ಸೆಕ್ಸ್ ಸಿಡಿ ಸುಳಿಯಲ್ಲಿ ಸಿಕ್ಕಿಬಿದ್ದಿದ್ದ ಮೇಟಿ ಮತ್ತೆ ಸಚಿವ ಸಂಪುಟಕ್ಕೆ…?!

ಈ ಸುದ್ದಿಯನ್ನು ಶೇರ್ ಮಾಡಿ

Meti-01

ಬೆಂಗಳೂರು,ಜ.17- ರಾಸಲೀಲೆ ಪ್ರಕರಣದಲ್ಲಿ ರಾಜೀನಾಮೆ ನೀಡಿದ್ದ ಅಬಕಾರಿ ಸಚಿವ ಎಚ್.ವೈ.ಮೇಟಿ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲು ಒತ್ತಡ ಹೆಚ್ಚಾಗಿರುವುದು ಕೇಳಿಬಂದಿದೆ.   ಬಿಜಾಪುರ ಮತ್ತು ಬಾಗಲಕೋಟೆ ಕಾಂಗ್ರೆಸ್ ಹಾಗೂ ವಿವಿಧ ಸಮುದಾಯದ ಮುಖಂಡರು ಕಳೆದ ಎರಡು ದಿನಗಳಿಂದ ಮುಖ್ಯಮಂತ್ರಿಗಳ ಮೇಲೆ ಎಚ್.ವೈ.ಮೇಟಿಯವರನ್ನು ಸಂಪುಟಕ್ಕೆ ಪುನಃ ಸೇರಿಸಿಕೊಳ್ಳಬೇಕೆಂದು ಒತ್ತಡ ಹೇರಿದ್ದಾರೆ.  ರಾಸಲೀಲೆ ಪ್ರಕರಣದಲ್ಲಿ ಎಚ್.ವೈ.ಮೇಟಿಯವರನ್ನು ಉದ್ದೇಶಪೂರ್ವಕವಾಗಿ ಟ್ರಾಪ್ ಮಾಡಲಾಗಿದೆ. ಈ ಪ್ರಕರಣದಲ್ಲಿ ಬಲಿಪಶುವಾಗಿದ್ದಾರೆ. ಆರು ಬಾರಿ ಶಾಸಕರಾಗಿರುವ ಅವರ ಮೇಲೆ ಯಾವುದೇ ಕಪ್ಪುಚುಕ್ಕೆ ಇಲ್ಲ. ಉತ್ತರ ಕರ್ನಾಟಕ ಭಾಗದಲ್ಲಿ ಪ್ರಭಾವಿಯಾಗಿರುವ ಅವರು ಮತ್ತೆ ಸಂಪುಟಕ್ಕೆ ಸೇರ್ಪಡೆಯಾದರೆ ಪಕ್ಷಕ್ಕೆ ಅನುಕೂಲವಾಗುತ್ತದೆ ಎಂದು ಕುರುಬ ಹಾಗೂ ಲಿಂಗಾಯಿತ ಸಮುದಾಯದ ಮುಖಂಡರು ಮುಖ್ಯಮಂತ್ರಿಗಳ ಮೇಲೆ ಒತ್ತಡ ತಂದಿದ್ದಾರೆ ಎಂದು ತಿಳಿದುಬಂದಿದೆ.

ಎಚ್.ವೈ.ಮೇಟಿಯವರ ವಿರುದ್ಧ ರಾಜಕೀಯವಾಗಿ ತೇಜೋವಧೆ ಮಾಡಲು ಮತ್ತು ವೈಯಕ್ತಿಕವಾಗಿ ಕಳಂಕ ತರುವ ಉದ್ದೇಶದಿಂದ ಈ ಪ್ರಕರಣವನ್ನು ಬಳಸಿಕೊಳ್ಳಲಾಗಿದೆ. ಅವರ ಅಮಾಯಕತನವನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ. ಇದರಲ್ಲಿ ಯಾವುದೇ ಹುರುಳಿಲ್ಲ. ಹಾಗಾಗಿ ಅವರನ್ನು ಮತ್ತೆ ಸಂಪುಟಕ್ಕೆ ತೆಗೆದುಕೊಳ್ಳಬೇಕೆಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ.  ಅಬಕಾರಿ ಸಚಿವರಾಗಿದ್ದ ಎಚ್.ವೈ.ಮೇಟಿಯವರ ರಾಸಲೀಲೆ ಪ್ರಕರಣ ರಾಜ್ಯಾದ್ಯಂತ ಸುದ್ದಿ ಮಾಡಿತ್ತು. ಮಾಧ್ಯಮಗಳಲ್ಲಿ ಈ ಸುದ್ದಿ ಬಿತ್ತರವಾಗಿ ಎಚ್.ವೈ.ಮೇಟಿಯವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಪ್ರಕರಣದಲ್ಲಿ ಅವರ ಗನ್‍ಮ್ಯಾನ್, ಸಾಮಾಜಿಕ ಕಾರ್ಯಕರ್ತ ಹಾಗೂ ಇನ್ನಿಬ್ಬರ ಕೈವಾಡವಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಸರ್ಕಾರ ಸಿಐಡಿ ತನಿಖೆಗೆ ವಹಿಸಿತ್ತು.

ಪ್ರಕರಣದಲ್ಲಿ ಸಂತ್ರಸ್ತ ಮಹಿಳೆ ನನಗೆ ನಾಲ್ವರಿಂದ ಜೀವ ಬೆದರಿಕೆ ಇದೆ ಎಂದು ದೂರು ನೀಡಿದ್ದರು. ಆ ದೂರಿನ ಹಿನ್ನೆಲೆಯಲ್ಲಿ ಸಿಐಡಿ ತನಿಖೆ ಕೈಗೊಂಡಿತ್ತು. ಗನ್‍ಮ್ಯಾನ್ ಸೇರಿದಂತೆ ನಾಲ್ವರ ವಿರುದ್ದ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿತ್ತು.  ಈ ಆರೋಪದಲ್ಲಿ ಎಚ್.ವೈ.ಮೇಟಿ ಗನ್‍ಮ್ಯಾನ್ ಸೇರಿದಂತೆ ನಾಲ್ವರು ನಿರೀಕ್ಷಣಾ ಜಾಮೀನು ಪಡೆದಿದ್ದರು. ಎಚ್.ವೈ.ಮೇಟಿ ಪ್ರಕರಣದಿಂದ ರಾಜ್ಯ ಸರ್ಕಾರ ಸಾಕಷ್ಟು ಮುಜುಗರ ಅನುಭವಿಸಿತ್ತು. ಅದರಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ತೀವ್ರ ಮುಖಭಂಗವಾಗಿತ್ತು. ತಮ್ಮ ಪರಮಾಪ್ತ ಇಂಥ ಪ್ರಕರಣದಲ್ಲಿ ರಾಜೀನಾಮೆ ನೀಡಬೇಕಾದ ಪ್ರಸಂಗ ಬಂದೊದಗಿತಲ್ಲಾ ಎಂದು ಸಂದಿಗ್ದ ಪರಿಸ್ಥಿತಿಗೆ ಒಳಗಾಗಿದ್ದರು.

ರಾಜೀನಾಮೆ ಪಡೆದ ನಂತರ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿದ್ದರು. ಸಿಐಡಿ ಇನ್ನು ತನಿಖೆ ನಡೆಸುತ್ತಿರುವ ಬೆನ್ನಲ್ಲೆ ಎಚ್.ವೈ.ಮೇಟಿ ಅವರನ್ನು ಮತ್ತೆ ಸಂಪುಟಕ್ಕೆ ತೆಗೆದುಕೊಳ್ಳಬೇಕೆಂಬ ಒತ್ತಡ ಉತ್ತರ ಕರ್ನಾಟಕದ ಮುಖಂಡರಿಂದ ಕೇಳಿಬಂದಿದೆ.  ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ಯಾವುದೇ ಒತ್ತಡಕ್ಕೆ ಮಣಿದಿಲ್ಲ. ಸದ್ಯ ಅವರು ಉಪಚುನಾವಣೆ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ. ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪಚುನಾವಣೆಗಳು ಒಂದೇ ಬಾರಿ ಪ್ರಕಟವಾಗುವ ಸಾಧ್ಯತೆ ಇರುವುದರಿಂದ ಅಭ್ಯರ್ಥಿಗಳ ಆಯ್ಕೆ ಚುನಾವಣಾ ಗೆಲುವಿನ ತಂತ್ರದ ಬಗ್ಗೆ ಬ್ಯುಸಿಯಾಗಿದ್ದಾರೆ.

ಹಾಗಾಗಿ ಸಂಪುಟ ವಿಸ್ತರಣೆ ಬಗ್ಗೆ ಯಾವುದೇ ರೀತಿ ತಲೆಕೆಡಿಸಿಕೊಂಡಿಲ್ಲ. ಸಂಪುಟ ವಿಸ್ತರಣೆ ಸದ್ಯಕ್ಕಿಲ್ಲ ಎಂದು ಹೇಳಿದ್ದಾರೆ. ಆದರೆ ರಾಸಲೀಲೆ ಪ್ರಕರಣ ಜಗಜ್ಜಾಹೀರವಾಗಿ ರಾಜೀನಾಮೆ ನೀಡಿದ್ದ ಎಚ್.ವೈ.ಮೇಟಿಯವರನ್ನು ಮತ್ತೆ ಸಂಪುಟಕ್ಕೆ ತೆಗೆದುಕೊಳ್ಳಬೇಕು ಎಂದು ಒತ್ತಡ ಹೇರುತ್ತಿರುವುದರ ಹಿಂದಿನ ಮಸಲತ್ತು ಏನು ಎಂಬುದು ಅರ್ಥವಾಗುತ್ತಿಲ್ಲ.  ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಗೃಹ ಸಚಿವ ಕೆ.ಜೆ.ಜಾರ್ಜ್ ರಾಜೀನಾಮೆ ನೀಡಿದ್ದರು ಸಿಐಡಿಯಿಂದ ಕ್ಲೀನ್‍ಚಿಟ್ ಪಡೆದ ಮೇಲೆ ಮತ್ತೆ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲಾಯಿತು. ಅದೇ ರೀತಿ ಈ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ.  ಎಚ್.ವೈ.ಮೇಟಿಯವರಿಗೆ ಸಿಐಡಿ ಈ ಪ್ರಕರಣದಲ್ಲಿ ಕ್ಲೀನ್‍ಚೀಟ್ ನೀಡಿದರೆ ಮತ್ತೆ ಸಂಪುಟಕ್ಕೆ ತೆಗೆದುಕೊಳ್ಳುವ ಆಲೋಚನೆ ಮುಖ್ಯಮಂತ್ರಿಗಳಿಗೆ ಇದೆಯೇ, ಅದಕ್ಕೇನಾದರೂ ಈ ಒತ್ತಡ ತರಲಾಗುತ್ತಿದೆಯೇ? ಎಂಬ ಅನುಮಾನ ಮೂಡತೊಡಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin