ಯಡಿಯೂರಪ್ಪ-ಈಶ್ವರಪ್ಪ ನಡುವೆ ನಾಳೆ ಸಂಘ ಪರಿವಾರದ ನಾಯಕರಿಂದ ಸಂಧಾನ ಸಭೆ

ಈ ಸುದ್ದಿಯನ್ನು ಶೇರ್ ಮಾಡಿ

Yadiyurappa

ಬೆಂಗಳೂರು, ಜ.16-ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪ ನಡುವೆ ಶೀತಲಸಮರ ಉಂಟಾಗಿರುವ ಹಿನ್ನೆಲೆಯಲ್ಲಿ ನಾಳೆ ಸಂಘ ಪರಿವಾರದ ನಾಯಕರು ಸಂಧಾನ ಸಭೆ ನಡೆಯಲಿದೆ. ಚಾಮರಾಜಪೇಟೆಯ ಕೇಶವ ಕೃಪಾದಲ್ಲಿ ನಡೆಯಲಿರುವ ಸಂಧಾನ ಸಭೆಯಲ್ಲಿ ಆರ್‍ಎಸ್‍ಎಸ್ ವರಿಷ್ಠರಾದ ಭೃಂಗೇಶ್ ಬೆಂಡೆ, ಅರುಣ್‍ಕುಮಾರ್ ಹಾಗೂ ಸಂಘದ ಕೆಲ ಪ್ರಮುಖರು ಭಾಗವಹಿಸಲಿದ್ದಾರೆ.  ಸಭೆಗೆ ಹಾಜರಾಗುವಂತೆ ಈಶ್ವರಪ್ಪ ಮತ್ತು ಯಡಿಯೂರಪ್ಪ ಅವರಿಗೆ ಸೂಚನೆ ಕೊಡಲಾಗಿದ್ದು, ಉಭಯ ನಾಯಕರು ಹಾಜರಾಗಲು ಸಮ್ಮತಿಸಿದ್ದಾರೆ. ಆರ್‍ಎಸ್‍ಎಸ್ ನಾಯಕರ ಮುಂದುವರೆದ ಸಭೆ ಇದಾಗಿರುವುದರಿಂದ ಅಗತ್ಯವಿದ್ದಲ್ಲಿ ಮಾತ್ರ ಬಿಜೆಪಿ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಒಂದು ವೇಳೆ ಪಕ್ಷದ ವರಿಷ್ಠರೇ ಸಮಸ್ಯೆ ಪರಿಹರಿಸಿಕೊಳ್ಳುವುದಾಗಿ ಹೇಳಿದರೆ ಈಶ್ವರಪ್ಪ-ಯಡಿಯೂರಪ್ಪ ನಡುವಿನ ವೈಮನಸ್ಸು ಚರ್ಚೆಗೆ ಬರುವ ಸಾಧ್ಯತೆ ಇಲ್ಲ ಎಂದು ತಿಳಿದುಬಂದಿದೆ.

ಸಾಮಾನ್ಯವಾಗಿ ಸಂಘ ಪರಿವಾರದವರು ಅನಗತ್ಯವಾಗಿ ಮೂಗು ತೂರಿಸುವುದಾಗಿ, ಹಸ್ತಕ್ಷೇಪ ಇಲ್ಲವೆ ಮಧ್ಯಪ್ರವೇಶ ಮಾಡುವುದಿಲ್ಲ. ಬಿಜೆಪಿ ನಾಯಕರೇ ಮನವಿ ಮಾಡಿಕೊಂಡಾಗ ಸಂಧಾನ ನಡೆಸುವ ಪರಿಪಾಠ ಇದೆ ಎನ್ನುತ್ತಾರೆ ಪ್ರಮುಖರೊಬ್ಬರು. ನಾಳೆ ಆರ್‍ಎಸ್‍ಎಸ್ ಸಂಘಟನೆ ಕುರಿತಂತೆ ನಾಯಕರು ಚರ್ಚೆ ನಡೆಸುವರು. ಯಡಿಯೂರಪ್ಪ ಮತ್ತು ಈಶ್ವರಪ್ಪ ಸಭೆಗೆ ಹಾಜರಾಗುವಂತೆ ನಿರ್ದೇಶನ ನೀಡಲಾಗಿದೆ. ಉಭಯ ನಾಯಕರು ತಮ್ಮ ತಮ್ಮ ಪ್ರತಿಷ್ಠೆಗೆ ಅಂಟಿಕೊಂಡರೆ 19 ರಂದು ನಡೆಯಲಿರುವ ಕಾರ್ಯಕಾರಿಣಿ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ.

ಈಗಾಗಲೇ ಭಿನ್ನಮತೀಯ ಹತ್ತು ಪ್ರಮುಖರಿಗೆ ಸಭೆಗೆ ಹಾಜರಾಗುವಂತೆ ಸ್ವತಃ ಯಡಿಯೂರಪ್ಪ ನಿರ್ದೇಶಿಸಿದ್ದಾರೆ. ಪ್ರಮುಖವಾಗಿ ಈಶ್ವರಪ್ಪ, ಭಾನುಪ್ರಕಾಶ್, ಸೊಗಡುಶಿವಣ್ಣ, ನಿರ್ಮಲ್‍ಕುಮಾರ್ ಸುರಾನಾ ಸೇರಿದಂತೆ ಕೆಲವೇ ಕೆಲವು ನಾಯಕರು ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಇದೇ 21, 22 ರಂದು ಕಲಬುರಗಿಯಲ್ಲಿ ಬಿಜೆಪಿಯ ಕಾರ್ಯಕಾರಿಣಿ ಸಭೆ ನಡೆಯಲಿದೆ. 26ರಂದು ಈಶ್ವರಪ್ಪ ಕೂಡಲ ಸಂಗಮದಲ್ಲಿ ಸಂಗೊಳ್ಳಿರಾಯಣ್ಣ ಬ್ರಿಗೇಡ್‍ನ ಬೃಹತ್ ಸಮಾವೇಶ ನಡೆಸಲಿದ್ದಾರೆ. ಈ ಎಲ್ಲಾ ಸಾಧಕ-ಬಾಧಕಗಳ ಬಗ್ಗೆ ಕಾರ್ಯಕಾರಣಿ ಸಭೆಯಲ್ಲಿ ಚರ್ಚೆ ನಡೆಯಲಿದೆ.

ಇದಲ್ಲದೆ, ನಂಜನಗೂಡು ಮತ್ತು ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆ, ಅಭ್ಯರ್ಥಿ ಆಯ್ಕೆ, ಪ್ರಚಾರದ ವೈಖರಿ, ಪಂಚರಾಜ್ಯಗಳ ವಿಧಾನಸಭೆ ಚುನಾವಣೆಗೆ ತೆರಳುವುದು, ಪಕ್ಷ ಸಂಘಟನೆ, ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಸೇರಿದಂತೆ ಪ್ರಚಲಿತ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಲಾಗುವುದು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin