೊಳ್ಳಿ ರಾಯಣ್ಣ ಅವರಂತಹ ಒಬ್ಬ ದೇಶಭಕ್ತಿಯ ವ್ಯಕ್ತಿಯ ನೆನಪಿನಲ್ಲಿ ಬಲಿದಾನ ದಿನವನ್ನು ಆಚರಿಸುವುದು ಈ ನಾಡಿನ ಪ್ರತಿಯೊಬ್ಬರ ಕರ್ತವ್ಯ. ಇದಕ್ಕೆ ದೇಶಪ್ರೇಮ ಇರುವ ಯಾರೂ ಅಡ್ಡಿಪಡಿಸಬಾರದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿರುದ್ಧ ಪರೋಕ್ಷವಾಗಿ ಚಾಟಿ ಬೀಸಿದರು. ರಾಜ್ಯದ ಬಿಜೆಪಿ ನಾಯಕರಾದ ಬಿ.ಎಸ್.ಯಡಿಯೂರಪ್ಪ ಮತ್ತು ಕೆ.ಎಸ್.ಈಶ್ವರಪ್ಪ ಅವರು ಪರಸ್ಪರ ಕಿತ್ತಾಡುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ಸ್ವಯಂ ಸೇವಕ( ಆರ್‍ಎಸ್‍ಎಸ್) ಜನವರಿ 17ರಂದು ಸಂಧಾನ ಸಭೆ ಕರೆದಿರುವ ನಡುವೆಯೇ ಈಶ್ವರಪ್ಪ ಅವರು ಇಷ್ಟೊಂದು ಆಕ್ರೋಶಭರಿತರಾಗಿ ಮಾತನಾಡಿರುವುದು ಬಿಜೆಪಿ ವರಿಷ್ಠರಿಗೆ ಭಾರೀ ತಲೆನೋವಾಗಿ ಪರಿಣಮಿಸಿದೆ.

ಸಂಗೊಳ್ಳಿ ರಾಯಣ್ಣ ಅವರ ಸಂಸ್ಮರಣೆಯ ಕಾರ್ಯಕ್ರಮವನ್ನು ವಿವಿಧ ಮಠಾಧಿಪತಿಗಳು ಹಿರಿಯರ ಅನುಮತಿ ಮೇರೆಗೆ ಹಮ್ಮಿಕೊಳ್ಳಲಾಗಿದೆ. ಇಂತಹ ಒಂದು ಪವಿತ್ರ ಕಾರ್ಯಕ್ರಮಕ್ಕೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಎಂಬ ಹಣಪಟ್ಟಿ ಕಟ್ಟಿ ದೂಷಿಸುವ ಹಕ್ಕು ಯಾರಿಗೂ ಇಲ್ಲ ಎಂದು ಖಡಾಖಂಡಿತವಾಗಿ ಹೇಳಿದರು.   ನಾನೇ ಒರ್ಜಿನಲ್ ಬಿಜೆಪಿ. ನನಗೆ ಬಿಜೆಪಿ ತತ್ವ ಸಿದ್ಧಾಂತಗಳ ಬಗ್ಗೆ ಯಾರ ಪಾಠ ಅಗತ್ಯವಿಲ್ಲ. ನನಗೆ ನಾನೇ ಹೈಕಮಾಂಡ್. ಈ ವಿಷಯದಲ್ಲಿ ಯಾವ ಹೈಕಮಾಂಡೂ ಇಲ್ಲ ಎಂದು ಈಶ್ವರಪ್ಪ ಹೇಳಿದರು.

ಮೈಸೂರು ವರದಿ: ಈ ಮಧ್ಯೆ ಇಂದು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಮಾಜಿ ಸಚಿವ ಎಸ್.ಸುರೇಶ್‍ಕುಮಾರ್ ಅವರು, ಬಿ.ಎಸ್.ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವಣ ಈ ಮುಸುಕಿನ ಗುದ್ದಾಟ ನನಗೆ ಮತ್ತು ಪಕ್ಷದ ಕಾರ್ಯಕರ್ತರಿಗೆ ತೀವ್ರ ಬೇಸರವನ್ನುಂಟು ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.   ರಾಜ್ಯ ಬಿಜೆಪಿಯ ಪ್ರಮುಖ ನಾಯಕರೆನಿಸಿಕೊಂಡಿರುವ ಈ ಉಭಯ ನಾಯಕರ ಮಧ್ಯೆ ತಲೆದೋರಿರುವ ಬಿಕ್ಕಟ್ಟಿನ ಬಗ್ಗೆ ಪಕ್ಷದ ವೇದಿಕೆಯಲ್ಲೇ ಚರ್ಚಿಸಿ ಬಗೆಹರಿಸಿಕೊಳ್ಳುತ್ತೇವೆ. ಈಶ್ವರಪ್ಪನವರ ಆಪ್ತರನ್ನು ಪಕ್ಷದಿಂದ ಅಮಾನತು ಮಾಡಿರುವುದರ ಬಗ್ಗೆಯೂ ಪಕ್ಷದಲ್ಲೇ ಚರ್ಚಿಸುತ್ತೇವೆ. ಇದು ನಮ್ಮ ಪಕ್ಷದ ಆಂತರಿಕ ವಿಷಯ. ಇಬ್ಬರು ನಾಯಕರ ನಡುವೆ ಎದ್ದಿರುವ ಭಿನ್ನಾಭಿಪ್ರಾಯಗಳನ್ನು ಪಕ್ಷದ ವರಿಷ್ಠರು ಶೀಘ್ರದಲ್ಲೇ ಬಗೆಹರಿಸಲಿದ್ದಾರೆ ಎಂಬ ವಿಶ್ವಾಸವನ್ನು ಸುರೇಶ್‍ಕುಮಾರ್ ವ್ಯಕ್ತಪಡಿಸಿದರು.

ಖಾದಿ ಗ್ರಾಮೋದ್ಯೋಗ ಮಂಡಳಿಯ ಕ್ಯಾಲೆಂಡರ್‍ನಲ್ಲಿ ಗಾಂಧೀಜಿ ಬಿಟ್ಟು ಮೋದಿ ಭಾವಚಿತ್ರ ಹಾಕಿರುವ ಬಗ್ಗೆ ಕೇಳಲಾಗಿರುವ ಪ್ರಶ್ನೆಗೆ, ಈ ಕುರಿತಂತೆ ಈಗಾಗಲೇ ಪಕ್ಷದ ವತಿಯಿಂದ ಸ್ಪಷ್ಟೀಕರಣ ನೀಡಲಾಗಿದೆ ಎಂದರು.  ಯಾರೂ ಕೂಡ ಗಾಂಧೀಜಿಯವರ ಸ್ಥಾನ ತುಂಬಲಾರರು ಎಂದು ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin